Advertisement

ಒಂಟಿಯಲ್ಲ ಮಹಿಳೆ!

03:45 AM Mar 31, 2017 | |

ಸ್ಮಿತಾ ಸಂದರ್ಶನಕ್ಕೆ ಬಂದಿದ್ದಳು. ವಯಸ್ಸು ಮೂವತ್ತರ ಆಸುಪಾಸು. ಎಂಬಿಎ ಆಗಿತ್ತು. ಮಾರ್ಕೆಟಿಂಗ್‌ ವಿಭಾಗಕ್ಕೆ ಆಯ್ಕೆಯಾಗಿದ್ದಳು. ಚುರುಕು ಕಣ್ಣುಗಳು. ಏನಾದರೂ ಜವಾಬ್ದಾರಿ ಕೊಡು ಮಾಡಿ ತೋರಿಸುತ್ತೇನೆಂಬ ಆತ್ಮವಿಶ್ವಾಸದಿಂದ ಕೂಡಿದ ಮುಖ. ಸಂದರ್ಶನದ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ ಕಂಪೆನಿಯ ಎಂ. ಡಿ. ರಾಹುಲ್‌ ಲೋಕಾಭಿರಾಮವಾಗಿ ಮಾತನಾಡುತ್ತ, “ನಿಮ್ಮ ಫ್ಯಾಮಿಲಿಯ ಬಗ್ಗೆ ಹೇಳಿ’ ಎಂದರು. “ಐ ಆಮ್‌ ಸಿಂಗಲ್‌ ಲಿವಿಂಗ್‌, ಮಗ ಇದ್ದಾನೆ ಫಿಪ್ತ್ ಕ್ಲಾಸಿನಲ್ಲಿ ಓದುತ್ತಿದ್ದಾನೆ’ ಎಂದಿದ್ದಳು ನಿರ್ಲಿಪ್ತವಾಗಿ. ಅವನು ಅರೆಕ್ಷಣ ಅವಳ ಮುಖ ನೋಡಿದ್ದ. “ಸಿಂಗಲ್‌ ಲಿವಿಂಗ್‌ ಅಂದ್ರೆ ಹೇಗೆ?’ ಎಂದು ಕೇಳಬೇಕೆಂದಿದ್ದವನು ಶಿಷ್ಟಾಚಾರವಲ್ಲವೆಂದು ಸುಮ್ಮನಾದ. ಅವಳ ಬೋಲ್ಡ್‌ನೆಸ್‌ ಅವನಿಗೆ ಮೆಚ್ಚುಗೆಯಾಗಿತ್ತು. ಅವಳ ದನಿಯಲ್ಲಿ ಯಾವ ಅಳುಕೂ ಇರಲಿಲ್ಲ. ತನ್ನ ಸೆಕ್ರೆಟರಿಗೆ ಫೋನು ಮಾಡಿ ಆಫ‌ರ್‌ ಲೆಟರ್‌ ತರಲು ಹೇಳಿದ್ದ. ಮಿಕ್ಕ ಪ್ರಕ್ರಿಯೆಗಳೆಲ್ಲ ಮುಗಿದು “ಮುಂದಿನ ವಾರ ಜಾಯಿನ್‌ ಆಗುತ್ತೇನೆಂದು’ ಹೇಳಿ ಶೇಕ್‌ ಹ್ಯಾಂಡ್‌ ಕೊಟ್ಟು ಹೊರಟಿದ್ದಳು ಅವಳು. 

