Advertisement

ಅಭಿಜಾತ ಕನ್ನಡ ಪಠ್ಯವಾಚನ-ಅಧ್ಯಯನ ಶಿಬಿರಕ್ಕೆ ತೆರೆ

12:55 PM Sep 14, 2017 | |

ಬೀದರ: ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ನಗರದ ಕರ್ನಾಟಕ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿಜಾತ ಕನ್ನಡ ಪಠ್ಯವಾಚನ ಮತ್ತು ಅಧ್ಯಯನ ಶಿಬಿರಕ್ಕೆತೆರೆ ಬಿದ್ದಿದೆ.

Advertisement

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ| ಸೋಮನಾಥ ನುಚ್ಚಾ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿರುವುದು ಸಂತಸದ ಸಂಗತಿ. ಆದರೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಭಾರತೀಯ ಸಂಸ್ಥಾನ ವಿಭಾಗಕ್ಕೊಂದಾದರೂ ಪ್ರಾದೇಶಿಕ ಕಚೇರಿ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಇಡೀ ಕರ್ನಾಟಕದ ಕನ್ನಡ ಅಸ್ಮಿತತೆ ಹುಟ್ಟಿದ್ದು ಹೈ-ಕ ನೆಲದಲ್ಲಿ. ಮೊದಲ ಲಕ್ಷಣ ಕೃತಿ ಕವಿರಾಜಮಾರ್ಗ ಹುಟ್ಟಿದ ಭಾಗದಲ್ಲಿ ಕನ್ನಡ ಕಾವ್ಯ ಪರಂಪರೆ ಪ್ರಾಚೀನವೂ ಸಮೃದ್ಧವಾಗಿದೆ. ಮನುಷ್ಯ ಕುಲಂ ತಾನೊಂದೆ ವಲಂ ಎಂಬ ನುಡಿ ಮೂಲಕ ಸಾಮಾಜಿಕ ಸಾಮರಸ್ಯದ ವಿಶ್ವಮಾನವ
ಪ್ರಜ್ಞೆ ಮೂಡಿಸಿದ ಕವಿ ಪಂಪ ಎಂದು ಬಣ್ಣಿಸಿದರು.

ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರ ವಿಶೇಷಾಧಿಕಾರಿ ಡಾ| ರವೀಂದ್ರ ಗಬಾಡಿ ಮಾತನಾಡಿ, ಬೇರೆ ವಿಷಯಗಳಂತೆ ಕನ್ನಡ ಬೋಧನೆ ಸಾಧ್ಯವಿಲ್ಲ. ಆಕರ್ಷಕ ಶೈಲಿ, ಭಾಷಾ ಪ್ರಾವೀಣ್ಯ ಇದರಿಂದ ಮಾತ್ರ ಸಾಧ್ಯ. ಕಂಪ್ಯೂಟರ್‌ ತಂತ್ರಜ್ಞಾನದ ಪ್ರಭಾವದಿಂದ ಕನ್ನಡ ಆಸಕ್ತಿ ಕಡಿಮೆಯಾಗುತ್ತಿರುವುದು ದುರಂತದ ಸಂಗತಿ. ಕನ್ನಡ ಮಾಧ್ಯಮದವರೇ ಅತಿಹೆಚ್ಚಿನ ಸಾಧನೆ ಮಾಡಿದ್ದಾರೆ. ಮಾತೃಭಾಷೆಯಿಂದ ವಿಷಯ ಗ್ರಹಿಕೆ ಉತ್ತಮವಾಗಿರುತ್ತದೆ.
ಆದರೆ, ಇಂಗ್ಲಿಷ್‌ ವ್ಯಾಮೋಹ ಮಾತೃಭಾಷೆಗೆ ಅಡ್ಡಗೋಡೆಯಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಭಾಷೆ ಸಶಕ್ತಗೊಳಿಸಲು ಇಂಥ ಶಿಬಿರ ಅಗತ್ಯ ಎಂದು ಅಭಿಪ್ರಾಯಪಟ್ಟರು.

Advertisement

ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಹಳಗನ್ನಡ ಓದಿನಿಂದ ನಮ್ಮ ಶಬ್ದ ಭಂಡಾರ ಜ್ಞಾನವಿಕಾಸವಾಗುತ್ತದೆ ಎಂದು ಹೇಳಿದರು. ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. 

ಡಾ| ಬಸವರಾಜ ಬಲ್ಲೂರ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್‌. ಮನೋಹರ ನಿರೂಪಿಸಿದರು. ಕಸ್ತೂರಿ ಪಟಪಳ್ಳಿ ವಂದಿಸಿದರು.ಐದು ದಿನಗಳ ಶಿಬಿರದಲ್ಲಿ ವಿದೂಷಿ ಶಾರದಾ ಜಂಬಲದಿನ್ನಿ ಅವರ ಗಮಕ ವಾಚನ, ಡಾ| ಶಿವಗಂಗಾ ರುಮ್ಮಾರ ಪಂಪಭಾರತ ಓದು, ಡಾ| ವಾಸುದೇವ ಅಗ್ನಿಹೋತ್ರಿ ಅವರ ಕನ್ನಡ ಹಸ್ತಪ್ರತಿ ಪರಿಚಯ, ಡಾ| ಕಲ್ಯಾಣರಾವ ಜಿ. ಪಾಟೀಲ ಅವರ ಶಬ್ದಮಣಿ ದರ್ಪಣದ ಮಹತ್ವ,
ಡಾ|ನಾಗಾರ್ಜುನ ಹಾ.ಮಾ.ರ ಆದಿಪುರಾಣ-ಶಾಂತಿಪುರಾಣ, ಡಾ| ಮರಿಸ್ವಾಮಿ ಅವರ ಭಾಷಾವಿಜ್ಞಾನ, ಡಾ| ಹನುಮಾಕ್ಷಿ ಗೋಗಿ ಅವರ ಶಾಸನ ಸಾಹಿತ್ಯ, ಪ್ರೊ| ಶಂಭುಲಿಂಗ ಕಾಮಣ್ಣನವರ ಗದಾಯುದ್ಧ, ಡಾ| ಎಂ. ನಾಗರಾಜರ ಹರಿಹರನ ರಗಳೆ, ಪ್ರೊ| ಕೆ.ಎಸ್‌. ನಾಯಕ, ಡಾ| ವೈಜನಾಥ
ಭಂಡೆ ಅವರ ವಡ್ಡಾರಾಧನೆ, ಡಾ| ಚಂದ್ರಕಲಾ ಬಿದರಿ ಅವರ ಕವಿರಾಜಮಾರ್ಗ, ಡಾ| ವಿ.ಜಿ. ಪೂಜಾರ ಅವರ ಹರಿಹರನ ಗಿರಿಜಾಕಲ್ಯಾಣ, ಛಂದಸ್ಸು ಮೊದಲಾದ 17 ವಿಷಯಗಳು 14 ವಿದ್ವಾಂಸರಿಂದ ನಡೆದವು. ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಾವ್ಯಾಸಕ್ತರು
ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next