Advertisement

ಬರೀ ರಾಜಕಾರಣ; ಕ್ಷೇತ್ರಾಭಿವೃದ್ಧಿ ಗೌಣ?

04:30 PM Apr 09, 2018 | |

ಹಗರಿಬೊಮ್ಮನಹಳ್ಳಿ: 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಿಂದಾಗಿ ಕೊಟ್ಟೂರು ಕ್ಷೇತ್ರವನ್ನು ರದ್ದುಗೊಳಿಸಿ, ಎಸ್‌ಸಿ ಮೀಸಲು ಕ್ಷೇತ್ರವನ್ನಾಗಿ ರಚಿಸಲಾದ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸದ್ಯ ರಾಜಕೀಯ ಧ್ರುವೀಕರಣ ನಡೆಯುತ್ತಿದೆ.

Advertisement

ದಶಕಗಳ ಮಾಲವಿ ಜಲಾಶಯಕ್ಕೆ ಅನುದಾನ, ಅಭಿವೃದ್ಧಿಯನ್ನೇ ನೆಚ್ಚಿಕೊಂಡಿರುವ ಭೀಮಾನಾಯ್ಕ, ವಿರೋಧದ ನಡುವೆಯೂ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದರೆ, ಮಾಜಿ ಶಾಸಕ ಬಿಜೆಪಿಯ ನೇಮಿರಾಜ್‌ ನಾಯ್ಕ, 2013ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 125 ಮತಗಳ ಅಂತರದಲ್ಲಿ ಸೋಲನ್ನನುಭವಿಸಿದ ಅನುಕಂಪ ಈ ಬಾರಿ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದು, ಮೇ 15ರಂದು ಭವಿಷ್ಯ ನಿರ್ಧಾರವಾಗಲಿದೆ.

ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಹಾಲಿ ಶಾಸಕ ಭೀಮಾನಾಯ್ಕ, ಕೊನೆ ಕ್ಷಣದಲ್ಲಿ ಜೆಡಿಎಸ್‌ ಪಕ್ಷದಿಂದ ನಾಮಪತ್ರ ಸಲ್ಲಿಸಿ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಚುನಾವಣೆಯಲ್ಲೂ ಬಿಜೆಪಿಯ ನೇಮಿರಾಜ್‌ನಾಯ್ಕ ವಿರುದ್ಧ 125 ಮತಗಳ ಅಂತರದಿಂದ ಜಯಗಳಿಸಿದ್ದರು. ಒಂದೆರಡು ವರ್ಷಗಳ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಭೀಮಾನಾಯ್ಕ, 35 ವರ್ಷಗಳ ಬಹು ಬೇಡಿಕೆಯಾಗಿದ್ದ ಮಾಲವಿ ಜಲಾಶಯಕ್ಕೆ 152 ಕೋಟಿ ರೂ., ಚಿಲವಾರ ಬಂಡಿ ಏತ ನೀರಾವರಿಗೆ 60 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ. ಜೆಡಿಎಸ್‌ ತೊರೆದು ಇದೀಗ ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದು, ಇದಕ್ಕೆ ಪಕ್ಷದಲ್ಲೇ ತೀವ್ರ ಭಿನ್ನಮತ ಎದುರಾಗಿದೆ. 

ಜಿಲ್ಲೆಯ ಎರಡು ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅಸ್ಪೃಶ್ಯ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸುತ್ತಿದ್ದು, ವಿರೋಧದ ನಡುವೆಯೂ ಭೀಮಾನಾಯ್ಕ ಅವರಿಗೆ ಕೈ ಟಿಕೆಟ್‌ ಖಚಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
 
