Advertisement

ಬದುಕಿನ ಅಂಗಡಿಯಲಿ ತೆರೆದ ವಸ್ತು ನಾನೂ…

08:20 PM Jan 27, 2020 | Lakshmi GovindaRaj |

ನಮ್ಮ ಮಾಲೀಕನಿಗೆ ವಯಸ್ಸಾಗಿತ್ತು. ಅವರು ವ್ಯವಹಾರ ಕುದುರಿಸುವುದರಲ್ಲಿ, ನಾನು ಪತ್ರ ರಚನೆಯಲ್ಲಿ ನಿಪುಣರು. ಇಬ್ಬರ ಕಾಂಬಿನೇಷನ್‌ನಿಂದ ಆದಾಯ ಹೆಚ್ಚಾಯಿತು. ಸ್ವತಂತ್ರವಾಗಿ ಕೆಲಸ ಮಾಡುವ ಉಮೇದು ಹುಟ್ಟಿ ಅಂಗಡಿ ಹಾಕಿದೆ.

Advertisement

ನಾನು ಓದುತ್ತಿರುವಾಗಲೇ ಪಾರ್ಟ್‌ ಟೈಂ ಉದ್ಯೋಗ ಮಾಡುತ್ತಿದ್ದೆ ! ಅದು ಹೇಗೆಂದರೆ, ನಮ್ಮ ಮನೆಯಲ್ಲೇ ಪುಟ್ಟದಾದ ಅಂಗಡಿ ಇತ್ತು. ಅದನ್ನು ಅಮ್ಮನ ಜೊತೆ ನೋಡಿಕೊಳ್ಳುವುದು, ಖಾಲಿಯಾದ ಸರಕು ತಂದು ತುಂಬಿಸುವುದು ನಡದೇ ಇತ್ತು. ಹಾಗಾಗಿ, ಎಸ್‌ಎಸ್‌ಎಲ್‌ಸಿ ಮುಗಿಸಿದ ಮೇಲೆ ದೊಡ್ಡ ದಿನಸಿ ಅಂಗಡಿ ಇಟ್ಟು ಬಿಡೋಣ ಅನ್ನೋದು ಐದನೇ ತರಗತಿಯಲ್ಲಿ ಇದ್ದಾಗ ಚಿಗುರೊಡೆದ ಪ್ರೊಫೆಷನ್‌ ಕನಸು.

ಹಾಗಂತ, ಇದೇನು ಶಾಶ್ವತವಾಗಿರಲಿಲ್ಲ. ಆರಂಭದಲ್ಲಿ ಅಣ್ಣನ ಉಸ್ತುವಾರಿಯಲ್ಲಿ ಅಂಗಡಿ ಇತ್ತು. ನಮ್ಮ ತಂದೆ ಇದ್ದಕ್ಕಿದ್ದ ಹಾಗೇ ಹಾಸಿಗೆ ಹಿಡಿದು, ಇಹಲೋಕ ತ್ಯಜಿಸಿದ ಮೇಲೆ ಅಂಗಡಿಗೆ ಸರಕು-ಸರಂಜಾಮನ್ನು ತಂದು ಹಾಕುವ ಜವಾಬ್ದಾರಿ ನನ್ನ ತಲೆಯ ಮೇಲೆ ಬಿತ್ತು. ಹೀಗೆ ಮಾಡಬೇಕು ಅಂದರೆ, ಹೂಡಿಕೆ-ಲಾಭದ ಪಟ್ಟಿ ನೋಡಬೇಕು. ಎಲ್ಲವನ್ನೂ ಮೆಲ್ಲ ಮೆಲ್ಲಗೆ ಕಲಿತೆ. ಬೇಡಿಕೆಗೆ ಅನುಗುಣವಾಗಿ ಸರಂಜಾಮುಗಳನ್ನು ತಂದು ಹಾಕುವ ಕಲೆಯೂ ತಿಳಿಯಿತು.

