ಕೊಡಗು ಮಾರ್ಗವಾಗಿ ಕೇರಳಕ್ಕೆ ರೈಲು ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ ಎಂಬ ಸುಳ್ಳು ಮಾಹಿತಿ ಹರಡುತ್ತಿದ್ದು, ಇದರಿಂದ ಕೆಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಈಗಾಗಲೇ ಸಮೀಕ್ಷೆ ಮಾಡಲಾಗಿರುವಂತೆ ಕುಶಾಲನಗರದವರೆಗೆ ಮಾತ್ರ ರೈಲು ಬರಲಿದೆ ಎಂದು ಸಂಸದರು ಹೇಳಿದರು.
ಮೈಸೂರು-ಬಂಟ್ವಾಳ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಎಂದು ಪ್ರಕಟಿಸಲಾಗಿದೆ. ಈ ರಸ್ತೆಯನ್ನು ಮೈಸೂರಿನಿಂದ ಮಡಿಕೇರಿ ವರೆಗೆ ನಾಲ್ಕು ಪಥ, ಹಾಗೆಯೇ ಚೆನ್ನರಾಯಪಟ್ಟಣ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ, ಮಾಕುಟ್ಟ ಮಾರ್ಗ ರಸ್ತೆ ಮತ್ತು ಮಡಿಕೇರಿ-ಭಾಗಮಂಡಲ ರಸ್ತೆಯನ್ನು ಸಹ ಮೇಲ್ದರ್ಜೆಗೇರಿಸಲು ಪರಿಶೀಲಿಸಲಾಗುತ್ತಿದೆ ಎಂದು ಸಂಸದರು ತಿಳಿಸಿದರು.
ಸೂಕ್ಷ್ಮ ಪರಿಸರ ತಾಣ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಸದ್ಯದಲ್ಲೇ ಕಂದಾಯ, ಅರಣ್ಯ ಹಾಗೂ ಜಿಲ್ಲೆಯ 53 ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರ ಸಭೆಯನ್ನು ಶೀಘ್ರ ಆಹ್ವಾನಿಸಲಾಗುವುದು ಎಂದು ಸಂಸದರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
Advertisement
ಕೊಡಗು ಜಿಲ್ಲೆ ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ಇನ್ನೂ ಕೆಲವು ಗ್ರಾಮಗಳಿಗೆ ದೂರ ಸಂಪರ್ಕ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ಹಮ್ಮಿಯಾಲ, ಮುಟ್ಲು ಮತ್ತಿತರ ಕಡೆಗಳಲ್ಲಿ ಕೂಡಲೇ ಮೊಬೈಲ್ ಟವರ್ ಅಳವಡಿಸುವಂತೆ ಭಾರತ ಸಂಚಾರ ನಿಗಮ ನಿಯಮಿತ ಅಧಿಕಾರಿಗಳಿಗೆ ತಿಳಿಸಿದರು.
Related Articles
Advertisement
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ಅವರು ಜಿಲ್ಲೆಯಲ್ಲಿ ವಸತಿ ಯೋಜನೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ನಿವೇಶನದ ಕೊರತೆ ಇಲ್ಲ. ಆದರೆ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪಿಡಿಒ ಗಳು ಕಂದಾಯ ಇಲಾಖೆ ಅಧಿಕಾರಿ ಗಳೊಂದಿಗೆ ಸೇರಿ ಜಾಗ ಗುರುತಿಸುವತ್ತ ಗಮನಹರಿಸಬೇಕಿದೆ ಎಂದು ಅವರು ನಿರ್ದೇಶನ ನೀಡಿದರು. ಈ ಸಂಬಂಧ ಮಾತನಾಡಿದ ಪ್ರತಾಪ್ ಸಿಂಹ ಅವರು ಜಿಲ್ಲೆಯಲ್ಲಿ ನಿವೇಶನಕ್ಕಾಗಿ ಬೇಡಿಕೆ, ಮನೆ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣ ಸಂಬಂಧಿಸಿದಂತೆ ಎಷ್ಟು ಪ್ರಗತಿಯಾಗಿದೆ, ಎಷ್ಟು ಬೇಕಿದೆ, ಬಾಕಿ ಇರುವ ಕಾಮಗಾರಿ ಎಷ್ಟು ಎಂಬ ಬಗ್ಗೆ ಕೂಡಲೇ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಿತಿ ಸದಸ್ಯರಾದ ತೆಕ್ಕಡೆ ಶೋಭಾ ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಬಿ.ಆರ್.ಗಿರೀಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಯಾ ದೇವಿ ಗಲಗಲಿ, ಉಪ ಅರಣ್ಯ ಸಂರಕ್ಷಣಾ ಧಿಕಾರಿಗಳಾದ ಕ್ರಿಸ್ತರಾಜ, ಜಯ, ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಇಬ್ರಾಹಿಂ, ನಾನಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿ ನೀಡಿದರು.