Advertisement

ಅವಳು ಹೋಗುವುದನ್ನೇ ನೋಡುತ್ತಿದ್ದ ಅವನಿಗೆ ತನ್ನ ಸೋದರತ್ತೆಯ ನೆನಪಾಗಿತ್ತು. ಅಪ್ಪನ ಒಬ್ಬಳೇ ತಂಗಿ, ವಿದ್ಯಾವಂತೆ ಗಂಡನ ದುರಭ್ಯಾಸಗಳನ್ನು ಸಹಿಸಲಾರದೆ ತವರಿಗೆ ಬಂದು ಬಿಟ್ಟಿದ್ದಳು. ಇದು ನಡೆದದ್ದು 25 ವರ್ಷಗಳ ಹಿಂದೆ. ಸೋದರತ್ತೆ ಆಶಾ ಹಾಗೆ ಬಂದಾಗ ರಾಹುಲ್‌ ಇನ್ನೂ ಚಿಕ್ಕವನು. ಮಗಳು ಹಾಗೆ ಗಂಡನನ್ನು ಬಿಟ್ಟು ಬಂದಳೆಂದು ರಾಹುಲನ ಅಜ್ಜಿ ಕೂಗಾಡಿದ್ದರು. ಮನೆತನದ ಮರ್ಯಾದೆ ತೆಗೆದಳೆಂದು ಗೊಳ್ಳೋ ಎಂದು ಅತ್ತಿದ್ದರು. ಗಂಡ ಎಂಥ‌ವನಾದರೂ ಮಕ್ಕಳಿಗಾಗಿ ನೀನು ಹೊಂದಿಕೊಂಡು ಹೋಗಬೇಕು ಎಂದು ಬುದ್ಧಿಮಾತು ಹೇಳಿದ್ದರು. ಆಶಾ ಯಾವ ಮಾತೂ ಕೇಳಿರಲಿಲ್ಲ. ಪುನಃ ಅಲ್ಲಿಗೆ ಹೋಗೆಂದರೆ ಮಕ್ಕಳನ್ನು ನಿಮ್ಮಲ್ಲೇ ಬಿಟ್ಟು ಆತ್ಮಹತ್ಯೆ ಮಾಡಿಕೊಳೆ¤àನೆ ಎಂದು ಹೆದರಿಸಿದ್ದಳು. ಅವಳೂ ಗಂಡನ ದುಶ್ಚಟಗಳನ್ನು ನೋಡಿ ನೋಡಿ ರೋಸಿಹೋಗಿದ್ದಳು. ಒಂದೆರಡು ದಿನವಾದರೆ ಸಹಿಸಬಹುದು. ಜಾಣೆಯಾದ ಆಶಾ ಜಗಳವಾಡಿಕೊಂಡು ಬಂದಿದ್ದರೂ ತನ್ನ ಒಡವೆಗಳು, ತನ್ನ ಸರ್ಟಿಫಿಕೇಟ್ಸ್‌ನ್ನು ಜೋಪಾನವಾಗಿ ತನ್ನ ಜೊತೆಯಲ್ಲಿ ತಂದಿದ್ದಳು. ಒಡವೆಗಳನ್ನು ಬ್ಯಾಂಕಿನಲ್ಲಿ ಇಟ್ಟು ಲೋನ್‌ ತೆಗೆದು ಮಕ್ಕಳನ್ನು ಹತ್ತಿರದ ಸ್ಕೂಲಿಗೆ ಸೇರಿಸಿ ತಾನೂ ಟಿಸಿಎಚ್‌ ಕಾಲೇಜ್‌ ಸೇರಿದ್ದಳು. ಅಮ್ಮನ ಅನಾದರವನ್ನು ಸಹಿಸಿಕೊಂಡೇ ಟಿಸಿಎಚ್‌ ಮಾಡಿ ಒಂದು ಒಳ್ಳೆಯ ಸ್ಕೂಲಿನಲ್ಲಿ ಕೆಲಸ ಗಿಟ್ಟಿಸಿದ್ದಳು. ದಾರಿಯೇನೂ ಸುಲಭವಾಗಿರಲಿಲ್ಲ. ಎಲ್ಲಿ ಹೋದರೂ “ಗಂಡ ಎಲ್ಲಿ?’ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಕುಗ್ಗಿ ಹೋಗುತ್ತಿದ್ದಳು. 

