Advertisement

ಹೃದಯಕ್ಕೆ ಕಿಚ್ಚು ಹತ್ತಿಸಿದ “ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’ 

12:29 PM Dec 31, 2017 | |

ಮೈಸೂರು: ಕರುನಾಡಿನ ವೈಭವವನ್ನು ತೆರೆದಿಟ್ಟ ಜನಪದ ನೃತ್ಯ, ಸಂಗೀತ, ವೇಷಭೂಷಣ ಧರಿಸಿದ ಕಲಾವಿದರ ಆಕರ್ಷಣೆ ಜತೆಗೆ ಯುವ ಮನಸ್ಸುಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಪಾಶ್ಚಿಮಾತ್ಯ ಸಂಗೀತದ ಝೇಂಕಾರ, ಇವುಗಳ ನಡುವೆ ರೋಮಾಂಚನ ಎನಿಸುವ ಸಾಹಸ ಪ್ರದರ್ಶನ, ಕಣ್ಣಿಗೆ ಮುದ ನೀಡಿದ ಹಲವು ಕಾರ್ಯಕ್ರಮಗಳು. ಇಷ್ಟೆಲ್ಲಾ ಆಕರ್ಷಣೆಗಳಿಗೆ ಸಾಕ್ಷಿಯಾಗಿದ್ದು ನಗರದ ಡಿ.ದೇವರಾಜ ಅರಸು ರಸ್ತೆ.

Advertisement

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವಾಣಿಜ್ಯ ರಸ್ತೆಯಾದ ಡಿ.ದೇವರಾಜ ಅರಸು ರಸ್ತೆಯಲ್ಲಿ ಶನಿವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾಗಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಮೈಸೂರಿಗರ ಹೃದಯಕ್ಕೆ ಕಿಚ್ಚು ಹಚ್ಚಿತು.

ಮೈ ಕೊರೆಯುವ ಚಳಿಯ ನಡುವೆಯೇ ಆರಂಭಗೊಂಡ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ಭಾರತೀಯ ಪರಂಪರೆಯನ್ನು ಬಿಂಬಿಸುವ ಯೋಗದೊಂದಿಗೆ ಆರಂಭಗೊಂಡಿತು. ಇದಾದ ಕೆಲವೇ ಕ್ಷಣದಲ್ಲಿ ಹಲವು ಬಗೆಯ ಸಂಗೀತ, ನೃತ್ಯಗಳ ಕಲರವ.

2ನೇ ಬಾರಿಗೆ ನಡೆಯುತ್ತಿರುವ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ನ ಸವಿ ಅನುಭವಿಸುವ ಸಲುವಾಗಿ ಸಾವಿರಾರು ಯುವಜನರು ಬೆಳಗ್ಗೆಯೇ ಅರಸು ರಸ್ತೆಯಲ್ಲಿ ಬೀಡುಬಿಟ್ಟಿದ್ದರು. ಸಂಜೆ ನಡೆದ ವಾಸು ದೀಕ್ಷಿತ್‌ ಮತ್ತು ತಂಡದವರ ಸಂಗೀತ ಕಾರ್ಯಕ್ರಮವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಸದ್ದು ಮಾಡಿದ ನಗಾರಿ: ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಅಶೋಕಪುರಂನ ನಗಾರಿ ತಂಡದ ಪ್ರದರ್ಶನಕ್ಕೆ ಜನರು ಹುಚ್ಚೆದ್ದು ಕುಣಿದರು ಮಹಾರಾಜ ಕಾಲೇಜು ಹಾಗೂ ಹುಣಸೂರು ಕಾಲೇಜು ವಿದ್ಯಾರ್ಥಿಗಳ ಮಹದೇಶ್ವರ ಯುವ ಕಲಾ ತಂಡದ ಡೊಳ್ಳುಕುಣಿತ ಫೆಸ್ಟಿವಲ್‌ ಸಂಭ್ರಮವನ್ನು ಹೆಚ್ಚಿಸಿತು. ಇದರ ಜತೆಗೆ ದೇವರಾಜ ಅರಸು ರಸ್ತೆಯ ಉದ್ದಕ್ಕೂ ಜಾನಪದ ಗೊಂಬೆ, ಮಹಿಷ, ಯಕ್ಷಗಾನ ವೇಷಧಾರಿ ಗೊಂಬೆಗಳ ಮುಂದೆ ನಿಂತು ಯುವಕ-ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

