Advertisement

ಮೇ 10 ಸಂಜೆ 6ಕ್ಕೆ ಬಹಿರಂಗ ಪ್ರಚಾರ ಮುಕ್ತಾಯ

06:50 AM May 07, 2018 | Karthik A |

ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮೇ 10ರಂದು ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಆ ಬಳಿಕ ಬಹಿರಂಗ ಪ್ರಚಾರ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

Advertisement

ಚುನಾವಣಾ ಸಿದ್ಧತೆ ಬಗ್ಗೆ  ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು  ಮೇ 10ರ ಸಂಜೆ 6 ಗಂಟೆಯ ಬಳಿಕ ಮೆರವಣಿಗೆ, ಬಹಿರಂಗ ಪ್ರಚಾರ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ಅಭ್ಯರ್ಥಿಗಳು, ಏಜೆಂಟರು, ಬೆಂಬಲಿಗರು ಮನೆ ಮನೆಗಳಿಗೆ ತೆರಳಿ  ಪ್ರಚಾರ ಮಾಡಲು ಅವಕಾಶವಿದೆ. ಈ ಅವಧಿಯಲ್ಲಿ  ಕಲಂ 144 ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ 5 ಮಂದಿಗಿಂತ ಹೆಚ್ಚು ಮಂದಿ ಒಟ್ಟು ಸೇರಿ ಮನೆಮನೆ ಪ್ರಚಾರ ನಡೆಸುವಂತಿಲ್ಲ. ಮತದಾನ ಮುಕ್ತಾಯವಾಗುವ ಸಮಯದ ಹಿಂದಿನ 48 ಗಂಟೆಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ  ನಡೆಸುವುದನ್ನು ನಿಷೇಧಿಸಲಾಗಿದೆ ಎಂದರು.

ಮತದಾನದ ಕೊನೆಯ 48 ಗಂಟೆಗಳಲ್ಲಿ  ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು, ತಾರಾ ಪ್ರಚಾರಕರು ಹಾಗೂ ಇತರರು ಆಯಾಯ ಕ್ಷೇತ್ರಗಳಲ್ಲಿ ಇರದಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ. ಈ ಬಗ್ಗೆ ನೇಮಕ ಮಾಡಲಾದ ವಿವಿಧ ಅಧಿಕಾರಿಗಳು, ಪೊಲೀಸರು  ಎಲ್ಲ ಹೊಟೇಲ್‌, ವಸತಿಗೃಹ, ಛತ್ರ ಮುಂತಾದೆಡೆ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಲಿರುವರು ಎಂದವರು ತಿಳಿಸಿದರು.  

ಜಿಲ್ಲೆಯಲ್ಲಿ ಬೆಳ್ತಂಗಡಿ, ಸುಳ್ಯ ಸೇರಿದಂತೆ 60 ಜನವಸತಿ ಕೇಂದ್ರಗಳಿಗೆ ಸೂಕ್ತ ಸಂಚಾರ ವ್ಯವಸ್ಥೆಯ ಕೊರತೆ ಇರುವುದರಿಂದ ಮತದಾನಕ್ಕೆ ಬರಲು ವಾಹನ ವ್ಯವಸ್ಥೆ ಮಾಡುವಂತೆ ಕೋರಿಕೆ ಬಂದಿದ್ದು  ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗುವುದು. ಜಿಲ್ಲೆಯಲ್ಲಿ 13 ಮತದಾನ ಕೇಂದ್ರಗಳಲ್ಲಿ ದೂರವಾಣಿ ಸಂಪರ್ಕ ಸಮಸ್ಯೆ ಗುರುತಿಸಲಾಗಿದ್ದು ಇದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು  ಮಾಡಲಾಗಿದೆ ಎಂದರು.