ಎರಡು ಮೂರು ಸ್ಕೂಲಿನಲ್ಲಿ ಇವಳು ಗಂಡ ಬಿಟ್ಟವಳೆಂದು ಅರ್ಹತೆಯಿದ್ದರೂ ಕೆಲಸ ಕೊಟ್ಟಿರಲಿಲ್ಲ. ಕೊನೆಗೆ ಒಂದು ಕಾನ್ವೆಂಟಿನಲ್ಲಿ ಇವಳ ಇಂಗ್ಲಿಷ್‌ ಭಾಷೆಯ ಮೇಲಿನ ಪ್ರಬುದ್ಧತೆಯನ್ನು ನೋಡಿ ಮರು ಮಾತನಾಡದೆ ಕೆಲಸ ಕೊಟ್ಟಿದ್ದರು. ಅದಕ್ಕೂ ರಾಹುಲನ ಅಜ್ಜಿ ರಂಪಾಟ ಮಾಡಿದ್ದರು. “ಅದು ಹೇಳಿ ಕೇಳಿ ಕ್ರಿಶ್ಚಿಯನ್‌ ಸ್ಕೂಲು ಅಲ್ಲೇ ಸೇರಬೇಕಾ? ಬೇರೆ ಯಾವುದೂ ಸಿಗಲಿಲ್ಲವಾ?’ ಎಂದು ಮೂತಿ ತಿವಿದಿದ್ದರು. ಅವರಿಗೆ ಸಮಾಜದಲ್ಲಿ ತುಂಬಾ ಪ್ರತಿಷ್ಠೆ ಇರುವ ಸಂಸಾರ ನಮ್ಮದು, ಮಗಳು ಹೀಗೆ ಮಾಡಿ ತಮ್ಮ ಪ್ರತಿಷ್ಠೆಗೆ ಕುಂದು ತಂದಳಲ್ಲಾ ಎಂಬ ಕೋಪ. ಸರೀಕರು ನೋಡಿದರೆ ತಮ್ಮ ಬಗ್ಗೆ ಏನೆಂದು ತಿಳಿದುಕೊಳ್ತಾರೆ ಎಂಬ ಕೀಳರಿಮೆ. ಆಶಾ ಎದ್ದರೆ ಕೂತರೆ ಅವಳಮ್ಮ ವರಾತ ತೆಗೆಯುತ್ತಿದ್ದರು. ಸಾಲದ್ದಕ್ಕೆ ನೆಂಟರ ಮನೆಗಳಿಗೆ ಸಮಾರಂಭಗಳಿಗೆ ಹೋದರೆ “ಮಗಳು ಮನೆ ಬಿಟ್ಟು ಬಂದದ್ದು ನಿಂಗೆ ಒಂದು ತಲೆಭಾರ ಅಲ್ವಾ ಲಲಿತಾ? ಕೊಟ್ಟ ಮನೆಗೆ ಹೊಂದಿಕೊಂಡು ಹೋಗಬೇಕಪ್ಪಾ ಹೆಣ್ಣುಮಕ್ಕಳು’ ಎಂದು ಅವಳಮ್ಮನ ಕಿವಿ ಚುಚ್ಚಿ ಕಳಿಸುತ್ತಿದ್ದರು. 