Advertisement

ಸ್ಪೀಡ್‌ ಪೈಯಿಂಟಿಂಗ್‌: ಮತ್ತೂಂದೆಡೆ ಬೆಂಗಳೂರಿನ ಕಲಾವಿದ ಅರ್ಜುನ್‌ ತಮ್ಮ ಸ್ಪೀಡ್‌ ಪೈಟಿಂಗ್‌ ಮೂಲಕ ಹಲವು ಚಿತ್ರಗಳನ್ನು ಬಿಡಿಸಿ ಎಲ್ಲರ ಗಮನ ಸೆಳೆದರು. ಮೂಲತಃ ಮೈಸೂರಿನವರೇ ಆದ ಅರ್ಜುನ್‌, ವಿಲಾಸ್‌ ನಾಯಕ್‌ ಅವರ ಸ್ಪೀಡ್‌ ಪೈಂಟಿಂಗ್‌ನಿಂದ ಸ್ಪೂರ್ತಿ ಪಡೆದು ಸ್ಪೀಡ್‌ ಪೈಂಟಿಂಗ್‌ನಲ್ಲಿ ತೊಡಗಿಸಿಕೊಂಡರು. ಇನ್ನು ಈ ಪ್ರದರ್ಶನದಲ್ಲಿ ಕುಕ್ಕರಹಳ್ಳಿ ಕೆರೆಯ ಜೀವ ವೈವಿಧ್ಯತೆಯನ್ನು ಸಾರುವ 60 ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಸಾಹಸ ಕ್ರೀಡೆ: ಸಂಗೀತದ ಅಲೆಯಲ್ಲಿ ತೇಲುತ್ತಿದ್ದವರಿಗೆ ಸಾಹಸ ಕ್ರೀಡೆಗಳು ರೋಮಾಂಚನಕಾರಿ ಅನುಭವ ನೀಡಿದವು. 

ತಿಂಡಿ-ತಿನಿಸುಗಳ ಸವಿ: ಸಂಗೀತ ಪ್ರಿಯರನ್ನು ಕನ್ನಡ, ಹಿಂದಿ, ಇಂಗ್ಲಿಷ್‌ ಚಿತ್ರಗೀತೆಗಳು ಸೆಳೆದರೆ, ಆಹಾರ ಪ್ರಿಯರನ್ನು ಬಗೆಬಗೆಯ ಖಾದ್ಯಗಳು ಸೂರೆಗೊಂಡವು. ಹಟ್ಟಿ ಕಾಫಿ, ಡಾಮಿನೋಸ್‌ ಫಿಜಾ, ಚುರುಮುರಿ, ಬೇಲ್‌ಪುರಿ, ಮಸಾಲೆ ಪುರಿ, ಬಜ್ಜಿ-ಬೋಂಡ ಸೇರಿದಂತೆ ವೈವಿಧ್ಯಮಯ ಖಾದ್ಯಗಳು ಬಾಯಲ್ಲಿ ನೀರೂರಿಸಿದವು. 
 
ಆಕರ್ಷಿಸಿದ ಫ್ಯಾಷನ್‌ ಶೋ: ಸ್ಟ್ರೀಟ್‌ ಪೆಸ್ಟಿವಲ್‌ನಲ್ಲಿ ವಿಶ್ವಮಾನ್ಯ ಮೈಸೂರು ಸಿಲ್ಕ್ ಪ್ರಚಾರದ ಜತಗೆ ಸ್ವತ್ಛತಾ ಸರ್ವೇಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಫ್ಯಾಷನ್‌ ಶೋ ಎಲ್ಲರ ಗಮನ ಸೆಳೆಯಿತು. ಬೆಂಗಳೂರಿನ 10ಕ್ಕೂ ಹೆಚ್ಚು ರೂಪದರ್ಶಿಗಳು ಮೈಸೂರು ಸಿಲ್ಕ್ ಸೀರೆ ತೊಟ್ಟು ರ್‍ಯಾಂಪ್‌ ವಾಕ್‌ ಮಾಡಿ ರಂಜಿಸಿದರು.  

ಶಾಸಕ ವಾಸು ಚಾಲನೆ: ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ಗೆ ಶಾಸಕ ವಾಸು ಚಾಲನೆ ನೀಡಿದರು. ಈ ವೇಳೆ ಮೇಯರ್‌ ಎಂ.ಜೆ. ರವಿಕುಮಾರ್‌, ಜಿಲ್ಲಾಧಿಕಾರಿ ರಂದೀಪ್‌ ಡಿ., ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಸ್‌.ಪಿ.ಜನಾದ‌ನ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕ ಡಾ.ಕಾ.ರಾಮೇಶ್ವರಪ್ಪ ಇದ್ದರು. 

ಅರಸು ರಸ್ತೆಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕಾರು, ಬೈಕ್‌ಗಳಲ್ಲಿ ಬಂದಿದ್ದ ಜನರು ಸುಗಮ ಸಂಚಾರ ಸಾಧ್ಯವಾಗದೇ, ವಾಹನ ಚಾಲನೆ ಮಾಡಲು ಹೈರಾಣಾದರು.

Advertisement

Udayavani is now on Telegram. Click here to join our channel and stay updated with the latest news.

Next