ಕೇವಲ ಇದೊಂದನ್ನೇ ಮಾಡಿಕೊಂಡಿದ್ದರೆ ಸಾಲದು ಅಂತ ಎಸ್‌ಎಸ್‌ಎಲ್‌ಸಿಯಲ್ಲಿ ಇದ್ದಾಗಲೇ ಟೈಪಿಂಗ್‌ಗೆ ಸೇರಿದೆ. ಅಲ್ಲಿ ಕಲಿಯುತ್ತಲೇ ಅದೇ ಇನ್‌ಸ್ಟಿಟ್ಯೂಟ್‌ನಲ್ಲಿ ಪಾರ್ಟ್‌ ಟೈಂ ಕೆಲಸ ಶುರುಮಾಡಿದೆ. ಕಂಪ್ಯೂಟರ್‌ ಬಂದ ಮೇಲೆ, ಟೈಪಿಂಗ್‌ ಕಲಿಕೆಯನ್ನು ಕ್ಯಾರೆ ಅನ್ನೋರು ಕಡಿಮೆ ಆದರು. ಮುಂದೇನು ಮಾಡಬೇಕೆಂದು ತಿಳಿಯದೇ, ಮನೆ ಹತ್ತಿರವಿದ್ದ ಟಿ.ವಿ ರಿಪೇರಿ ಅಂಗಡಿಗೆ ಸೇರಿಕೊಂಡೆ. ಎರಡು ವರ್ಷಗಳಲ್ಲಿ ರೇಡಿಯೋ, ಟಿ.ವಿಗಳ ರಿಪೇರಿ ಮಾಡುವುದು ತಿಳಿಯಿತು. ಅಷ್ಟರಲ್ಲಿ ಮದುವೆಯ ವಯಸ್ಸು ಆಯ್ತು.

ಆಗ ನಮ್ಮ ತಾಯಿ, ಹುಡುಗಿ ಹುಡುಕುವುದಕ್ಕೆ ಹೋದಾಗಲೇ ಕೆಲಸದ ಬೆಲೆ ತಿಳಿದದ್ದು. ಹುಡುಗ ಏನು ಕೆಲಸ ಮಾಡ್ತಾನೆ? ಎಂದು ಗಂಡನ್ನು ಅಳೆಯುವ ಬಹಳ ಸರಳ, ಸುಂದರ ಪ್ರಶ್ನೆ ಕೇಳಿದಾಗೆಲ್ಲ ಉತ್ತರಿಸಲು ಅಕ್ಷರಶಃ ತಡಕಾಡುವಂತಾಗುತ್ತಿತ್ತು. ಆಗ ನನಗೆ ಹೊಳೆದದ್ದು, ಏನಾದರೂ ಮಾಡಿ ಹಣ ಸಂಪಾದನೆ ಮಾಡಬೇಕು. ಹೀಗಾಗಿ, ನಮ್ಮ ತಂದೆ ಮಾಡುತ್ತಿದ್ದ ಚಿನ್ನ-ಬೆಳ್ಳಿಯ ಕೆಲಸದ‌ಲ್ಲಿ ತೊಡಗಿಕೊಳ್ಳಲು ಮುಂದಾದೆ. ಅಪ್ಪನ ಚಿನ್ನ ಕುಟ್ಟುವ, ಪಾಲಿಷ್‌ ಮಾಡುವ ವಸ್ತುಗಳನ್ನು ತೆಗೆದು ಕೆಲಸ ಶುರು ಮಾಡಿಕೊಂಡೆ.

Advertisement

ಒಂದಷ್ಟು ಆರ್ಡರ್‌ಗಳು ಬಂದವು. ಅಷ್ಟೊತ್ತಿಗೆ ಊರಲ್ಲಿ ಒಡವೆ ಅಂಗಡಿಗಳು, ಆಕರ್ಷಕ ಡಿಸ್ಕೌಂಟ್‌ಗಳ ಆಮಿಷಗಳೂ ಶುರುವಾದವು. ಹೀಗಾಗಿ, ನನ್ನ ಗುರಿ ಬದಲಿಸಬೇಕಿತ್ತು. ಆಗ ಕಂಡದ್ದು ರಿಯಲ್‌ಎಸ್ಟೇಟ್‌. ನನಗಂತೂ ಸುಳ್ಳು ಹೇಳಿ, ಸೈಟು-ಜಮೀನು ವಹಿವಾಟು ಮಾಡಿಸುವ ಚಾಕಚಕ್ಯತೆ ಇರಲಿಲ್ಲ. ಆದರೆ, ಬರವಣಿಗೆ ಗೊತ್ತಿತ್ತು. ಹೀಗಾಗಿ, ಯಲಹಂಕದ ಸ್ಟಾಂಪ್‌ವೆಂಡರ್‌ ಹತ್ತಿರ ಕೆಲಸಕ್ಕೆ ಸೇರಿದೆ. ಪ್ರತಿದಿನ ಅವರು ಹೇಳಿದ ಪತ್ರಗಳನ್ನು ತಪ್ಪಿಲ್ಲದೇ ಟೈಪು ಮಾಡುವುದು.

