Advertisement

ಊಟಿ ಆ್ಯಪಲ್ ಬೆಳೆದು ರೈತ ಮಾದರಿ

10:09 AM Jul 27, 2019 | Suhan S |

ಬಂಗಾರಪೇಟೆ: ಹಾಲು, ರೇಷ್ಮೆ, ತರಕಾರಿ ಬೆಳೆಗೆ ಸೀಮಿತವಾಗಿರುವ ಜಿಲ್ಲೆಯ ರೈತರು ಹೊಸ ಬೆಳೆ ತೆಗೆಯುವ ಸಾಹಸ ಮಾಡಿಲ್ಲ. ಮಾಡಿದರೂ ಯಶಸ್ಸು ಕಾಣುವಲ್ಲಿ ವಿಫ‌ಲರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದಿದ್ದರೂ, ಪರ್ಯಾಯ ಬೆಳೆ ಬೆಳೆದಿಲ್ಲ. ಈ ಮಧ್ಯೆ ತಾಲೂಕಿನ ರೈತ ಊಟಿ ಆ್ಯಪಲ್ ಎಂದೇ ಕರೆಯುವ ‘ಆ್ಯಪಲ್ ಬೆರ್‌’ ಬೆಳೆದು ತೋಟಗಾರಿಕೆ ಅಧಿಕಾರಿಗಳು, ಪ್ರಗತಿಪರ ರೈತರ ಗಮನ ಸೆಳೆದಿದ್ದಾರೆ.

Advertisement

ತಾಲೂಕಿನ ಪ್ರಗತಿಪರ ರೈತ ದೇಶಿಹಳ್ಳಿ ಎಂ.ವೆಂಕಟರಾಮ್‌ ನಿವೃತ್ತ ಬೆಮೆಲ್ ನೌಕರರಾಗಿದ್ದು, ತಮ್ಮ ತೋಟದಲ್ಲಿ ಬಾಳೆ ಸೇರಿ ಹಲವು ತೋಟಗಾರಿಕೆ ಬೆಳೆಗಳನ್ನು ಬೆಳೆಯುವು ದರಲ್ಲಿ ಸಫ‌ಲತೆ ಕಂಡಿದ್ದಾರೆ. ಕಡಿಮೆ ನೀರಿನಲ್ಲಿ ಆ್ಯಪಲ್ ಬೆರ್‌ ಬೆಳೆಯಲು ಎರಡೂವರೆ ವರ್ಷಗಳ ಹಿಂದೆ ನಿರ್ಧಾರ ಮಾಡಿ, ಬಳಿಕ ನಾಟಿ ಮಾಡಿ ಪ್ರಸ್ತುತ ಫ‌ಸಲು ಕೈಸೇರುವ ಮಟ್ಟಕ್ಕೆ ಬಂದಿದೆ.

ಇದೀಗ ತೋಟಗಾರಿಕೆ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪ್ರಗತಿಪರ ರೈತರು ಆ್ಯಪಲ್ ಬೆರ್‌ ಹಣ್ಣಿನ ಬೆಳೆಯ ಕ್ಷೇತ್ರೋತ್ಸವ ನಡೆಸಿದರು.

ಆ್ಯಪಲ್ ಬೆರ್‌ ಬೆಳೆ ತೆಗೆದ ಮೊದಲ ರೈತ: ಜಿಲ್ಲೆಯಲ್ಲಿ ಆ್ಯಪಲ್ ಬೆರ್‌ ಈವರೆಗೂ ರೈತರು ಬೆಳೆದಿಲ್ಲ. ಈಗ ವೆಂಕಟರಾಮ್‌ ಮೊದಲ ಬಾರಿಗೆ ಬೆಳೆದಿದ್ದಾರೆ. ಉಷ್ಣ ವಲಯದಲ್ಲಿ ಬೆಳೆಯುವ ಈ ಹಣ್ಣನ್ನು ಜಿಲ್ಲೆಯಲ್ಲಿ ಬೆಳೆಯಲು ಸೂಕ್ತ. ಇದಕ್ಕೆ ನೀರಿನ ಅವಶ್ಯಕತೆ ಕಡಿಮೆ ಇದ್ದು, 20 ವರ್ಷ ಫ‌ಸಲು ಕೊಡುತ್ತದೆ. ವರ್ಷಕ್ಕೆ ಬೆಳೆ ಕೈ ಸೇರಲಿದೆ. ಮೊದಲನೇ ವರ್ಷ ಒಂದು ಗಿಡದಿಂದ 20 ಕೆ.ಜಿ., ಎರಡನೇ ವರ್ಷ 20 ರಿಂದ 30 ಕೆ.ಜಿ., ಮೂರನೇ ವರ್ಷ 100 ರಿಂದ 150 ಕೆ.ಜಿ. ಹಣ್ಣು ಸಿಗುತ್ತದೆ. ಒಂದು ಹಣ್ಣು 20 ರಿಂದ 50 ಗ್ರಾಂ ತೂಗುತ್ತದೆ. 15 ರಿಂದ 20 ಅಡಿ ಎತ್ತರ, 30 ಅಡಿ ಅಗಲದ ಮರವಾಗುತ್ತದೆ.

Advertisement

ಸಹಾಯಧನ: ಎರಡು ಎಕರೆ ಜಮೀನಿನಲ್ಲಿ ಈ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ 44 ಸಾವಿರ ರೂ. ಸಹಾಯಧನ ನೀಡಲಾಗಿದೆ. ಹಾಪ್‌ಕಾಮ್ಸ್‌, ರಿಲಿಯನ್ಸ್‌, ಹೈದ್ರಾಬಾದ್‌ ಮೂಲದ ಟ್ರೆಂಡ್‌ ಕಂಪನಿಗಳ ಜೊತೆ ಒಪ್ಪಂದ ಮಾಡಿ ಮಾರ್ಕೆಟಿಂಗ್‌ ವ್ಯವಸ್ಥೆ ಕಲ್ಪಿಸಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತೋಟಗಾರಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ನೀರಿನ ಬಗ್ಗೆ ಸಾಕ್ಷರತೆ: ಜಲಶಕ್ತಿ ಅಭಿಯಾನದ ಮೂಲ ಉದ್ದೇಶ ಜನರಲ್ಲಿ ನೀರಿನ ಬಗ್ಗೆ ಸಾಕ್ಷರತೆ ಮೂಡಿಸುವುದು, ನೀರಿನ ಮಹತ್ವ, ಮೌಲ್ಯ ತಿಳಿಸುವುದಾಗಿದೆ. ಕೆರೆಗಳ ಸಂರಕ್ಷಣೆ ಆಗಬೇಕು. ಗೋಕುಂಟೆ, ಕಲ್ಯಾಣಿ ಸ್ವಚ್ಛಗೊಳಿಸಿ ರಕ್ಷಣೆ ಮಾಡಬೇಕು.

ಒಡ್ಡುಗಳನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ನೀರು ಸಿಗುತ್ತದೆ. ಹಾಗಾಗಿ ಅರಣ್ಯ ರಕ್ಷಣೆ ಮಾಡಿದಾಗ ಮಾತ್ರ ಕಾಲಕಾಲಕ್ಕೆ ಮಳೆ ಆಗುತ್ತದೆ. ಪ್ರತಿಯೊಬ್ಬರು ನೀರಿಗೆ ಮಹತ್ವ ಕೊಡಬೇಕಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಮಮೂರ್ತಿ ತಿಳಿಸಿದ್ದಾರೆ.

 

● ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next