ಮೈಸೂರು: ನಾಡಹಬ್ಬ ಮೈಸೂರು ದಸರೆಗೆ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯಿಂದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಸೇರಿದಂತೆ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಬಾರಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆಯೋಜಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೂ ಉತ್ಸುಕವಾಗಿರುವುದರಿಂದ ನವರಾತ್ರಿಯ ಸಂದರ್ಭದಲ್ಲಿ ಒಂದು ದಿನ ನಗರದ ಡಿ.ದೇವರಾಜ ಅರಸು ರಸ್ತೆಯನ್ನು ವಾಹನ ನಿಲುಗಡೆ ಮುಕ್ತಗೊಳಿಸಿ ಮೇಳ ಆಯೋಜಿಸಲು ನಿರ್ಣಯಿಸಲಾಯಿತು.
ಅಲ್ಲದೆ, ಈ ಬಾರಿ ದಸರೆಯ ಮಧ್ಯೆಯೇ ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯೂ ಬಂದಿರುವುದರಿಂದ ಸುಸ್ಥಿರ ಪ್ರವಾಸೋದ್ಯಮ ಶೀರ್ಷಿಕೆಯಡಿ ಮೈಸೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು. ಈ ಬಾರಿ ದಸರಾ ಗೋಲ್ಡ್‌ಕಾರ್ಡ್ ದರವನ್ನು 3999 ರೂ. ನಿಗದಿಪಡಿಸಿದ್ದು, ಕೆಎಸ್‌ಟಿಡಿಸಿ ಆಯೋಜಿಸುವ ಸುವರ್ಣರಥ(ಗೋಲ್ಡನ್ ಚಾರಿಯೇಟ್)ದಲ್ಲಿ ಬರುವ ಪ್ರವಾಸಿಗರಿಗಾಗಿ 75 ಗೋಲ್ಡ್‌ಕಾರ್ಡ್ ನೀಡುವಂತೆ ಕೆಎಸ್‌ಟಿಡಿಸಿ ವತಿಯಿಂದ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಯಿತು.
ಗಾಲಿಗಳ ಮೇಲೆ ಅರಮನೆ (ಪ್ಯಾಲೇಸ್ ಆನ್ ವೀಲ್ಸ್)ಗೆ ಈ ಬಾರಿ ಇನ್ನೂ 2 ವಸ್ತು ಸಂಗ್ರಹಾಲಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಬ್ಬರಿಗೆ 999ರೂ. ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ವಿವರಿಸಿದರು. ಮೈಸೂರು ನಗರ 22, ಗ್ರಾಮಾಂತರ 30 ಸೇರಿದಂತೆ ಮಂಡ್ಯ ಮತ್ತು ರಾಮನಗರ ಹೆದ್ದಾರಿಗಳಲ್ಲಿ 10 ಸೇರಿದಂತೆ ಒಟ್ಟು 62 ಹೋರ್ಡಿಂಗ್ಸ್‌ಗಳನ್ನು ಕನ್ನಡದಲ್ಲಿ ಹಾಕಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೆ.15ರಿಂದ ಮೈಸೂರು-ಚೆನ್ನೈ ಬದಲಿಗೆ, ಮೈಸೂರು ಕೇಂದ್ರವಾಗಿರಿಸಿಕೊಂಡು ಮುಂಬೈ, ಹೈದರಾಬಾದ್, ದಿಲ್ಲಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಏಕರೂಪದ ಟಿಕೆಟ್: ಒಂದುಕಡೆ ಟಿಕೆಟ್ ಖರೀದಿಸಿ ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ, ಕೆ.ಆರ್.ಎಸ್ ಹಾಗೂ ರಂಗನತಿಟ್ಟು ಪಕ್ಷಿಧಾಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಹೆಲಿರೈಡ್ಸ್: ಸೆ.15 ರಿಂದ ಅ.2ರವರೆಗೆ ಲಲಿತ್ ಮಹಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ರೈಡ್ ಆಯೋಜಿಸಲಿದ್ದು, ಪವನ್‌ಹನ್ಸ್ ಮತ್ತು ಚೆಪ್ಸ್‌ಆನ್ ಏವಿಯೇಷನ್ ಕಂಪನಿಗಳು ಮುಂದೆ ಬಂದಿವೆ. ಹೆಲಿರೈಡ್ ಮಾಡುವವರಿಗೆ 2300 ರೂ. ದರ ನಿಗದಿಪಡಿಸಲಾಗಿದೆ. ಇದೇ ವೇಳೆ ಮೈಸೂರಿನಲ್ಲಿ ಶಾಶ್ವತವಾಗಿ ಪ್ಯಾರಾ ಗೈಡ್ಲಿಂಗ್, ಸ್ಕೈಡೈವಿಂಗ್, ಬಿಸಿಗಾಳಿ ಬಲೂನ್ ಹಾರಾಟ ಮೊದಲಾದವನ್ನು ಆಯೋಜಿಸುವ ಬಗ್ಗೆಯೂ ಚರ್ಚೆ ನಡೆಯಿತು. ಕೆಎಸ್‌ಟಿಡಿಸಿ ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಎನ್.ಮಂಜುಳ, ಉಪ ನಿರ್ದೇಶಕ ಎಚ್.ಪಿ.ಜನಾರ್ದನ್ ಸಭೆಯಲ್ಲಿ ಇದ್ದರು.