ಮಗಳ ಕಷ್ಟದ ಅರಿವಿಲ್ಲದೆ ಹಾಗೂ ಹೇಗಾದರೂ ಗಂಡನ ಜೊತೆಗೇ ಹೊಂದಿಕೊಂಡು ಹೋಗಬೇಕು ಎಂಬ ಮನಃಸ್ಥಿತಿಯ ಆ ತಾಯಿ, ಮನೆಗೆ ಬಂದು ಮಗಳಿಗೆ ಹಿಡಿಶಾಪಹಾಕುತ್ತಿದ್ದರು. ಆಶಾಳಿಗೆ ಮನೆಯ ಒಳಗೂ ಹಿಂಸೆ, ಮನೆಯ ಹೊರಗೂ ಹಿಂಸೆ. ಯಾರನ್ನೂ ಮಾತಾಡಬಾರದು, ಒಂದು ಅಲಂಕಾರ ಮಾಡಿಕೊಳ್ಳಬಾರದು, ಜೋರಾಗಿ ನಗಬಾರದು, ಒಬ್ಬರೊಡನೆಯೂ ಸಿಟ್ಟು ಮಾಡಬಾರದು ಎಲ್ಲದಕ್ಕೂ ಅವಳು ಗಂಡನನ್ನು ಬಿಟ್ಟು ಬಂದದ್ದೇ ಕಾರಣವೆಂಬಂತೆ ಅದನ್ನೇ ಕುಹಕವಾಡಿ ಹಂಗಿಸಿ ಮಾತಾಡಿ ತಮ್ಮ ನಾಲಿಗೆಯ ತೀಟೆ ತೀರಿಸಿಕೊಳ್ಳುತ್ತಿದ್ದರು.  ಗಂಡ ಸರಿಯಿರಲಿ ಇಲ್ಲದಿರಲಿ, ಹೊಡೆಯಲಿ ಬಡಿಯಲಿ ಕುಡಿಯಲಿ ಹೇಗಾದರೂ ಇರಲಿ ಅವನನ್ನೇ ಹೊಂದಿಕೊಂಡು ಹೋಗಬೇಕು ಎಂದು ಬುದ್ಧಿ ಹೇಳುವಂಥಾ ಕಾಲ. ಗಂಡನನ್ನು ಬಿಟ್ಟು ಬಂದರೆ ಅದೊಂದು ದೊಡ್ಡ ಮಹಾಪರಾಧ, ತಮ್ಮ ಮನೆಯ ಹೆಣ್ಣುಮಕ್ಕಳು ಇಂಥ ಹೆಣ್ಣಿನ ಜೊತೆ ಸೇರಿ ಕೆಟ್ಟು ಹೋದಾರೆಂಬ ಭಯ. ಆ ಪಾಪದ ಹೆಣ್ಣುಮಗಳು ಏನು ಮಾಡಿದರೂ ಸಂಶಯದ ದೃಷ್ಟಿಯಲ್ಲೇ ನೋಡುವುದು. ಇನ್ನಿಲ್ಲದ ಕಟ್ಟುಪಾಡುಗಳು. ಹೀಗೇ ಇರಬೇಕು ಹಾಗೇ ಇರಬೇಕು ಎಂಬ ನಿಬಂಧನೆಗಳು. ಎಲ್ಲವನ್ನೂ ಮರೆತು ಒಂದು ಕ್ಷಣ ನೆಮ್ಮದಿಯಾಗಿರಲೂ ಬಿಡರು. ಅವಳು ಮರೆತರೂ ಅವರು ತಮ್ಮ ಮಾತು, ನಡವಳಿಕೆಯಲ್ಲಿ ಅವಳನ್ನು ತಿವಿಯುತ್ತಲೇ ಇರುತ್ತಾರೆ. 

ಆಶಾ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಮಕ್ಕಳಿಬ್ಬರೂ ಹೈಸ್ಕೂಲಿಗೆ ಬಂದ ಕೂಡಲೇ ಮನೆಯಲ್ಲಿ ಮಕ್ಕಳಿಗೆ ಓದಿಗೆ ತೊಂದರೆಯಾಗುತ್ತದೆ ಎಂಬ ನೆಪ ಹೇಳಿ ಚಿಕ್ಕ ಮನೆಯೊಂದನ್ನು ಬಾಡಿಗೆಗೆ ಹಿಡಿದು ಬೇರೆ ಸಂಸಾರ ಪ್ರಾರಂಭಿಸಿಯೇ ಬಿಟ್ಟಿದ್ದಳು. ಅಮ್ಮ ಏನೇನು ಹಾರಾಡಿದರೂ ಜಪ್ಪೆನ್ನಲಿಲ್ಲ. ಮಕ್ಕಳಿಬ್ಬರನ್ನೂ ಚೆನ್ನಾಗಿ ಓದಿಸಿದ್ದಳು. ಅವರು ಓದಿ ತಮ್ಮ ಕಾಲ ಮೇಲೆ ನಿಂತ ಮೇಲೆ ಅವರೇ ಮೆಚ್ಚಿದ ಹುಡುಗರಿಗೆ ಕೊಟ್ಟು ಮದುವೆ ಮಾಡಿ ಈಗ ಮೊಮ್ಮಕ್ಕಳನ್ನಾಡಿಸುತ್ತಾ ತನ್ನದೇ ವಯಸ್ಸಿನವರೊಡನೆ ಮಹಿಳಾ ಸಮಾಜ ಅದೂ ಇದೂ ಎಂದು ಕೈಲಾದ ಸಮಾಜಸೇವೆ ಮಾಡುತ್ತಾ ನೆಮ್ಮದಿಯಾಗಿದ್ದಾಳೆ. ಅತ್ತೆಯ ಬದುಕು ರಾಹುಲನಿಗೆ ಯಾವತ್ತೂ ಹೆಮ್ಮೆ ಸ್ಫೂರ್ತಿ. 
 
