Advertisement

ಇಂದಿನಿಂದ ರೈಲ್ವೆ ಟರ್ಮಿನಲ್‌ ಸೇವೆಗೆ ಮುಕ್ತ; ನೀರಿಗಾಗಿಯೇ 2.50 ಲಕ್ಷ ರೂ. ವೆಚ್ಚ

01:16 PM Jun 06, 2022 | Team Udayavani |

ಬೆಂಗಳೂರು: ನಗರದಲ್ಲಿ ಸೋಮವಾರದಿಂದ ಆರಂಭಗೊಳ್ಳುತ್ತಿರುವ ಬೈಯಪ್ಪನಹಳ್ಳಿ ಮೂರನೇ ರೈಲ್ವೆ ಕೋಚಿಂಗ್‌ ಟರ್ಮಿನಲ್‌ಗೆ ನಿತ್ಯ ಕೇವಲ ನೀರಿಗಾಗಿಯೇ 2 ರಿಂದ 2.50 ಲಕ್ಷ ರೂ. ಸುರಿಯ ಬೇಕಾಗುತ್ತದೆ!

Advertisement

ಅತಿ ಹೆಚ್ಚು ದಟ್ಟಣೆ ಇರುವ ರೈಲ್ವೆ ಮಾರ್ಗ ಮತ್ತು ನಿಲ್ದಾಣಗಳಲ್ಲಿ ಬಹುನಿರೀಕ್ಷಿತ ಬೈಯಪ್ಪನಹಳ್ಳಿಯ ಸರ್‌. ಎಂ. ವಿಶ್ವೇಶ್ವರಯ್ಯ ರೈಲ್ವೆ ಕೋಚಿಂಗ್‌ ಟರ್ಮಿ ನಲ್‌ ಕೂಡ ಒಂದಾಗಿದೆ. ಸುಮಾರು 10 ಎಕರೆಯಲ್ಲಿ ತಲೆಯೆತ್ತಿರುವ ಈ ಟರ್ಮಿನಲ್‌ ಮೂಲಕ ಸದ್ಯ ಮೂರು ರೈಲುಗಳು ಮಾತ್ರ ಕಾರ್ಯಾಚರಣೆ ಮಾಡಲಿವೆ. ಪೂರ್ಣಪ್ರಮಾಣದಲ್ಲಿ ರೈಲುಗಳ ಸೇವೆ ಆರಂಭ ಗೊಂಡ ನಂತರ ನಿತ್ಯ ಇಲ್ಲಿ ಸುಮಾರು 25 ಲಕ್ಷ ಲೀಟರ್‌ ನೀರು ಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕ ವಾಗಿ ಜಲಮಂಡಳಿ ಪೂರೈಸಲಿದ್ದು, ಇದರ ಮೊತ್ತ ಅಂದಾಜು 2ರಿಂದ 2.50 ಲಕ್ಷ ರೂ. ಆಗುತ್ತದೆ.

ಮೂರೂ ಕೊಳವೆಬಾವಿಗಳಿಂದ ಅಬ್ಬಬ್ಟಾ ಎಂದರೆ 2 ಲಕ್ಷ ಲೀ. ನೀರು ಪೂರೈಕೆ ಆಗುತ್ತದೆ. ಉಳಿದ 23 ಲಕ್ಷ ಲೀ.ಗೆ ಮುಂಬರುವ ದಿನಗಳಲ್ಲಿ ಜಲಮಂಡಳಿ ಮೊರೆ ಹೋಗಬೇಕಿದೆ. ಆದರೆ, ಇದಕ್ಕೆ ಪ್ರತಿಯಾಗಿ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅನುಸರಿಸುವ ಷರತ್ತನ್ನು ಜಲಮಂಡಳಿ ವಿಧಿಸಿದೆ. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿರುವ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ, ಮಳೆನೀರು ಕೊಯ್ಲು ಜತೆಗೆ ಸಂಸ್ಕರಣಾ ಘಟಕ ಹಾಗೂ ಅಂತರ್ಜಲ ಮರುಪೂರಣ
ದಂತಹ ಕ್ರಮಗಳಿಗೆ ಮುಂದಾಗಿದೆ.

