ನವದೆಹಲಿ: ನೆರೆಯ ಪಾಕಿಸ್ತಾನದ ಜೊತೆ ಸಾಮಾನ್ಯ ಸಂಬಂಧ ಹೊಂದಲು ಬಯಸುವುದಾಗಿ ತಿಳಿಸಿರುವ ಭಾರತ, ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯ ಪಾಕಿಸ್ತಾನಕ್ಕಿದೆ ಎಂದು ಪ್ರತಿಪಾದಿಸಿದೆ.
ಇದನ್ನೂ ಓದಿ:ಅಲ್ ಖೈದಾ ವಿಡಿಯೋ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಯಾಗುತ್ತಾರೆ? : ಸಿಎಂ
ಗುರುವಾರ (ಏಪ್ರಿಲ್ 07) ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಲಹೆಗಾರ ಇಸ್ಲಾಮಾಬಾದ್ ಭಾರತದ ಜತೆ ದ್ವಿಪಕ್ಷೀಯ ವ್ಯವಹಾರ ಪುನರಾರಂಭಿಸಲು ಬಯಸಿರುವುದಾಗಿ ಹೇಳಿರುವ ವರದಿ ಕುರಿತು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ.ಮುರಳೀಧರನ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಭಾರತವು ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಹೊರೆಯ ಸಂಬಂಧ ಹೊಂದಲು ಬಯಸುತ್ತದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಹಾಗೂ ಶಾಂತಿಯುತವಾಗಿ ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ಬದ್ಧವಾಗಿದೆ ಎಂಬುದು ಸರ್ಕಾರದ ದೃಢ ನಿಲುವಾಗಿದೆ ಎಂದು ಹೇಳಿದರು.
ಪಾಕಿಸ್ತಾನದ ತನ್ನ ದೇಶದಲ್ಲಿ ಇಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಮುರಳೀಧರನ್ ತಿಳಿಸಿದರು. 2019ರ ಫೆಬ್ರವರಿಯಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್ ನೊಳಗೆ ನುಗ್ಗಿ ಭಾರತದ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವುದಾಗಿ ವರದಿ ವಿವರಿಸಿದೆ.
ನಂತರ 2019ರ ಆಗಸ್ಟ್ ನಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಾಗಿ ಘೋಷಿಸಿದ ನಂತರ ಉಭಯ ದೇಶಗಳ ಸಂಬಂಧ ಮತ್ತಷ್ಟು ಕಡಿತಗೊಂಡಿತ್ತು ಎಂದು ವರದಿ ತಿಳಿಸಿದೆ.