ಯೋಚಿಸುತ್ತ ರಾಹುಲ ನಿಟ್ಟುಸಿರಿಟ್ಟ. ಅದು ಆಗ ಮನಸ್ಸುಗಳು ಸಂಕುಚಿತವಾಗಿದ್ದ ಕಾಲ. ಈಗ ಹಾಗಲ್ಲ, ಗ್ಲೋಬಲೈಸೇಷನ್‌ ಮನಸ್ಸುಗಳನ್ನು ಸಾಕಷ್ಟು ವಿಶಾಲವಾಗಿಸಿದೆ. ವಿದ್ಯಾವಂತರನ್ನಾಗಿಸಿದೆ. ಎಲ್ಲರಿಗೂ ಈಗ ಹಣ ಬೇಕಾದರೆ ದುಡಿಯುವುದು ಬೇಕು, ಬದುಕನ್ನು ತಮಗೆ ಬೇಕಾದಂತೆ ಕಟ್ಟಿಕೊಳ್ಳುವ ಧಾವಂತ. ಈ ಧಾವಂತದಲ್ಲಿ ಯಾರ ಬಗ್ಗೆಯೂ ಯೋಚಿಸಲು ಪುರುಸೊತ್ತು ಕಡಿಮೆ. ಯಾರ ಜೀವನದಲ್ಲಿ ಯಾರೂ ಮೂಗು ತೂರಿಸುವುದಿಲ್ಲ. 

Advertisement

ಅವನಿಗೆ ಇನ್ನೊಂದು ಘಟನೆ ನೆನಪಾಯಿತು. ಅವನ ಆಫೀಸಿನ ಕವಿತಾ ವಿಧವೆ. ಕವಿತಾಳ ಗಂಡ ಮೋಹನ್‌ ಆ್ಯಕ್ಸಿಡೆಂಟಿನಲ್ಲಿ ತೀರಿಕೊಂಡಾಗ ಅವನ ಕೆಲಸವನ್ನು ಕಂಪೆನಿ ಅವಳಿಗೆ ಕೊಟ್ಟಿತ್ತು. 

