Advertisement

ಪರೀಕ್ಷೆ ಸಿದ್ಧತೆಗೆ ತೆರೆದ ಪುಸ್ತಕ ಪರೀಕ್ಷೆ !

02:43 AM Feb 23, 2022 | Team Udayavani |

ಉಡುಪಿ: ತೆರೆದ ಪುಸ್ತಕ ಪರೀಕ್ಷೆಯ ಮೂಲಕ ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸಲು ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ ಮುಂದಾಗಿವೆ. ಕೊರೊನಾದಿಂದ ಕಳೆದ ವರ್ಷ ಮೌಲ್ಯಾಂಕನ ಪರೀಕ್ಷೆ ಇರಲಿಲ್ಲ. ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಕೂಡ ಸರಳ ರೀತಿಯಲ್ಲಿ ಎರಡೇ ದಿನದಲ್ಲಿ ಪೂರ್ಣ
ಗೊಳಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿ ಗಳಲ್ಲಿ ಬರವಣಿಗೆ ಕಲೆ ತುಂಬಲು ಮತ್ತು ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸಲು ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗುತ್ತಿದೆ.

Advertisement

ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಜತೆಗೆ ಪುಸ್ತಕ ನೀಡಿ, ಉತ್ತರ ಬರೆಯಲು ಹೇಳಾಗುತ್ತದೆ. ತೆರೆದ ಪುಸ್ತಕ ಪರೀಕ್ಷೆಯ ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ. ಇದರೊಂದಿಗೆ ಪರೀಕ್ಷೆಗೆ ಹೇಗೆ ಸಜ್ಜಾಗಬೇಕು, ನಿಗದಿತ ಕಾಲಮಿತಿಯಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯ ಮತ್ತು ಅವಶ್ಯವಾಗಿ ಯಾವೆಲ್ಲ ಪ್ರಶ್ನೆಗೆ ಉತ್ತರ ನೀಡಬೇಕು ಎಂಬುದರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸಿದ್ಧತೆಯ ಸಂದರ್ಭದಲ್ಲೇ ನೀಡುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ವರ್ಷ ಬಿ-ಶ್ರೇಣಿ ಪಡೆದ ಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ ದ್ದೇವೆ. ಪರೀಕ್ಷಾ ಸಿದ್ಧತೆ ಹಾಗೂ ಫ‌ಲಿತಾಂಶ ಉನ್ನತೀಕರಿಸುವ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಅದಕ್ಕಿಂತ ಹಿಂದಿನ ವರ್ಷದ ಫ‌ಲಿತಾಂಶದ ಆಧಾರದಲ್ಲಿ ಹೆಚ್ಚು ಅನುತ್ತೀರ್ಣರಾಗಿರುವ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಜತೆಗೆ ಮಧ್ಯವಾರ್ಷಿಕ ಪರೀಕ್ಷೆಯ ಫ‌ಲಿತಾಂಶ ಆಧಾರದಲ್ಲಿ ವಿದ್ಯಾರ್ಥಿಗಳು ಯಾವ ಸುಧಾರಣೆ ಮಾಡಿಕೊಳ್ಳಬೇಕು ಎಂಬ ಮಾರ್ಗದರ್ಶನ ನೀಡಲು ಸೂಚನೆ ನೀಡಿದ್ದೇವೆ ಎಂದು ಜಿ.ಪಂ. ಅಧಿಕಾರಿಯೊಬ್ಬರು ವಿವರಿಸಿದರು.

ವೇಕ್‌ಅಪ್‌ ಕಾಲ್‌
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿದಂತೆ ಪ್ರತೀ ದಿನ ಬೆಳಗ್ಗೆ ಶಾಲಾ ಶಿಕ್ಷಕರಿಂದ ಮಕ್ಕಳಿಗೆ ಅಥವಾ ಅವರ ಪಾಲಕ, ಪೋಷಕರಿಗೆ ವೇಕ್‌ಅಪ್‌ ಕಾಲ್‌ ಬರಲಿದೆ. 6 ಗಂಟೆಗೆ ಮಕ್ಕಳನ್ನು ಓದಲು ಎಬ್ಬಿಸಲು ಕರೆ ಮಾಡಲು ನಿರ್ದೇಶನ ನೀಡಲಾಗಿದೆ. ಬೆಳಗ್ಗಿನ ಸಮಯ ಪ್ರಶಾಂತತೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತದೆ. ಹೀಗಾಗಿ ವೆಕ್‌ಅಪ್‌ ಕಾಲ್‌ ನೀಡಲು ತಿಳಿಸಲಾಗಿದೆ ಎಂದು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವಿವರಿಸಿದರು.

ಕೌನ್ಸೆಲಿಂಗ್‌ ನೀಡಲು ಸಿದ್ಧ
ಪರೀಕ್ಷಾ ವಿಷಯವಾಗಿ ಯಾವುದೇ ವಿದ್ಯಾರ್ಥಿಗೆ ಮಾನಸಿಕ ಸದೃಢತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೌನ್ಸೆಲಿಂಗ್‌ ನೀಡಲು ಜಿ.ಪಂ. ಸಿದ್ಧವಾಗಿದೆ. ನಮ್ಮಲ್ಲಿ ಲಭ್ಯವಿರುವ ಕೌನ್ಸೆಲಿಂಗ್‌ ಅಥವಾ ಮನಃಶಾಸ್ತ್ರಜ್ಞರ ಸಹಕಾರದೊಂದಿಗೆ ಅಥವಾ ಮನಃಶಾಸ್ತ್ರ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ, ಓದು ಪೂರ್ಣಗೊಳಿಸಿರುವ ಅಭ್ಯರ್ಥಿಗಳ ಮೂಲಕವೂ ಕೌನ್ಸೆಲಿಂಗ್‌ ನೀಡಲಿದ್ದೇವೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಭಯ ಇಲ್ಲದೇ ಪರೀಕ್ಷೆ ಎದುರಿಸಲು ಸಾಧ್ಯವಾಗಲಿದೆ ಅವರು ತಿಳಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next