Advertisement

ಐಪಿಎಲ್‌ನಲ್ಲಿ ವಿಕೆಟ್‌ ಖಾತೆ ತೆರೆದ ತೀಕ್ಷಣ

12:08 AM Apr 14, 2022 | Team Udayavani |

ಮುಂಬಯಿ: ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ತಂಡ ಮಂಗಳವಾರದ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿ ಗಮನ ಸೆಳೆಯಿತು.

Advertisement

ಬ್ಯಾಟಿಂಗ್‌ನಲ್ಲಿ ಉತ್ತಪ್ಪ ಮತ್ತು ಶಿವಂ ದುಬೆ ಮಿಂಚಿದರೆ ಬೌಲಿಂಗ್‌ನಲ್ಲಿ ಸ್ವತಃ ನಾಯಕ ರವೀಂದ್ರ ಜಡೇಜ ಮತ್ತು ಶ್ರೀಲಂಕಾದ ಮಹೀಶ್‌ ತೀಕ್ಷಣ ಅದ್ಭುತ ದಾಳಿ ಸಂಘಟಿಸಿದ್ದರು.

ಉತ್ತಪ್ಪ ಮತ್ತು ದುಬೆ ಅವರ ಸೊಗಸಾದ ಆಟದಿಂದಾಗಿ ಚೆನ್ನೈ ಈ ಐಪಿಎಲ್‌ನ ಗರಿಷ್ಠ ಮೊತ್ತ (216) ಪೇರಿಸಿತು. ಇದಕ್ಕುತ್ತರವಾಗಿ ಆರ್‌ಸಿಬಿ ರನ್‌ ಚೇಸಿಂಗ್‌ ಓಟಕ್ಕೆ ಜಡೇಜ ಮತ್ತು ತೀಕ್ಷಣ ಬ್ರೇಕ್‌ ಹಾಕಿದ್ದರಿಂದ ಚೆನ್ನೈ ಗೆಲುವಿನ ನಗೆ ಚೆಲ್ಲಿತು.

ಬೌಲಿಂಗ್‌ ಪಾಳಯದಲ್ಲಿ ಮಹೀಶ್‌ ತೀಕ್ಷಣ ಹೀರೊ ಆಗಿ ಕಾಣಿಸಿಕೊಂಡರು. ತನ್ನ ಫೇವರಿಟ್‌ ಬ್ಯಾಟ್ಸ್‌ಮನ್‌ ಫಾ ಡು ಪ್ಲೆಸಿಸ್‌ ಅವರ ವಿಕೆಟ್‌ ಸಹಿತ ನಾಲ್ಕು ವಿಕೆಟ್‌ ಕಿತ್ತು ತೀಕ್ಷಣ ಸಂಭ್ರಮಿಸಿದರು. ಪ್ಲೆಸಿಸ್‌ ಅವರಲ್ಲದೇ ಅನುಜ್‌ ರಾವತ್‌, ಶಾಬಾಜ್‌ ಅಹ್ಮದ್‌ ಮತ್ತು ಸುಯಶ್‌ ಪ್ರಭುದೇಸಾಯಿ ಅವರ ವಿಕೆಟ್‌ ಪಡೆದರು. ಜಡೇಜ ಮತ್ತು ತೀಕ್ಷಣ ಸೇರಿ 7 ವಿಕೆಟ್‌ ಕಿತ್ತು ಆರ್‌ಸಿಬಿ ಮೇಲುಗೈ ಸಾಧಿಸದಂತೆ ತಡೆದರು.

ಪ್ಲೆಸಿಸ್‌ ಅವರ ವಿಕೆಟ್‌ ತೀಕ್ಷಣ ಅವರ ಐಪಿಎಲ್‌ನಲ್ಲಿ ಪಡೆದ ಮೊದಲ ವಿಕೆಟ್‌ ಆಗಿದೆ.ಪಂದ್ಯದಲ್ಲಿ ಆಡಿರುವುದೇ ಬಲುದೊಡ್ಡ ಸಾಧನೆ. ಯಾಕೆಂದರೆ ನಾವು ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದ್ದೆವು. ಇದೀಗ ಎಲ್ಲರ ಪ್ರಯತ್ನದಿಂದ ತಂಡ ಮೊದಲ ಪಂದ್ಯ ಗೆದ್ದಿರುವುದು ಖುಷಿ ನೀಡಿದೆ ಎಂದರು ತೀಕ್ಷಣ.

Advertisement

ಚೆನ್ನೈಯ ಸ್ಪಿನ್‌ ತಾರೆ ತೀಕ್ಷಣ
21ರ ಹರೆಯದ ತೀಕ್ಷಣ ಎರಡು ರೀತಿಯಲ್ಲಿ ಚೆಂಡನ್ನು ಸ್ಪಿನ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ಈಗಾಗಲೇ ಅಜಂತಾ ಮೆಂಡಿಸ್‌ ಅವರೊಂದಿಗೆ ಹೋಲಿಸಲಾಗುತ್ತಿದೆ.

ಸನ್‌ರೈಸರ್ ಹೈದರಾಬಾದ್‌ ವಿರುದ್ಧದ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆಗೈದಿದ್ದ ತೀಕ್ಷಣ ಆ ಪಂದ್ಯದಲ್ಲಿ ವಿಕೆಟ್‌ ಪಡೆಯದಿದ್ದರೂ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 31 ರನ್‌ ಬಿಟ್ಟುಕೊಟ್ಟಿದ್ದರು. ಆರ್‌ಸಿಬಿ ವಿರುದ್ದದ ಪಂದ್ಯ ಅವರ ಪಾಲಿಗೆ ಎರಡನೇ ಐಪಿಎಲ್‌ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ 33 ರನ್ನಿಗೆ 4 ವಿಕೆಟ್‌ ಕಿತ್ತು ಸ್ಮರಣೀಯಗೊಳಿಸಿದರು.

ಪವರ್‌ಪ್ಲೇ ವೇಳೆ ಅವರು ಪ್ಲೆಸಿಸ್‌ ಮತ್ತು ಅನುಜ್‌ ರಾವತ್‌ ವಿಕೆಟ್‌ ಹಾರಿಸಿದರು. ಎರಡನೇ ಸ್ಪೆಲ್‌ ವೇಳೆ ಅವರು ಪ್ರಭುದೇಸಾಯಿ ಮತ್ತು ಶಾಬಾಜ್‌ ಅವರ ವಿಕೆಟನ್ನು ಕಿತ್ತು ಸಂಭ್ರಮಿಸಿದರು. ಐಪಿಎಲ್‌ ಹರಾಜಿಯನಲ್ಲಿ ಚೆನ್ನೈ ತಂಡವು 70 ಲಕ್ಷ ರೂ.ಗಳಿಗೆ ತೀಕ್ಷಣ ಅವರನ್ನು ಖರೀದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next