ಹಳೇ ಟೈಪಿಂಗ್‌ ಕಲಿಕೆ ಎಲ್ಲವೂ ಆಗ ನೆರವಿಗೆ ಬಂತು. ದಿನಕ್ಕೆ 20-30ಪತ್ರಗಳನ್ನು ಟೈಪು ಮಾಡುತ್ತಿದ್ದೆ. ತಿಂಗಳಿಗೆ 15 ಸಾವಿರ ಸಂಬಳ ಸಿಕ್ಕಿತು. ತಪ್ಪುಗಳನ್ನು ಹಿಡಿದು ಸರಿ ಮಾಡತೊಡಗಿದೆ. ಪಾರ್ಟಿಗಳನ್ನು ಕರೆದುಕೊಂಡು ಬರಲು ಶುರುಮಾಡಿದೆ. ಸಣ್ಣಗೆ ಕಮೀಷನ್‌ ಬೇರೆ ಸಿಗುತ್ತಿತ್ತು. ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣವಾದದ್ದರ ಪರಿಣಾಮವೋ ಏನೋ ರಿಯಲ್‌ ಎಸ್ಟೇಟ್‌ ಬೂಮ್‌ ಜೋರಾಯಿತು. ನಾಲೆದು ವರ್ಷ ದುಡಿದು ದುಡಿದು ಹಣ ಗುಡ್ಡೆ ಹಾಕಿದೆ. ಬೆಳಗ್ಗೆ 7 ಕ್ಕೆ ಮನೆ ಬಿಟ್ಟರೆ, ರಾತ್ರಿ 11 ಕ್ಕೆ ಮನೆ ಸೇರುತ್ತಿದ್ದೆ.

ಸ್ವತಂತ್ರವಾಗಿ ಕೆಲಸ ಮಾಡುವ ಉಮೇದು ಹುಟ್ಟಿ, ನೆಲಮಂಗಲ ತಾಲೂಕ್‌ ಆಫೀಸಿನ ಮುಂದೆ ಅಂಗಡಿ ಹಾಕಿದೆ. ಅದ್ಬುತ ಬ್ಯುಸಿನೆಸ್‌. ಬರೀ ಪತ್ರ ಬರೆಯೋದು ನನ್ನ ಕೆಲಸ. ಹೀಗೆ, 10 ವರ್ಷಗಳ ಕಾಲ ದುಡಿದೆ. ಅಮ್ಮನಿಗೆ, ಹೆಂಡತಿಗೆ ಆಭರಣ, ಸೈಟು ಎಲ್ಲ ಮಾಡಿದೆ. ಆದರೆ, ಈಗ ಆನ್‌ಲೈನ್‌ ಪರಿಣಾಮ, ಪತ್ರ ಬರಿಯುವ ಬ್ಯುಸಿನೆಸ್‌ ಬೀಳುತ್ತಿದೆ. ಹಾಗಂತ ಪ್ರೊಫೆಷನ್‌ ಬಗ್ಗೆ ಉಡಾಫೆ ಇಲ್ಲ. ನನ್ನ ಬದುಕನ್ನು ಬದಲಿಸಿದ್ದು ಈ ಪ್ರೊಫೆಷನ್‌ ಅನ್ನೋ ಹೆಮ್ಮೆ ಇದೆ. ಮನೆಯಲ್ಲಿ ಅಂಗಡಿಯೂ ಇದೆ. ನಿವೃತ್ತಿಯ ಸಮಯದಲ್ಲಿ ಅದೇ ನನಗೆ ಸಹಾಯ ಮಾಡೋದು ಅನ್ನೋ ಸತ್ಯವೂ ತಿಳಿದಿದೆ.

* ಅನಿಕೇತ ವರ್ಮ, ದೊಡ್ಡಬಳ್ಳಾಪುರ

Advertisement

Udayavani is now on Telegram. Click here to join our channel and stay updated with the latest news.

Next