Advertisement

ಉದ್ಘಾಟನೆಗೆ ಕಾಯುತ್ತಿರುವ ಊಟಿ ಗಾರ್ಡನ್‌

10:14 AM Nov 12, 2017 | |

ಬೆಂಗಳೂರು: ರಾಜ್ಯದ ತೋಟಗಾರಿಕೆ ಇಲಾಖೆ ಊಟಿಯಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ “ಫೆರ್ನ್ ಹಿಲ್ಸ್‌ ಗಾರ್ಡನ್‌’ ಎಂಬ ಸುಂದರ ಸಸ್ಯೋದ್ಯಾನ ನಿರ್ಮಿಸಿದ್ದರೂ, ಉದ್ಘಾಟನೆ ಭಾಗ್ಯ ಇನ್ನೂ ಸಿಕ್ಕಿಲ್ಲ.

Advertisement

ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ 10 ವರ್ಷಗಳಿಂದಲೂ ವಿವಿಧ ಹಂತಗಳಲ್ಲಿ ಈ ಸಸ್ಯೋದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ನಾಲ್ಕು ತಿಂಗಳ ಹಿಂದೆಯೇ ಉದ್ಯಾನವನ್ನು ಲೋಕಾರ್ಪಣೆ ಮಾಡಬೇಕೆಂದು ತೋಟಗಾರಿಕೆ ಇಲಾಖೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿತ್ತು. ಆದರೆ, ಕಾರ್ಯ ಒತ್ತಡದಿಂದ ದಿನಾಂಕ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಚಿವರೇ ಸಸ್ಯೋದ್ಯಾನವನ್ನು ಉದ್ಘಾಟನೆ ಮಾಡಲಿ ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಎರಡು ಮೂರು ಬಾರಿ ದಿನಾಂಕ ನಿಗದಿಪಡಿಸಿದ್ದರೂ ಕಾರಣಾಂತರದಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಈ ನಡುವೆ ಸಸ್ಯೋದ್ಯಾನದ ಕುರಿತು ಮಾತನಾಡುತ್ತಿದ್ದಾಗ, ನಾನು ಬರುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ, ಅಷ್ಟಕ್ಕೆ ಸುಮ್ಮನಾಗಿದ್ದರು. ಆದರೆ, ಮುಖ್ಯಮಂತ್ರಿಗಳು ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿದ ತೋಟಗಾರಿಕೆ ಸಚಿವರು, ಮುಖ್ಯಮಂತ್ರಿಗಳಿಂದಲೇ ಸಸ್ಯೋದ್ಯಾನವನ್ನು ಉದ್ಘಾಟಿಸಬೇಕೆಂದು ಬಯಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳ ಕಾರ್ಯ ಒತ್ತಡದಿಂದ ಅದಕ್ಕೆ ಕಾಲ ಕೂಡಿ ಬರುತ್ತಿಲ್ಲ. ಹಾಗಾಗಿ ಫೆರ್ನ್ ಹಿಲ್ಸ್‌ ಗಾರ್ಡನ್‌ ಉದ್ಘಾಟನೆ ವಿಳಂಬವಾಗುತ್ತಿದೆ.

ಇದೀಗ ಮತ್ತೆ ಮುಖ್ಯಮಂತ್ರಿ ಅವರ ಸಮಯ ಕೇಳಲಾಗಿದೆ. ಆದರೆ, ಅಧಿವೇಶನ, ಸಾಹಿತ್ಯ ಸಮ್ಮೇಳನ  ಚುನಾವಣೆ ಸಿದಟಛಿತೆ ಮತ್ತಿತರ ಕಾರಣಗಳಿಂದಾಗಿ ಸೂಕ್ತ ದಿನ ನಿಗದಿಯಾಗುತ್ತಿಲ್ಲ. ಇದರಿಂದಾಗಿ ಫೆರ್ನ್ ಹಿಲ್ಸ್‌ ಗಾರ್ಡನ್‌ಗೆ ಇನ್ನೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಮಾದರಿ ಉದ್ಯಾನ: ಊಟಿಯಲ್ಲಿ ರಾಜ್ಯ ತೋಟಗಾರಿಕೆ ಇಲಾಖೆಗೆ ಸೇರಿದ 38 ಎಕರೆ ಪ್ರದೇಶದಲ್ಲಿ ಫ‌ರ್ನ್ ಹಿಲ್ಸ್‌ ಗಾರ್ಡನ್‌ ನಿರ್ಮಾಣಗೊಂಡಿದೆ. ಕರ್ನಾಟಕದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಊಟಿಗೆ ಭೇಟಿ ನೀಡುವುದರಿಂದ ರಾಜ್ಯ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಫೆರ್ನ್ ಹಿಲ್ಸ್‌ ಗಾರ್ಡನ್‌ ಅನ್ನು ಮಾದರಿಯಾಗಿ
ಅಭಿವೃದ್ಧಿಪಡಿಸಲಾಗಿದೆ. ಊಟಿಗೆ ಬರುವ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಳೆದ 10 ವರ್ಷದಿಂದಲೂ ವಿವಿಧ ಹಂತದಲ್ಲಿ ಈ ಉದ್ಯಾನದ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 

