ಕೈಗೆ ಸಿಕ್ಕ ಪುಸ್ತಕ ಓದಿ, ತೋಚಿದ್ದು ಗೀಚುತ್ತಾ, ಸಂಭ್ರಮಿಸುತ್ತಾ ಕಾಲಕಳೆಯುತ್ತಿದ್ದವಳು, ಜೀವನದ ಮುಂದಿನ ತಿರುವುಗಳ ಅರಿವೇ ಇಲ್ಲದೆ, ಕನಸಿನ ಬೆಟ್ಟದ ತುತ್ತ ತುದಿಗೆ ಬಂದು ನಿಂತಿದ್ದೇನೆ. ಸ್ವತಂತ್ರ ಹಕ್ಕಿಯಾಗಿ ಹಾರಾಡುತ್ತಿದ್ದ, ಪ್ರಶಾಂತವಾಗಿ ಮಲಗಿದ್ದ ಹೃದಯವನ್ನು ಬಡಿದೆಬ್ಬಿಸಿ ಸುಂದರ ಕನಸುಗಳ ಹೊಸ ಪ್ರಪಂಚಕ್ಕೆ ಲಗ್ಗೆ ಇಡುವ ಹಾಗೆ ಮಾಡಿದ ಹುಡುಗನೇ, ನಿನ್ನ ಮಾತ್ರ ನಾ ಸುಮ್ಮನೆ ಬಿಡುವುದಿಲ್ಲ.
ಮೌನದಲ್ಲೆ ಉತ್ತರಿಸುವ ಮನಸನ್ನೇ ಬಯಸಿ ಹೃದಯ ಧಾವಿಸಿ ನಿನ್ನತ್ತ ಓಡುತ್ತಿದೆ. ಬಿಡುವಿಲ್ಲದೆ ಪಟಪಟ ಮಾತನಾಡುವ ನಾನೆಲ್ಲಿ ? ನೂರು ಮಾತುಗಳಿಗೆ ನಾಲ್ಕೇ ಉತ್ತರ ನೀಡುವ ನೀನೆಲ್ಲಿ? ಒಂದೂವರೆ ವರ್ಷ¨ಲ್ಲಿ ಯಾವಾಗ ಈ ವಿಚಿತ್ರ ಭಾವನೆಗಳು ಕಾಡಲು ಶುರುವಾದವೆಂಬುದರ ಪರಿವೆ ನನಗಿಲ್ಲ. ಅದ್ಯಾವ ಘಳಿಗೇಲಿ ನೀನು ಮನಸು ಆವರಿಸಿದೆಯೋ…
ತಂಗಾಳಿಗೆ ಮೈಯೊಡ್ಡಿ ನದಿ ತಿರದಲ್ಲಿ ನಿನ್ನೊಂದಿಗೆ ಹರಟುತಿದ್ದರೆ ಸ್ವರ್ಗದಲ್ಲಿ ತೇಲಾಡಿದ ಹಾಗೆ, ನಿನ್ನ ಪಕ್ಕ ಕುಳಿತು ಅಲೆಗಳ ಏರಿಳಿತಗಳನ್ನು ನೋಡುತ್ತಿದ್ದರೆ, ಮನಸ್ಸಲ್ಲಿರುವ ಎಲ್ಲಾ ಮಾತುಗಳನ್ನು ಹೊರಹಾಕಲು ಪ್ರಕೃತಿಯೇ ಆ ಭವ್ಯ ಘಳಿಗೆಯನ್ನು ಸೃಷ್ಟಿಸಿರಬಹುದಾ? ಎಂಬ ಭಾವನೆ. ಅಲೆಗಳ ಏರಿಳಿತದ ಜೊತೆಗೆ ಎದೆಬಡಿತವೂ ಹೆಚ್ಚಾಗುತ್ತಿತ್ತು. ಗಾಳಿ, ಅಲೆಗಳು ಮೈ ಸ್ಪರ್ಶಿಸಿದಂತೆಲ್ಲ ಹೇಳಬೇಕೆಂಬ ವಿಷಯಗಳು ಗಂಟಲಲ್ಲೆ ಉಳಿದುಬಿಡುತ್ತಿದ್ದವು. ಕೊನೆಗೆ ಭಾನುದೇವ ಮನೆಸೇರುವ ಸಮಯ ಎಂದು ಅರಿವಾದಾಗ ಮತ್ತೆ ಸಾವರಿಸಿಕೊಂಡು ಕಣ್ಣುಮುಚ್ಚಿ ಪ್ರೀತಿ ನಿವೇದನೆ ಮಾಡಿಬಿಟ್ಟಿದ್ದೆ. ತಲೆಮೇಲಿರುವ ದೊಡ್ಡ ಬಂಡೆಯನ್ನು ಕೆಳಗಿಳಿಸಿದಷ್ಟು, ಮನಸು ನಿರಾಳವಾಗಿತ್ತು. ಏನಾದರೂ ಆಗಲಿ ಒಟ್ಟಿನಲ್ಲಿ ಮನಸಲ್ಲಿರುವುದನ್ನು ಹೇಳಿಬಿಟ್ಟರೆ ಏನೋ ಸಮಾಧಾನ.
ಗುಡ್ ಮಾರ್ನಿಂಗ್, ಗುಡ್‌ನೈಟ್ ವಿಶಸ್‌ನ ಜೊತೆ, ಆಗಾಗ ಬರುತ್ತಿದ್ದ ಲವ್ ಇಮೇಜ್ ನೋಡಿ ಕೋಪ ಬರುತ್ತಿತ್ತು, ಕೆಲವೊಂದು ಸಲ ಪಿತ್ತ ನೆತ್ತಿಗೇರಿ ಬೈದುಬಿಡೋಣ ಅನಿಸುತ್ತಾ ಇದ್ದರೂ ಬಯ್ಯುತ್ತಿರಲಿಲ್ಲ, ಕೋಪ ಬಂದಿರೋ ಇಮೋಜಿ ಕಳಿÕ ಸುಮ್ನಾಗ್ತಿದ್ದೆ. ಆ ದಟ್ಟವಾದ ಹುಬ್ಬುಗಳು, ಪ್ರೀತಿ ತುಂಬಿದ ಪುಟ್ಟ ಕಂಗಳು, ಹುಣ್ಣಿಮೆ ಬೆಳದಿಂಗಳಂಥ ಮುದ್ದು ಮುಖ, ನೋವಿಗೆ ದಿವ್ಯ ಔಷಧಿಯ ಗುಳಿಗೆಯ ಹಾಗಿರುವ ಮೊಗದಲ್ಲಿನ ಮಂದಹಾಸ ಮನಸ್ಸನ್ನು ತುಂಬಿಕೊಂಡಿತ್ತು.
ಇಷ್ಟೆಲ್ಲಾ ಆದ ಮೇಲೆ ಮನಸು ನಿನಗೆ ಸೋಲದೇ ಇರೋದಕ್ಕೆ ಹೇಗೆ ಸಾಧ್ಯ?
ಎಂ. ವಿ. ಕರಕಿಹಳ್ಳಿ, ಕೊಪ್ಪಳ