Advertisement

ಅಖೀಲ ಭಾರತ ಜಾನಪದ ಸಮ್ಮೇಳನಕ್ಕೆ ತೆರೆ

01:00 PM Mar 19, 2017 | Team Udayavani |

ಧಾರವಾಡ: ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಜಾನಪದ ವಿಷಯ ಅಧ್ಯಯನಕ್ಕೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಅಖೀಲ ಭಾರತ ಜಾನಪದ ಸಮ್ಮೇಳನದಲ್ಲಿ ಈ ವರ್ಷ ಏಕೈಕ ನಿರ್ಣಯ ಕೈಗೊಳ್ಳಲಾಯಿತು. 

Advertisement

ಕೆ.ಇ.ಬೋರ್ಡ್‌ ಕಾಲೇಜಿನಲ್ಲಿ ಶನಿವಾರ ಸಂಜೆ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ನಿರ್ಣಯ ಘೋಷಿಸಿದ ಹಿರಿಯ ಜಾನಪದ ವಿದ್ವಾಂಸ ಡಾ|ವಿ.ಎಲ್‌.ಪಾಟೀಲ, ಈ ವರ್ಷಅಖೀಲ ಭಾರತ ಮಟ್ಟದಲ್ಲಿ ಜಾನಪದ ಸಮ್ಮೇಳನ ಮಾಡುತ್ತಿದ್ದು, ಜಾನಪದ ಉಳಿಯಬೇಕಾದರೆ ಅದು ಈ ನಾಡಿನ ಶಿಕ್ಷಣದ ಭಾಗವಾಗಬೇಕು ಎನ್ನುವ ಅಭಿಪ್ರಾಯ ಎರಡು ದಿನದ ಸಮ್ಮೇಳನದ ಎಲ್ಲಾ ಗೋಷ್ಠಿಗಳಲ್ಲಿ ಮತ್ತು ಎಲ್ಲ ವಿದ್ವಾಂಸರಿಂದ ಕೇಳಿ ಬಂತು.  

ಸರ್ಕಾರ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಜಾನಪದ ವಿಷಯವನ್ನು ಕಡ್ಡಾಯವಾಗಿ ಬೋಧಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ನಿರ್ಣಯವನ್ನು ಸಮ್ಮೇಳನದಲ್ಲಿ ಮಂಡಿಸಿದರು. ಈ ನಿರ್ಣಯಕ್ಕೆ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಎಲ್ಲವಿದ್ವಾಂಸರು, ವಿದ್ಯಾರ್ಥಿಗಳು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. 

ಸಮಾರೋಪ ಭಾಷಣ ಮಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ|ಡಿ.ಬಿ.ನಾಯಕ, ದೇಶಜ್ಞಾನ ಪರಂಪರೆಯಾಧಾರಿತ ಜಾನಪದ ಇಂದು ಜಾಗತೀಕರಣದಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜಾನಪದ ಜ್ಞಾನ ಉಳಿಯಬೇಕಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಜಾನಪದ ವಿಷಯವನ್ನು ಕಾಲೇಜುಗಳಲ್ಲಿ ಒಂದು ವಿಷಯವನ್ನಾಗಿ ಬೋಧಿಸುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯಿಸಿ ಹೇಳಿದೆ ಎಂದರು. ಜಾನಪದ ಮೌಲ್ಯಗಳು ಬದಲಾಗುತ್ತಿದ್ದು, ಆಧುನೀಕರಣದ ಪ್ರಭಾವಕ್ಕೆ ಈ ಕಲೆ ಸೊರಗುತ್ತಿದೆ. 

Advertisement

ಕಲೆ ಉಳಿಯಬೇಕಾದರೆಆಯಾ ಕಸಬುಗಳು ಉಳಿಯಬೇಕು. ಜಾನಪದ ಕಲೆಗೆ ಅಗತ್ಯ ಪ್ರೋತ್ಸಾಹ ಸಿಕ್ಕಾಗ ಮಾತ್ರ ಅದು ಉಳಿಯಲು ಸಾಧ್ಯ. ಕಲಾವಿದರು ಉಳಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ. ಜಾನಪದ ಕಲೆ ಅನಕ್ಷರಸ್ಥರ ಕಲೆ ಎನ್ನುವ ಕೀಳರಿಮೆ ಹೋಗಬೇಕು ಎಂದರು. 

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ಜಾಗತೀಕರಣದ ಪ್ರಭಾವ ಮತ್ತು ಪಾಶ್ಚಿಮಾತ್ಯ ದೇಶಗಳ ಕಲೆಗಳ ಪ್ರಭಾವ ಇಂದು ನಮ್ಮ ದೇಶದ ಯುವಕರನ್ನು ದಾರಿ ತಪ್ಪಿಸುತ್ತಿದೆ. ರಾಜ್ಯದ ಎಲ್ಲಾ ಕಲೆಗಳು ಬೆಳೆಯಬೇಕು. ಅದಕ್ಕಾಗಿ ಕೇವಲ ಸರ್ಕಾರ ಶ್ರಮಿಸಿದರೆ ಸಾಲದು, ಪ್ರತಿಯೊಬ್ಬರು ತಮ್ಮದೇ ರೀತಿಯಲ್ಲಿ ಕಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. 

ಕವಿವಿ ಕುಲಸಚಿವ ಡಾ|ಎಂ.ಎನ್‌. ಜೋಷಿ, ಕೆ.ಇ.ಬೋರ್ಡ್‌ ಕಾಲೇಜಿನ ಪ್ರಾಚಾರ್ಯ ಪ್ರೊ|ಮೋಹನ ಸಿದ್ದಾಂತಿ, ಜಾನಪದ ವಿದ್ವಾಂಸರಾದ ಡಾ|ಶಾಂತಾ ಇಮ್ರಾಪೂರ, ಡಾ| ವಿ.ಎಲ್‌.ಪಾಟೀಲ, ನಾಗೇಶ ಶಾನಭಾಗ್‌ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಈಶ್ವರ ಕರಾಟ , ಸುನಿತಾ ಸತ್ಯಣ್ಣವರ, ಡಾ|ನಾಗರಾಜ್‌ ಎಸ್‌. ಕಾರ್ಯಕ್ರಮ ನಡೆಸಿಕೊಟ್ಟರು. ಡಾ|ಜ್ಯೋತಿ ದೇಶಪಾಂಡೆ, ಜಾನಪದ ಸಂಶೋಧನಾ ವಿದ್ಯಾರ್ಥಿ ರಜೀಯಾ ನದಾಫ್‌ ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು. 

Advertisement

Udayavani is now on Telegram. Click here to join our channel and stay updated with the latest news.

Next