ವಿವಿಧ ಆಕರ್ಷಣೆ: ಫೆರ್ನ್ ಹಿಲ್ಸ್‌ ಗಾರ್ಡನ್‌ನಲ್ಲಿ ಶೀತಪ್ರದೇಶಕ್ಕೆ ಅನುಗುಣವಾದ ವಿವಿಧ ಬಗೆಯ ಅಲಂಕಾರಿಕ ಸಸ್ಯಗಳ ಗಾರ್ಡನ್‌ (ನರ್ಸರಿ) ನಿರ್ಮಿಸಲಾಗಿದೆ. ಊಟಿಯ ಇಳಿಜಾರು ಪ್ರದೇಶವನ್ನು ಅಂದಗಾಣಿಸಲು ಇಳಿಜಾರು ಉದ್ಯಾನ, ಮತ್ತು ಅರ್ಧ ಎಕರೆ ಜಾಗದಲ್ಲಿ ಇಟಲಿಯನ್‌ ಮಾದರಿಯ ಗಾರ್ಡನ್‌ ನಿರ್ಮಿಸಲಾಗಿದೆ.

Advertisement

ಐದು ಎಕರೆಯಲ್ಲಿ ಲಾನ್‌ ಏರಿಯಾ ಇದ್ದು, ಪ್ರವಾಸಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ವೇದಿಕೆ ಕೂಡ ನಿರ್ಮಾಣಗೊಂಡಿದೆ. ಅಂತೆಯೇ ಅರ್ಧ ಎಕರೆಯಲ್ಲಿ ಮಜೆ ಗಾರ್ಡನ್‌ ಹಾಗೂ ತಗ್ಗು ಪ್ರದೇಶದಲ್ಲಿ ಸಂಕನ್‌ ಉದ್ಯಾನವಾಗಿ ಪರಿವರ್ತಿಸಿರುವುದು ವಿಶೇಷ. ವಿವಿಧ ಬಗೆಯ ಗಿಡ ಮೂಲಿಕೆ ಸಸ್ಯಗಳ ಉದ್ಯಾನ, ತರಕಾರಿ ಗಾರ್ಡನ್‌, ವಾಣಿಜ್ಯ ಹೂವುಗಳ ಬೆಳೆಯುವ ಪಾಲಿಹೌಸ್‌, ಸಸ್ಯಾಲಂಕಾರದ ಗಾರ್ಡನ್‌ (ಟೋಪಿಯರಿ) ಇಲ್ಲಿನ ಮತ್ತೂಂದು ಆಕರ್ಷಣೆಯಾಗಿದೆ.

ಜಪಾನಿ ಪರಿಕಲ್ಪನೆಯಲ್ಲಿ ಪಗೋಡಾ (ಗೋಪುರ) ನಿರ್ಮಿಸುವ ಯೋಜನೆ ತೋಟಗಾರಿಕೆ ಇಲಾಖೆಯದ್ದು. ಅದರಲ್ಲಿ ಕೆಫೆಟೆರಿಯಾ, ಬುದ್ಧ ಸಸ್ಯಾಲಂಕಾರ, ತೋಟಗಾರಿಕೆ ಮಾಹಿತಿ ಕೇಂದ್ರ, ವಿವಿಐಪಿ ಗ್ಯಾಲರಿ, ವಿಶ್ರಾಂತಿ ಕೊಠಡಿ ಇತ್ಯಾದಿಗಳನ್ನು ನಿರ್ಮಿಸುವ ಯೋಜನೆಯಿದೆ. ಜತೆಗೆ ಇಡೀ ಉದ್ಯಾನವನ್ನು ಎತ್ತರದಿಂದ ವೀಕ್ಷಿಸಲು ಅನುಕೂಲವಾಗುವಂತೆ ಸುಮಾರು 25 ಅಡಿಗಳ ಎತ್ತರದಲ್ಲಿ ತೂಗು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ನಾಲ್ಕು ಕೆರೆಗಳ ನೀರನ್ನು ಬಳಸಿಕೊಂಡು ಚೇಸಿಂಗ್‌ ಫೌಂಟೆನ್‌, ಸೌರಶಕ್ತಿ ಬಳಸಿ ಉದ್ಯಾನದಲ್ಲಿ ವಿದ್ಯುತ್‌ ದೀಪಗಳ ಬಳಕೆ, ಸೌರ ಮತ್ತು ಪವನ ವಿದ್ಯುತ್‌ ತಯಾರಿಕೆ ಘಟಕ ಸ್ಥಾಪನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