ಇನ್ನು ಬಿಜೆಪಿಯಲ್ಲೂ ಟಿಕೆಟ್‌ ಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು, ನೇಮಿರಾಜ್‌ ನಾಯ್ಕ ಅವರಿಗೆ ಟಿಕೆಟ್‌ ಖಚಿತಪಡಿಸಿದ್ದರು. ಆದರೆ, ರಾಜೇಂದ್ರನಾಯ್ಕ ಎನ್ನುವವರು ಸಹ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನೀಡುತ್ತಿದ್ದು, ಪಕ್ಷದಲ್ಲಿ ಶೀತಲ ಸಮರಕ್ಕೆ ಕಾರಣವಾಗಿದೆ. ಅಲ್ಲದೇ, ರಾಜೇಂದ್ರನಾಯ್ಕ, ತಾನು ಅಮಿತ್‌ ಶಾ ಹ್ಯಾಂಡ್‌ ಎಂದು ಕ್ಷೇತ್ರಾದ್ಯಂತ ಹೇಳಿಕೊಳ್ಳುತ್ತಿರುವುದು ನೇಮಿರಾಜ್‌ ನಾಯ್ಕ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದು, ಮತದಾರ ಯಾರಿಗೆ ಮಣೆ ಹಾಕುವನೋ ಕಾದು ನೋಡಬೇಕಾಗಿದೆ.

ಕ್ಷೇತ್ರದ ಬೆಸ್ಟ್‌ ಏನು?
ಕ್ಷೇತ್ರದ ಮಹತ್ವಾಕಾಂಕ್ಷಿ ಯೋಜನೆ ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸಲು 152 ಕೋಟಿ ರೂ, ಚಿಲವಾರು ಬಂಡಿ ಏತ ನೀರಾವರಿಗೆ 60 ಕೋಟಿ ರೂ. ಅನುದಾನ  ಡುಗಡೆಯಾಗಿದೆ. ಇದರೊಂದಿಗೆ ಕ್ಷೇತ್ರದ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನು ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳು ಅರ್ಹ ಫಲಾನುಭವಿಗಳ ಕೈಗೆ ತಲುಪಿಸಲಾಗಿದೆ. ಸಿಸಿ ರಸ್ತೆ ನಿರ್ಮಾಣ, 12 ಸಾವಿರ ಮನೆ ನಿರ್ಮಾಣ, ಜೆಸ್ಕಾಂ ಕಚೇರಿ ಪಟ್ಟಣಕ್ಕೆ ಸ್ಥಳಾಂತರ ಸೇರಿದಂತೆ ವಿವಿಧ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಿಸಲಾಗಿದೆ.

Advertisement

ಕ್ಷೇತ್ರದ ದೊಡ್ಡ ಸಮಸ್ಯೆ?
ಕ್ಷೇತ್ರದ ಹತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಮರಬ್ಬಿಹಾಳು, ನಂದಿದುರ್ಗಾ, ತಂಬ್ರಹಳ್ಳಿ ಎರಡನೇ ಹಂತದ ನೀರಾವರಿ ಯೋಜನೆಗೆ ಅನುದಾನ ಒದಗಿಸಿಲ್ಲ. ನಿವೇಶನ ಗೊಂದಲದಿಂದಾಗಿ ಮಿನಿವಿಧಾನಸೌಧ ನಿರ್ಮಾಣವಾಗಿಲ್ಲ. ಪಿಯು ಕಾಲೇಜಿನಲ್ಲಿ ನಿರ್ಮಿಸಬೇಕಿದ್ದ ಸ್ಟೇಡಿಯಂ ಸ್ಥಿತಿ ರೂಪುರೇಷೆಯಲ್ಲೇ ಕಾಲಹರಣವಾಯಿತು. ಹೈಕ ಅನುದಾನದಡಿ ಕೈಗೆತ್ತಿಕೊಳ್ಳಲಾಗಿದ್ದ ಬಹುತೇಕ ಕಾಮಗಾರಿಗಳ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದೆ.