ಮತಗಟ್ಟೆಯೊಳಗೆ ಮತದಾರ/ಮತದಾರರ ಕೈಗೂಸು, ಕುರುಡ ಮತ್ತು ದುರ್ಬಲ ಮತದಾರನ ಸಂಗಡಿಗ, ಮತಗಟ್ಟೆ ಸಿಬಂದಿ, ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತ ಅಧಿಕಾರಿಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ/ಅವರ ಚುನಾವಣಾ ಏಜೆಂಟ್‌, ಮತದಾರನಿಗೆ ಝಡ್‌+ ರಕ್ಷಣೆಗೆ ನಿಯೋಜಿತ ಸಮವಸ್ತ್ರ ಧರಿಸದ ಹಾಗೂ ಶಸ್ತ್ರಾಸ್ತ್ರವನ್ನು ಮರೆಮಾಚಿದ ಭದ್ರತಾ ಸಿಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ ಎಂದರು. ದ.ಕ. ಜಿಲ್ಲೆಯಲ್ಲಿ  ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ವೆಬ್‌ಕಾಸ್ಟಿಂಗ್‌/ಸಿ.ಪಿ.ಎಂ.ಎಫ್‌ ನಿಯೋಜನೆ/ವೀಡಿಯೋಗ್ರಾಫಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದವರು ತಿಳಿಸಿದರು. ಮತದಾನಕ್ಕೆ  ಮೊದಲು ಅಣುಕು ಮತದಾನ ನಡೆಸಬೇಕಾಗಿರುವುದರಿಂದ ಎಲ್ಲ ಪೊಲಿಂಗ್‌ ಏಜೆಂಟರು ಬೆಳಗ್ಗೆ 5.45ಕ್ಕೆ ಮತದಾನ ಕೇಂದ್ರದಲ್ಲಿ  ಹಾಜರಿರುವಂತೆ ತಿಳಿಸಲಾಗಿದೆ ಎಂದರು.  ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

Advertisement

ಅಭ್ಯರ್ಥಿಗಳ ಚುನಾವಣಾ ಬೂತು
ಮತಗಟ್ಟೆಯಿಂದ 200 ಮೀ. ದೂರದಲ್ಲಿ ಅಭ್ಯರ್ಥಿಯ ಬೂತು ನಿರ್ಮಿಸಲು ಅವಕಾಶವಿರುತ್ತದೆ. ಈ ಬೂತಿನಲ್ಲಿ 1 ಮೇಜು, 2 ಕುರ್ಚಿಗಳು ಮತ್ತು 3 ಅಡಿ  x 1.5 ಅಡಿ  ಅಗಲದ ಬ್ಯಾನರನ್ನು ಉಪಯೋಗಿಸಬಹುದಾಗಿದೆ. ಆದರೆ ಬೂತುಗಳನ್ನು ನಿರ್ಮಿಸುವ ಬಗ್ಗೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ. ಮತದಾನ ದಿನಾಂಕದಂದು ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಮೇ 11 ಮತ್ತು 12ರಂದು ಅಭ್ಯರ್ಥಿ 1, ಚುನಾವಣೆ ಏಜೆಂಟ್‌ 1 ಮತ್ತು ಪಕ್ಷದ ಕಾರ್ಯಕರ್ತರು 1 ವಾಹನ ಸೇರಿ ಒಟ್ಟು ಮೂರು ವಾಹನಗಳನ್ನು ಅನುಮತಿ ಪಡೆದು ಉಪಯೋಗಿಸಲು ಅವಕಾಶವಿರುತ್ತದೆ. ಹಾಗೂ ವಾಹನದಲ್ಲಿ ವಾಹನ ಚಾಲಕ ಸೇರಿ ಒಟ್ಟು 5 ಮಂದಿ ಪ್ರಯಾಣಿಸಬಹುದಾಗಿದೆ ಎಂದು ಚುನಾವಣಾಧಿಕಾರಿಯವರು ತಿಳಿಸಿದರು.

1.80 ಕೋ.ರೂ ಮೌಲ್ಯದ ಅಕ್ರಮ ಮದ್ಯ ವಶ
ಜಿಲ್ಲೆಯಲ್ಲಿ ಅನಧೀಕೃತ 15,89,500 ರೂ. ನಗದು  ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಇದರಲ್ಲಿ 12,89,500 ರೂಪಾಯಿಯನ್ನು ಸಂಬಂಧಪಟ್ಟವರ ದಾಖಲೆ ಇತ್ಯಾದಿಗಳನ್ನು ಪರಿಶೀಲಿಸಿ ಜಿಲ್ಲಾ ಪರಿಹಾರ ಸಮಿತಿ ಬಿಡುಗಡೆಗೊಳಿಸಿದೆ. 31763.605 ಲೀಟರ್‌ ಅಕ್ರಮ  ಸಂಗ್ರಹ ಮತ್ತು ಮಾರಾಟ ಮದ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಇದರ ಅಂದಾಜು ಮೌಲ್ಯ 1,80,95,794 ರೂ.ಆಗಿರುತ್ತದೆ. 9 ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next