ಊಟಿ ಸೇರಿದಂತೆ ತಮಿಳುನಾಡು ಭಾಗದಲ್ಲಿ ತೀವ್ರ ಮಳೆ ಇದ್ದು, ಹೆಲಿಕಾಪ್ಟರ್‌ ಹಾರಾಟಕ್ಕೆ ಅಡಚಣೆ ಇದೆ. ಹವಾಮಾನ ವೈಪರೀತ್ಯದಲ್ಲಿ ಸುಧಾರಣೆ ಕಂಡ ಬಳಿಕ ಫೆರ್ನ್ ಹಿಲ್ಸ್‌ ಗಾರ್ಡನ್‌ ಉದ್ಘಾಟನೆಗೆ ಮುಖ್ಯಮಂತ್ರಿಗಳು ಸೂಕ್ತ ದಿನಾಂಕ ನೀಡಲಿದ್ದಾರೆಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

25- 30 ಲಕ್ಷ
ಪ್ರವಾಸಿಗರ ಭೇಟಿ

ಊಟಿಗೆ ಭೇಟಿ ನೀಡುವ ಪ್ರವಾಸಿಗರು ಉಳಿದುಕೊಳ್ಳಲು ಅತಿಥಿ ಗೃಹ ವ್ಯವಸ್ಥೆ ಇದೆ. ಜತೆಗೆ ಬಟಾನಿಕಲ್‌ ಗಾರ್ಡನ್‌, ಕೂನೂರು ಸಿಮ್ಸ್‌ಪಾರ್ಕ್‌, ಅಬೊìರೇಟಂ ಪಾರ್ಕ್‌, ರೋಜ್‌ ಗಾರ್ಡ್‌ನ್‌, ಕಾಟೇರಿ ಗಾರ್ಡನ್‌, ಟೀ ಗಾರ್ಡನ್‌, ಬ್ರಿಟಿಷರ ವಸಾಹತು ಕುರುಹುಗಳು, ನೀಲಗಿರಿ ಬೆಟ್ಟಗಳ ಸಾಲು ಇತ್ಯಾದಿಗಳ ವೀಕ್ಷಣೆಗಾಗಿಯೇ ಪ್ರತಿವರ್ಷ ದೇಶ, ವಿದೇಶಗಳಿಂದ ಸುಮಾರು 25ರಿಂದ 30 ಲಕ್ಷ ಮಂದಿ ಪ್ರವಾಸಿಗರು ಊಟಿಗೆ ಭೇಟಿ ನೀಡುತ್ತಾರೆ.

62 ಎಕರೆ ರಾಜ್ಯ ಸರ್ಕಾರದ್ದು
ಊಟಿಯಲ್ಲಿ ಸುಮಾರು 62 ಎಕರೆ ಪ್ರದೇಶ ರಾಜ್ಯ ಸರ್ಕಾರದ ಆಸ್ತಿ. ಇದರಲ್ಲಿ ಮಯೂರ ಸುದರ್ಶನ ಪ್ರದೇಶ 45 ಎಕರೆ ಇದ್ದು, ಅದರಲ್ಲಿ 38 ಫೆರ್ನ್ ಹಿಲ್ಸ್‌ ಗಾರ್ಡನ್‌, 7 ಎಕರೆ ರೇಷ್ಮೆ ಹುಳು ಸಾಕಾಣಿಕೆಗೆ ಬಳಸಲಾಗುತ್ತಿದೆ. ಉಳಿದ 17 ಎಕರೆ ಪ್ರದೇಶದಲ್ಲಿ ಕರ್ನಾಟಕ ಗೆಸ್ಟ್‌ಹೌಸ್‌ ಏರಿಯಾ ಇದ್ದು, ಈಗ ಬಂದ್‌ ಆಗಿದೆ. ಅದನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಕೊಡಲಾಗಿದ್ದು, ಅಭಿವೃದ್ಧಿ ಕಾರ್ಯ ಆರಂಭವಾಗಬೇಕಷ್ಟೆ.

– ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next