ಶಾಸಕರು ಏನಂತಾರೆ?
ಕಳೆದ ಐದು ವರ್ಷದಿಂದಲೂ ನಿರಂತರವಾಗಿ ಜನರ ನಡುವೆಯೇ ಇದ್ದು, 35 ವರ್ಷಗಳಿಂದ ಆಗದ ಮಾಲವಿ ಜಲಾಶಯ ಯೋಜನೆಗೆ 152 ಕೋಟಿ ರೂ., ಚಿಲವಾರು ಬಂಡಿ ಯೋಜನೆಗೂ 60 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಎರಡೂ ಯೋಜನೆಗಳಿಂದ ಒಟ್ಟು 15 ಸಾವಿರ ಎಕರೆ ನೀರಾವರಿ ಪ್ರದೇಶವಾಗಲಿದೆ. ಈವರೆಗೂ ತಮ್ಮದೇ ಸರಕಾರವಿದ್ದರೂ ಯೋಜನೆಗಳನ್ನು ಈಡೇರಿಸದೆ ಇದ್ದವರೂ
ಈಗ ವಿನಾಕಾರಣ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಕ್ಷೇತ್ರದಲ್ಲಿ 1500 ಕೋಟಿ ರೂ. ಅನುದಾನದಲ್ಲಿ ಸರ್ವತೋಮುಖ ಅಭಿವೃದ್ಧಿ ಮಾಡಲಾಗಿದೆ. ಟೀಕಿಸುವವರಿಗೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ.
ಭೀಮಾನಾಯ್ಕ, ಮಾಜಿ ಶಾಸಕ.

ಕ್ಷೇತ್ರ ಮಹಿಮೆ
ಕ್ಷೇತ್ರದಲ್ಲಿ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ ರಾಜ್ಯದ ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕನ್ನಡದ ಮೊದಲ ಗದ್ಯಕೃತಿ ವಡ್ಡರಾಧನೆಯ ಕತೃ ಶಿವಕೋಟ್ಯಾಚಾರ್ಯರು ಕ್ಷೇತ್ರದ ಕೋಗಳಿ ಗ್ರಾಮದವರಾಗಿದ್ದಾರೆ. ವಿಜಯನಗರ ಅರಸರ ಕಾಲದಲ್ಲಿ
ಹರಪನಹಳ್ಳಿ ಪಾಳೆಯಗಾರರು ತಂಬ್ರಹಳ್ಳಿಯ ಬಂಡೇ ರಂಗನಾಥೇಶ್ವರ ದೇವಸ್ಥಾನ ನಿರ್ಮಿಸಿ ಆಳ್ವಿಕೆ ನಡೆಸಿದ್ದಾರೆ.
ಅಂಬಳಿ ಕಲ್ಲೇಶ್ವರ, ತಿಮಲಾಪುರದ ವೆಂಕಟರಮಣ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ರೈತಪರವಾದ ಯಾವುದೇ ಯೋಜನೆಗಳಿಲ್ಲ. ರಾಜ್ಯ ಸರಕಾರ ರೈತರ 50 ಸಾವಿರ ರೂ. ಸಾಲಮನ್ನಾ ಮಾಡಿದ ಮಾದರಿಯಲ್ಲಿಯೇ ಕೇಂದ್ರದಿಂದಲೂ ರೈತರು ಸಾಲಮನ್ನಾ ಮಾಡುವ ನೀರಿಕ್ಷೆ ಹೊಂದಿದ್ದರು. ಆದರೆ, ಬಿಜೆಪಿ ಸಂಸದರ ಇಚ್ಛಾಶಕ್ತಿ ಕೊರತೆಯಿಂದಾಗಿ ರೈತರಿಗೆ ನಿರಾಸೆಯುಂಟಾಗಿದೆ. ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಆಗದಂತಹ ಯೋಜನೆಗಳು ಪ್ರಮುಖವಾಗಿ ಮಾಲವಿ ಜಲಾಶಯ, ಚಿಲವಾರು ಬಂಡಿ ಯೋಜನೆಗಳು ಜಾರಿಗೊಂಡಿರುವುದು ಸ್ವಾಗತಾರ್ಹ.
ಹತ್ತಿ ಅಡಿವೆಪ್ಪ

