ಬಸವಕಲ್ಯಾಣ: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ಮತ ನೀಡಿ ಗೆಲ್ಲಿಸಿ ಕಳುಹಿಸಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿಯಾಗಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಪರ್ತಾಪುರ ಗ್ರಾಮದ ಸಂಜುಕುಮಾರ ಮದಕಟ್ಟೆ ಮನೆಯಲ್ಲಿ ಆಯೋಜಿಸಿದ್ದ ಗಣ್ಯರೊಂದಿಗೆ ಸಂವಾದ ಹಾಗೂ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಬಂದರೆ, ಉಳಿದೆರಡು ವರ್ಷಗಳ ಕಾಲಾವಧಿಯಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ನೀಡುವ ಮೂಲಕ ಬಸವಕಲ್ಯಾಣದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾರ್ಯಕರ್ತರು ಪಕ್ಷಕ್ಕೆ ಬೆನ್ನೆಲುಬಿದ್ದಂತೆ. ಕಾರ್ಯಕರ್ತರ ಪರಿಶ್ರಮದಿಂದಲೇ ಕೇಂದ್ರದಲ್ಲಿ ನಿರಂತರ ಎರಡು ಬಾರಿ ಬಿಜೆಪಿ ಸರ್ಕಾರ ಬಂದಿದೆ. ಅನಿರೀಕ್ಷಿತವಾಗಿ ಬಂದ ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು
ಎಂದರು.
ಬಿಜೆಪಿಯೊಂದಿಗಿನ ನಂಟು ಕಡಿದುಕೊಂಡು ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪರ್ಧಿಸಿದ್ದಾರೆ. ಜನರು ಅಭಿವೃದ್ಧಿ, ವ್ಯಕ್ತಿ, ಪಕ್ಷ ನೋಡಿ ಮತ ನೀಡುವಂತೆ ಹೇಳಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪಕ್ಷ ನನಗೆ ಅನ್ಯಾಯ ಮಾಡಿದೆ ಎಂದು ಹೇಳುತ್ತ ತಿರುಗಾಡುತ್ತಿದ್ದಾರೆ. ಅವರನ್ನು ನೆಚ್ಚಿಕೊಂಡ ಸಾವಿರಾರು ಕಾರ್ಯಕರ್ತರಿಗೆ ಮೋಸ ಮಾಡಿ ದೆಹಲಿಯಲ್ಲಿ ತಂಗಿದ್ದರು. ಖೂಬಾ ಅವರು ಸ್ವಾಭಿಮಾನಕ್ಕಾಗಿ ಅಲ್ಲ, ತಮ್ಮ ಸ್ವಾರ್ಥಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಆರೋಪಿಸಿದರು.
ಬಿಜೆಪಿ ಪ್ರಕೋಷ್ಠಕದ ರಾಜ್ಯ ಸಂಚಾಲಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಅಲ್ಲ, ಅದು ಈಗಾಗಲೇ ಮುಳುಗಿ ಹೋಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಅಣ್ಣಾರಾವ್ ರಾಠೊಡ್, ಗುಂಡುರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರ ನಾಗದೆ, ಪ್ರದೀಪ್ ಗಡವಂತೆ, ಪದ್ಮಾಕರ ಪಾಟೀಲ್, ಶಿವಕುಮಾರ ಗಂದಗೆ ಇದ್ದರು.