ಟರ್ಮಿನಲ್‌ ಮೇಲ್ಛಾವಣಿಯೇ ಸುಮಾರು 40 ಸಾವಿರ ಚದರ ಮೀಟರ್‌ ಆಗುತ್ತದೆ. ಅದರಿಂದ ಬಿದ್ದ ನೀರನ್ನು ಸಂಗ್ರಹಿಸಲು ಯೋಜನೆ ರೂಪಿಸಿ, ಕಾರ್ಯಗತಗೊಳಿಸಲಾಗಿದೆ. ಬೆಂಗಳೂರಿನ ವಾರ್ಷಿಕ ಮಳೆ 980 ಮಿ.ಮೀ. ಆಗಿದ್ದು, ಇದರೊಂದಿಗೆ ಲೆಕ್ಕಹಾಕಿದರೆ ವರ್ಷಕ್ಕೆ 3.80 ಕೋಟಿ ಲೀ. ನೀರು ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿದ್ದು, ಇದು ಸರಾಸರಿ 1.10 ಲಕ್ಷ ಲೀ. ಆಗುತ್ತದೆ. ಇದರ ಮುಖ್ಯ ಉದ್ದೇಶ ಕೊಳವೆ ಬಾವಿಗಳ ಮರುಪೂರಣಕ್ಕೆ ಬಳಸಲಾಗುತ್ತದೆ. ಇದರ ಜತೆಗೆ 4 ಲಕ್ಷ ಲೀ. ಸಾಮರ್ಥ್ಯದ ಕೊಳಚೆನೀರು ಸಂಸ್ಕರಣಾ ಘಟಕ ನಿರ್ಮಿಸಲು ಉದ್ದೇಶಿಸಿದ್ದು, ಈ ಎರಡೂ ಪ್ರಕಾರದ ನೀರನ್ನು ಕುಡಿಯಲು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ಬಳಸಲಾಗುತ್ತದೆ.

ಈ ಎಲ್ಲ ಕಸರತ್ತುಗಳ ಹೊರತಾಗಿಯೂ ನಿತ್ಯ 16ರಿಂದ 18 ಲಕ್ಷ ಲೀ. ನೀರಿನ ಕೊರತೆ ಆಗುತ್ತದೆ! ಅದನ್ನು ಜಲಮಂಡಳಿ ಪೂರೈಸಲಿದೆ. ಇದು ತಕ್ಷಣಕ್ಕೆ ಬೇಕಾಗುವುದಿಲ್ಲ. ಪೂರ್ಣಪ್ರಮಾಣದಲ್ಲಿ ಟರ್ಮಿ ನಲ್‌ ಕಾರ್ಯಾರಂಭವಾದ ನಂತರ ಬೇಕಾಗುತ್ತದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ತಿಳಿಸುತ್ತಾರೆ.

Advertisement

25 ಮರುಪೂರಣ ಬಾವಿಗಳು!
ಇದೇ ಬೈಯಪ್ಪನಹಳ್ಳಿ ರೈಲ್ವೆ ಯಾರ್ಡ್‌ ಆವರಣದಲ್ಲಿ ಅಂತರ್ಜಲ ಮರುಪೂರಣಕ್ಕಾಗಿ “ವಿ-ವೈರ್‌ ಇಂಜೆಕ್ಷನ್‌’ ತಂತ್ರಜ್ಞಾನದಲ್ಲಿ ಸುಮಾರು 25 ಕಡೆ ಮರುಪೂರಣ ಕೊಳವೆಬಾವಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ನೆಲಕ್ಕೆ ಬಿದ್ದ ಮಳೆನೀರಿನಲ್ಲಿ ಶೇ.10ರಿಂದ 15ರಷ್ಟು ಮಾತ್ರ ಭೂಮಿಯೊಳಗೆ ಇಂಗುತ್ತದೆ. ಉಳಿದ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಆದ್ದರಿಂದ ಕನಿಷ್ಠ 70 ಮೀಟರ್‌ ಆಳದ ಈ ಮರುಪೂರಣ ಬಾವಿಗಳನ್ನು ಆವರಣದ ಅಲ್ಲಲ್ಲಿ ತೆಗೆದಿದ್ದರಿಂದ ನೆಲಕ್ಕೆ ಬಿದ್ದ ನೀರು ಗರಿಷ್ಠ ಪ್ರಮಾಣದಲ್ಲಿ ಇಂಗಲಿದೆ.