ರಾಜ್ಯ ಸರಕಾರ ಧರ್ಮ ಒಡೆಯುವುದರಲ್ಲಿ ಕಾಲಹರಣ ಮಾಡಿದೆ. ಕೇವಲ ಜಾತಿ ಆಧಾರವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಪರಿಗಣಿಸುವಲ್ಲಿ ವಿಫಲವಾಗಿದೆ. ವೀರಶೈವ ಮತ್ತು ಲಿಂಗಾಯತ ವಿಭಜನೆ ಕೇವಲ ಕಾಂಗ್ರೆಸ್‌ ಕುತಂತ್ರವಲ್ಲದೇ ಬೇರೆನೂ ಅಲ್ಲ. ಪ್ರತಿವರ್ಷ 10 ಸಾವಿರ ಕೋಟಿ ರೂ. ನೀರಾವರಿ ಯೋಜನೆಗಳಿಗೆ ನೀಡಿರುವುದಾಗಿ ಹೇಳಿರುವುದು ವಿಫಲವಾಗಿದೆ.
ಕೋಗಳಿ ಸಿದ್ದಲಿಂಗನಗೌಡ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಖಾಸಗಿ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿವೆ. ನೋಟು ಅಮಾನ್ಯ, ಜಿಎಸ್‌ಟಿ, ಕೋಮುಗಲಭೆ ಕೇಂದ್ರದ ಸಾಧನೆಯಾಗಿದೆ. ರಾಜ್ಯ ಸರಕಾರ ಮತ ಬ್ಯಾಂಕ್‌ಗಾಗಿ ಜಾತಿವಾರು ವಿಭಜನೆ, ವಿಫಲವಾದ ಹಲವು ಭಾಗ್ಯಗಳ ಯೋಜನೆಗಳು ಕಾಂಗ್ರೆಸ್‌ ಕಳಪೆ ಸಾಧನೆಗೆ ಸಾಕ್ಷಿಯಾಗಿದೆ. ರೈತರನ್ನು ಎರಡು ಪಕ್ಷಗಳು ಅತ್ಯಂತ ವ್ಯವಸ್ಥಿತವಾಗಿ ಶೋಷಣೆ ಮಾಡಿವೆ..
ಏಣಿಗಿ ಮಾಬುಸಾಹೇಬ್‌.

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಕ್ಷೇತ್ರದ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸಲು 150 ಕೋಟಿ ರೂ. ಮತ್ತು ಚಿಲವಾರು ಬಂಡಿ ಯೋಜನೆಗೆ 60 ಕೋಟಿ ರೂ. ಅನುದಾನ ದೊರಕಿದೆ. ಕಳೆದ 35 ವರ್ಷಗಳಲ್ಲಿ ಈ ಯೋಜನೆಗಳ ಬಗ್ಗೆ ಯಾರೊಬ್ಬರು ಗಮನ ಹರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಕ್ಷೇತ್ರದ ಮಾಜಿ ಶಾಸಕ ಎಸ್‌.ಭೀಮಾನಾಯ್ಕರವರ ಇಚ್ಛಾಶಕ್ತಿಯಿಂದ ಬೃಹತ್‌ ನೀರಾವರಿ ಯೋಜನೆಗೆ ಅನುದಾನ ಒದಗಿ ರೈತರ ಕನಸು ನನಸಾಗಿಸಿದ್ದಾರೆ.
ಕೊಟ್ರೇಶ್‌ ಅಂಕಸಮುದ್ರ. 

ಸುರೇಶ ಯಳಕಪ್ಪನವರ

Advertisement

Udayavani is now on Telegram. Click here to join our channel and stay updated with the latest news.

Next