ಕೈಯಲ್ಲಿ ಮಗುವಿದ್ದ ಅವಳು ಮಗುವನ್ನು ಬೇಬಿ ಸಿಟ್ಟಿಂಗ್‌ನಲ್ಲಿ ಬಿಟ್ಟು ಆಫೀಸಿಗೆ ಓಡಿ ಬರುತ್ತಿದ್ದಳು. ಅನಿವಾರ್ಯತೆ  ಕಲಿಕೆಯ ತಾಯಿ ಎನ್ನುತ್ತಾರಲ್ಲಾ ಹಾಗೆಯೇ ಅವಳೂ ಆಸಕ್ತಿಯಿಂದ ಕೆಲಸ ಕಲಿತು ಪರಿಣಿತಳಾಗಿದ್ದಳು. ಮಗುವಿಗೆ ಮೂರು ವರ್ಷವಾಗುವ ಹೊತ್ತಿಗೆ ಅದೇ ಕಂಪೆನಿಯ ಇನ್ನೊಂದು ಬ್ರಾಂಚಿನ ಮೇನೇಜರ್‌ ಇವಳನ್ನು ನೋಡಿ ಮೆಚ್ಚಿ ಮದುವೆಯಾಗಿದ್ದರು. ಇದಕ್ಕೆ ಎರಡೂ ಮನೆಯವರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ರಾಹುಲನಿಗೆ ಇದನ್ನು ನೋಡಿ ಖುಷಿಯಾಗಿತ್ತು. ಅವನಿಗೆ ತನ್ನ ಅಮ್ಮನ ಕೊನೆಯ ತಂಗಿ ಚಿಕ್ಕ ವಯಸ್ಸಿಗೆ ವಿಧವೆಯಾದಾಗ ಅವಳಿಗೆ ವಿಧಿಸಿದ್ದ ಕಟ್ಟುಪಾಡುಗಳನ್ನು ನೆನೆದು ನಿಟ್ಟುಸಿರಿಟ್ಟಿದ್ದ. ಬಂಧುಗಳಲ್ಲೇ ಕೆಲವರು ಆಕೆಗೆ ಎರಡನೇ ಮದುವೆ ಮಾಡೆಂದು ಹೇಳಿದರೂ ಮನೆಯವರ್ಯಾರೂ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಅವರಿಗೆ ಬಿಟ್ಟಿ ದುಡಿಯುವ ಆಳೊಂದು ಬೇಕಾಗಿತ್ತು. ಚಿಕ್ಕಿಯನ್ನು ಮನಸೋ ಇಚ್ಛೆ ದುಡಿಸಿಕೊಂಡರು. ಇವರ ಸ್ವಾರ್ಥವನ್ನು ಕಂಡು ರೋಸಿದ್ದ ಚಿಕ್ಕಿ ಒಮ್ಮೆ ರಾತ್ರೋ ರಾತ್ರಿ ಮನೆಯಿಂದ ಮಾಯವಾಗಿದ್ದಳು. ಮನೆಯವರು ಕಂದಾಚಾರಕ್ಕೆ ಕಟ್ಟುಬಿದ್ದು ಚಿಕ್ಕಿಯ ಬಾಳನ್ನು ನರಕ ಮಾಡಿದ್ದರು. ಆದರೆ ಚಿಕ್ಕಿ ತನ್ನ ಬಾಳನ್ನು ತಾನೆ ಹಸನು ಮಾಡಿಕೊಂಡಿದ್ದಳು. 

ಮುಂಚೆಯಾದರೆ ಯಾರಾದರೂ ಪರಿಚಯವಾದ ತಕ್ಷಣ ಅವರ ಊರು-ಕೇರಿ, ಕೆಲಸ-ಸಂಬಳ, ಸಂಸಾರ ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ಕೇಳಿ ತಿಳಿದಿದುಕೊಳ್ಳುವ ಕಾತುರದ ಕಾಲವೊಂದಿತ್ತು. ಈಗ ಯಾರೂ ಹಾಗಿಲ್ಲ. ಆ ಅಭ್ಯಾಸ ಕ್ರಮೇಣ ಕಡಿಮೆಯಾಗುತ್ತಿದೆ. ಅವರು ಸಿಂಗಲ್‌ ಲಿವಿಂಗ್‌ ಅಂತೆ, ಅವರು ವಿಧವೆ ಅಂತೆ ಎಂದೆಲ್ಲಾ ಈಗ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅವಳು ವಿಧವೆ ಎಂದು ಗೊತ್ತಾದ ಕೂಡಲೇ ಅವಳ ಉಡುಗೆ-ತೊಡುಗೆ, ಅಲಂಕಾರದ ಬಗ್ಗೆ ಕುತೂಹಲದಿಂದ ನೋಡುವುದಿಲ್ಲ. ಈಗ ಎಲ್ಲರೂ ಕೆಲಸಕ್ಕೆ ಹೋಗುವುದು ಅನಿವಾರ್ಯ. ಕೆಲಸಕ್ಕೆ ಹೋಗುವವರು ಅವರ ಅಭಿರುಚಿಗೆ ತಕ್ಕಂತೆ ಅಲಂಕರಿಸಿಕೊಳ್ಳುತ್ತಾರೆ. ಅದು ಅವರವರ ಇಷ್ಟ. ಮುಂಚೆಯಾದರೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಕಂಡರೆ ಮದುವೆಯಾಗಿದೆಯಾ ಇಲ್ಲವಾ ಎಂದು ನೋಡಲು ಥಟ್ಟನೆ ಕಾಲೆರಳನ್ನು ಗಮನಿಸುತ್ತಿದ್ದರು. ಈಗ ಅದೂ ಇಲ್ಲ. ಏಕೆಂದರೆ ಕಾಲುಂಗುರ ಹಾಕುವುದು ಈಗೇನೂ ಅನಿವಾರ್ಯವಲ್ಲ. ಇಷ್ಟವಿದ್ದರೆ ಹಾಕಬಹುದು ಇಲ್ಲದಿದ್ದರೆ ಇಲ್ಲ. ಮೊದಲೆಲ್ಲ ಮಣಭಾರದ ಮಾಂಗಲ್ಯದ ಸರಗಳನ್ನು ಹಾಕಲೇ ಬೇಕಿತ್ತು. ಈಗ ಹಾಗಿಲ್ಲ. ಫ್ಯಾಷನ್ನಾಗಿ ಚಿಕ್ಕದೊಂದು ಸರವನ್ನು ಹಾಕುತ್ತಾರೆ. 

