Advertisement

ಎಲ್ಲ ಪೊಲೀಸ್‌ ಠಾಣೆಗಳಲ್ಲಿ “ತೆರೆದ ಮನೆ’ಕಾರ್ಯಕ್ರಮ

08:52 AM Feb 20, 2020 | Team Udayavani |

ಉಡುಪಿ: ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಗಳ ಎಲ್ಲ ಠಾಣೆಯಲ್ಲಿ “ತೆರೆದ ಮನೆ’ ಎಂಬ ನೂತನ ಕಾರ್ಯಕ್ರಮ ಶುರುವಾಗಿದ್ದು, ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಚಿವುಟಿ ಹಾಕುವ ಮಹತ್ವದ ಕಾರ್ಯಕ್ರಮ ಇದಾಗಿದೆ.

Advertisement

ಏನಿದು ಕಾರ್ಯಕ್ರಮ?
ಈ ಕಾರ್ಯಕ್ರಮ ಜನ ಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿ ಪರಿವರ್ತಿಸಲಾಗಿದೆ. ಮಕ್ಕಳನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್‌ ಠಾಣೆ ಮತ್ತು ಪೊಲೀಸ್‌ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಗುತ್ತದೆ. ಇನ್ನು ಕೆಲವಡೆ ಪೊಲೀಸರು ಶಾಲೆಗಳಿಗೆ ಭೇಟಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಯಶಸ್ವಿಯಾಗಿ ನಡೆಸಲು ಪೊಲೀಸ್‌ ಇಲಾಖೆ ಈಗಾಗಲೇ ಕ್ರಮ ಕೈಕೊಂಡಿದೆ.

ಯಾರಿಗೆ ಪ್ರಯೋಜನ?
ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ. ತಿಂಗಳ ಪ್ರತಿ ಗುರುವಾರ ಎಲ್ಲ ಠಾಣೆಗಳು ಮಕ್ಕಳಿಗೆ ತೆರೆದ ಮನೆಯಂತಾಗಲಿದೆ. ಬಾಂಧವ್ಯ ವೃದ್ಧಿ ಹಾಗೂ ಶಾಲಾ ಹಂತದಲ್ಲಿ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎನ್ನುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಮಕ್ಕಳಿಗೆ ತಿಳುವಳಿಕೆ?
ಪೊಲೀಸರ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಅಪರಾಧ ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್‌ ವಿಭಾಗ, ಠಾಣಾ ಬರಹಗಾರರ ವಿಭಾಗ, ಠಾಣಾ ದಿನಚರಿ, ಅರ್ಜಿಗಳ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುವದು. ಅಂಗ ಶೋಧನಾ ಪುಸ್ತಕ, ಕೈದಿ ಬಂಧನ ಪುಸ್ತಕ, ಸಮನ್ಸ್‌ ನೋಂದಣಿ, ವಾರಂಟ್‌ ನೋಂದಣಿ, ಎಂಒಬಿ ಪುಸ್ತಕ, ರೌಡಿ ರಿಜಿಸ್ಟರ್‌, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೋಂದಣಿ, ಸಣ್ಣ ಅಪರಾಧ ಪುಸ್ತಕ, ಮೋಟಾರು ವಾಹನ ಅಪರಾಧ ಪುಸ್ತಕ ಹಾಗೂ ಅಪರಾಧಿ ದಾಖಲಾತಿ ಪುಸ್ತಕ, ಕಾನೂನು ತಿಳಿವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕಾನೂನುಗಳ ಬಗ್ಗೆಯೂ ಮಕ್ಕಳಿಗೆ ತಿಳಿವಳಿಕೆ ನೀಡಲಾಗುತ್ತದೆ.

ಹೇಗಿರಲಿದೆ ಕಾರ್ಯಕ್ರಮ?
ಶಾಲೆಯ ವಿದ್ಯಾರ್ಥಿಗಳನ್ನು ಸಮೀಪದ ಪೊಲೀಸ್‌ ಠಾಣೆಗಳಿಗೆ ಕರೆಸಿಕೊಳ್ಳಲಾಗುತ್ತದೆ ಅಥವಾ ಪೊಲೀಸರು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ 24 ಪೊಲೀಸ್‌ ಠಾಣೆಯಲ್ಲಿ ವಾರದಲ್ಲಿ ಒಂದು ದಿನ ಪೊಲೀಸ್‌ ಠಾಣೆಯನ್ನು ಈ ಕಾರ್ಯಕ್ರಮಕ್ಕಾಗಿಯೇ ಮೀಸಲಿಟ್ಟಿದ್ದಾರೆ.

Advertisement

ಪೊಲೀಸ್‌ ಕಾರ್ಯವೈಖರಿ ಪರಿಚಯ
ತೆರೆದ ಮನೆ ಕಾರ್ಯಕ್ರಮ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಭಾಗವಾಗಿದೆ. ಪೊಲೀಸ್‌ ಬಗೆಗಿನ ಭಯ ಹೋಗಲಾಡಿಸುವುದರ ಜತೆಗೆ ಮಕ್ಕಳಿಗೆ ಪೊಲೀಸ್‌ ಕಾರ್ಯವೈಖರಿಯ ಪರಿಚಯ ಮಾಡಿಸಲಾಗುತ್ತದೆ. ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸಲಾಗಿದೆ. -ವಿಷ್ಣುವರ್ಧನ್‌, ಪೊಲೀಸ್‌ ವರಿಷ್ಠಾಧಿಕಾರಿ ಉಡುಪಿ

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next