Advertisement

ಕಲಾಪ ಕದನ; ನಂಬಿಕೆ ದ್ರೋಹ, ಕರ್ಣ, ದುರ್ಯೋಧನ; BSY v/s HDK

01:28 PM Jul 09, 2018 | Sharanya Alva |

ಬೆಂಗಳೂರು: ನಾನೇನು ನಂಬಿಕೆ ದ್ರೋಹ ಮಾಡಿಲ್ಲ. ವಚನ ಭ್ರಷ್ಟನೂ ಅಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರೆ, ಮತ್ತೊಂದೆಡೆ ವಿಶ್ವಾಸದ್ರೋಹ, ವಚನ ಭ್ರಷ್ಟತೆ ನಿಮ್ಮ ರಕ್ತದಲ್ಲಿಯೇ ಇದೆ ಎಂಬ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪನವರ ಹೇಳಿಕೆ ವಿಧಾನಸಭಾ ಕಲಾಪದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

Advertisement

ಸೋಮವಾರ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತ ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡುತ್ತಾ ಮಾತನಾಡಿದ ಕುಮಾರಸ್ವಾಮಿ, ನಾನು ಸಾಲಮನ್ನಾ ವಿಚಾರದಲ್ಲಿ ರೈತರಿಗೆ ಮೋಸ ಮಾಡಲ್ಲ. ವಿಶ್ವಾಸದ್ರೋಹನೂ ಎಸಗಲ್ಲ ಎಂದರು.

ಸಾಂದರ್ಭಿಕ ಶಿಶು ಎಂಬ ಬಿಜೆಪಿ ಆರೋಪಕ್ಕೆ ಮಹಾಭಾರತದ ಪ್ರಸಂಗ ಪ್ರಸ್ತಾಪಿಸಿದರು. ಮಹಾಭಾರತದಲ್ಲಿ ಕರ್ಣನೂ ಕೂಡಾ ಸಾಂದರ್ಭಿಕ ಶಿಶು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು. ಇದಕ್ಕೆ ಅಪ್ಪ, ಅಮ್ಮ ಇಲ್ಲ ಎಂಬುದಾಗಿ ಟೀಕಿಸಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳೇ ಸಾಂದರ್ಭಿಕ ಶಿಶುಗೆ ಅಪ್ಪ, ಅಮ್ಮ ಎಂದು ತಿರುಗೇಟು ನೀಡಿದರು.

ಮಹಾಭಾರತದಲ್ಲಿ ದುರ್ಯೋಧನ ಖಳನಾಯಕನಲ್ಲ:

ಧುರ್ಯೋಧನ ಕೆಲವು ವಿಚಾರದಲ್ಲಿ ಒಳ್ಳೇ ವ್ಯಕ್ತಿ. ದ್ರೋಣಾಚಾರ್ಯ ನೀನು ಕ್ಷತ್ರಿಯನಲ್ಲ ಎಂದು ಕರ್ಣನಿಗೆ ಹೇಳಿದಾಗ.ಒಬ್ಬ ಮನುಷ್ಯನಿಗೆ ಅರ್ಹತೆ ಇದ್ದರೂ, ಜಾತಿಯ ಆಧಾರದ ಮೇಲೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅಂತಹ ಸಂದರ್ಭದಲ್ಲಿ ಕರ್ಣನಿಗೆ ಪಟ್ಟ ಕಟ್ಟಿದ್ದು ದುರ್ಯೋಧನ. ದ್ರೌಪತಿ ವಿಚಾರದಲ್ಲಿ ದುರ್ಯೋಧನ ವಿಲನ್, ಕರ್ಣನ ವಿಚಾರದಲ್ಲಿ ಆತ ಹೀರೋ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

Advertisement

ಕುಮಾರಸ್ವಾಮಿಗೆ ಬಿಎಸ್ ವೈ ತಿರುಗೇಟು, ಕೋಲಾಹಲ:

ವಚನಭ್ರಷ್ಟನಲ್ಲ, ಅಧಿಕಾರಕ್ಕಾಗಿ ನಾನೇನು ನಿಮ್ಮ ಮನೆಗೆ ಬಾಗಿಲಿಗೆ ಬಂದಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಉತ್ತರ ನೀಡಿದ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ, ಅಂದು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು, ಬೆನ್ನಿಗೆ ಚೂರಿ ಹಾಕಿ ನಮ್ಮ (ಬಿಜೆಪಿ) ಜೊತೆ ಕೈಜೋಡಿಸಿದವರು ನೀವು(ಕುಮಾರಸ್ವಾಮಿ). ನೀವು ಕೇವಲ ಕಾಂಗ್ರೆಸ್ ಗೆ ಮಾತ್ರವಲ್ಲ, ಬಿಜೆಪಿಗೂ ನಂಬಿಕೆ ದ್ರೋಹ ಮಾಡಿದ್ದೀರಿ. ನಂಬಿಕೆದ್ರೋಹ ಎಂಬುದು ನಿಮಗೆ ರಕ್ತಗತವಾಗಿದೆ ಎಂದರು.

ಅಲ್ಲದೇ ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ದ್ರೋಹ ಎಸಗಿದ್ದರಿಂದಲೇ ನೋವಿನಿಂದಾಗಿ ಧರಂಸಿಂಗ್ ಅವರು ನಿಧನರಾಗಿದ್ದರು ಎಂಬುದಾಗಿ ಬಿಎಸ್ ವೈ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು, ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಧರಂಸಿಂಗ್ ಅವರು ಅಧಿಕಾರ ಕಳೆದುಕೊಂಡ ಮೇಲೂ ಸುಮಾರು 10 ವರ್ಷಗಳ ಕಾಲ ಬದುಕಿದ್ದರು. ಅವರು ಅನಾರೋಗ್ಯದಿಂದ ಕಳೆದ ವರ್ಷ ನಮ್ಮನ್ನಗಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ತದನಂತರ ರಕ್ತಗತವಾಗಿದೆ ಎಂಬ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ನಡುವೆ ತೀವ್ರ ವಾಕ್ಸಮರ ನಡೆಯಿತು. ಎಲುಬಿಲ್ಲದ ನಾಲಗೆ ಅಂತ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕುಮಾರಸ್ವಾಮಿ ಹೇಳಿದಾಗ, ಯಡಿಯೂಪ್ಪನವರು ಕೂಡಾ ನಿಮ್ಮದು ಎಲುಬಿಲ್ಲದ ನಾಲಗೆ, ನಾವು ಅವಕಾಶ ಕೊಡದಿದ್ದರೆ ನಿಮ್ಮ ಜೀವ ಮಾನದಲ್ಲಿ ಸಿಎಂ ಆಗುತ್ತಿರಲಿಲ್ಲ ಎಂದರು. ಆಗ ಸದನದಲ್ಲಿ ಕೋಲಾಹಲ, ಗದ್ದಲ ಏರ್ಪಟ್ಟಿತ್ತು. ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next