ಮೊದಲೆಲ್ಲಾ ಮಹಿಳೆಯರು ಬ್ಯಾಂಕ್‌ ಕೆಲಸ ಅಥವಾ ಸ್ಕೂಲಿನಲ್ಲಿ ಶಿಕ್ಷಕಿಯ ಕೆಲಸ ಅಷ್ಟೇ ಆಯ್ಕೆ ಮಾಡಿಕೊಳ್ಳಬೇಕಿತ್ತು. ಇದಾದರೆ ಸಂಜೆ ಬೇಗ ಮನೆ ಸೇರಬಹುದೆಂದು. ಬೇರೆ ಕೆಲಸಕ್ಕೆ ಯಾರೂ ಪ್ರೋತ್ಸಾಹಿಸುತ್ತಲೇ ಇರಲಿಲ್ಲ. ಹೆಣ್ಣುಮಕ್ಕಳನ್ನು ಹೆಚ್ಚಿನ ಓದಿಗೆ ಹಾಸ್ಟೆಲಿನಲ್ಲಿ ಬಿಡಲೂ ಹಿಂದೆ ಮುಂದೆ ನೋಡುತ್ತಿದ್ದರು. ಈಗ ಹಾಗಿಲ್ಲ ವೇಗವಾಗಿ ಸಾಗುವ ಕಾಲದ ಜೊತೆ ನಾವೂ ವೇಗದಿಂದಲೇ ಸಾಗಬೇಕಾಗಿದೆ. ಓಟದಲ್ಲಿ ಹಿಂದೆ ಬೀಳಲು ಯಾರಿಗೂ ಇಷ್ಟವಿಲ್ಲ. ಆದ್ದರಿಂದಲೇ ಮಹಿಳೆಯರು ಎಲ್ಲಾ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಇದನ್ನು ಹೇಳುವಾಗ ನನಗೊಂದು ಘಟನೆ ನೆನಪಾಗುತ್ತದೆ. ಇನ್ಫೋಸಿಸ್‌ನ ಸುಧಾಮೂರ್ತಿಯವರು ಇಂಜಿನಿಯರಿಂಗ್‌ ಓದುವಾಗ ಅವರ ತರಗತಿಯಲ್ಲಿ ಅವರೊಬ್ಬರೇ ಮಹಿಳೆಯಂತೆ. ಆ ಕಾಲದಲ್ಲಿ ಮಹಿಳೆಯರು ಇಂಜಿನಿಯರಿಂಗ್‌ ಓದುತ್ತಿರಲಿಲ್ಲ. ಬುದ್ಧಿವಂತರಾಗಿದ್ದರೂ ಡಿಗ್ರಿಗೇ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಅಂಥ ಪರಿಸ್ಥಿತಿಯಲ್ಲಿ ಸುಧಾಮೂರ್ತಿಯವರು ಇಡೀ ಇಂಜಿನಿಯರಿಂಗ್‌ ತರಗತಿಗೇ ಒಬ್ಬರೇ ವಿದ್ಯಾರ್ಥಿನಿಯಾಗಿ ಸೇರಿ ಹೊಸ ಭಾಷ್ಯವನ್ನೇ ಬರೆದರು. ಅದು ನಂತರ ಎಷ್ಟೋ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾದದ್ದು ಸುಳ್ಳಲ್ಲ. 

– ವೀಣಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next