ಇದರಿಂದ ಮಳೆ ದಿನಗಳಲ್ಲಿ 50 ಸಾವಿರದಿಂದ 2 ಲಕ್ಷ ಲೀ. ನೀರು ಭೂಮಿಯೊಳಗೆ ಇಂಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಈ ಮರುಪೂರಣ ಬಾವಿಗಳ ಅಕ್ಕಪಕ್ಕದಲ್ಲೇ ಹತ್ತು ಕೊಳವೆ ಬಾವಿಗಳನ್ನು ಕೂಡ ತೆರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಸ್ಥಳಗಳನ್ನು ಕೂಡ ಗುರುತಿಸಲಾಗಿದ್ದು, ಮರುಪೂರಣ ಬಾವಿಗಳಿಂದ ಕೊಳವೆಬಾವಿಗಳಿಂದ ಹೆಚ್ಚು ನೀರೆತ್ತಲು ಅನುಕೂಲ ಆಗಲಿದೆ. ಅಷ್ಟೇ ಅಲ್ಲ, ಟರ್ಮಿನಲ್‌ ಸುತ್ತಲಿನ ಕೊಳವೆಬಾವಿಗಳು ಕೂಡ ಪುನರುಜ್ಜೀವ ಅಥವಾ ಮರುಪೂರಣಗೊಳ್ಳಲು ಅನು ಕೂಲ ಆಗಲಿದೆ. ಅಂದಹಾಗೆ, ಬೈಯಪ್ಪನಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ 900ರಿಂದ 1,200 ಅಡಿ ಆಳದಲ್ಲಿದೆ. ಬೋಗಿಗಳು, ಹಳಿಗಳು, ಶೌಚಾಲಯಗಳ ಸ್ವತ್ಛತೆ, ಟರ್ಮಿನಲ್‌ನಲ್ಲಿಯ ಉದ್ಯಾನ, ಶೌಚಾಲಯ, ಪ್ರಯಾಣಿಕರಿಗೆ ಕುಡಿಯಲು ಹೀಗೆ ವಿವಿಧ ಉದ್ದೇಶಗಳಿಗೆ ಅಧಿಕ ಪ್ರಮಾಣದ ನೀರಿನ ಅವಶ್ಯಕತೆ ಇದೆ.

ವಾರ್ಷಿಕ 2.25 ಕೋಟಿ ಉಳಿತಾಯ
ನೀರು ಸಂರಕ್ಷಣಾ ಕ್ರಮಗಳಿಂದ ನೈರುತ್ಯ ರೈಲ್ವೆಗೆ ವಾರ್ಷಿಕ 2.25 ಕೋಟಿ ರೂ. ಉಳಿತಾಯ ಆಗಲಿದೆ! ಜಲಮಂಡಳಿಯು ತಾನು ಪೂರೈಸುವ ನೀರಿಗೆ ಪ್ರತಿ ಲೀ.ಗೆ 108 ರೂ. ಶುಲ್ಕ ವಿಧಿಸುತ್ತದೆ. ಅದರಂತೆ ಮಳೆ ನೀರು ಸಂಗ್ರಹ, ಕೊಳವೆಬಾವಿಗಳ ಮರುಪೂರಣ, ಸಂಸ್ಕರಣಾ ಘಟಕಗಳಿಂದ ನೀರಿನ ಉಳಿತಾಯ ಆಗಲಿದ್ದು, ಇದು ಅಂತಿಮವಾಗಿ 2.25 ಕೋಟಿ ಹಣ ಉಳಿತಾಯದಲ್ಲಿ ಪರಿಣಮಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

*ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next