Advertisement

ಇರುವುದೊಂದೇ ಜೀವ ಇರುವುದೊಂದೇ ಬದುಕು

06:19 PM Feb 22, 2020 | mahesh |

ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯಾಧ್ಯಯನ, ಸಾಹಿತ್ಯಿಕ-ಸಾಮಾಜಿಕ ಮೌಲ್ಯಗಳನ್ನು ಸಮೀಕ್ಷಿಸುವ ಉದ್ದೇಶದ ಸಂಶೋಧನ ಕಾರ್ಯಗಳಲ್ಲಿ ನಿರತರಾಗಿ ಹಲವು ವರ್ಷಗಳ ಪ್ರಾಧ್ಯಾಪಕ ಹುದ್ದೆಯಲ್ಲಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವ ತಿದ್ದುವ ಕೆಲಸ, ಕೆಲಕಾಲ ಪ್ರಾಂಶುಪಾಲ ಹುದ್ದೆಯಲ್ಲಿದ್ದು ಸಂಸ್ಥೆ ಕಟ್ಟುವ ಶ್ರದ್ಧಾವಂತ ಕಾಯಕದಲ್ಲಿ ತೃಪ್ತಿ ಕಂಡವರು ಕಮಲಾ ಹಂಪನಾ. ಸಣ್ಣಕತೆ, ನಾಟಕ, ಆಧುನಿಕ ವಚನಗಳ ರಚನೆ, ಸುಮಾರು 80 ಕೃತಿಗಳ ಪ್ರಕಟನೆ- ಇವುಗಳ ಮೂಲಕ ಕರ್ನಾಟಕದ ಮನೆಮಾತಾಗಿರುವ ನಾಡೋಜ ಬಿರುದಾಂಕಿತೆ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಲೇಖಕಿಯ ಒಂಬತ್ತು ಸಮಗ್ರ ಸಾಹಿತ್ಯ ಸಂಪುಟಗಳ ಪೈಕಿ ಇದು ಎಂಟನೆಯ ಸಂಪುಟವಾಗಿದೆ. ತಮ್ಮ ಬಾಲ್ಯ, ಯೌವನ ಕಾಲದ ನೆನಪುಗಳನ್ನು, ಜತೆಗೆ ವೃತ್ತಿ-ಪ್ರವೃತ್ತಿಗಳ ಫ‌ಲಶ್ರುತಿಗಳನ್ನು ಮೆಲುಕು ಹಾಕಿರುವ ಈ ಕೃತಿಯ ಶೀರ್ಷಿಕೆ, ಇದೇ ಕಾರಣಕ್ಕಾಗಿ ಅರ್ಥವತ್ತಾಗಿದೆ.

Advertisement

ಬಾಲ್ಯದಲ್ಲಿ ಕಂಡ ಬಡತನವನ್ನು ವಿದ್ಯಾರ್ಜನೆಯ ಹಾಗೂ ಸಾಹಿತ್ಯಪ್ರೀತಿಯ ಮೂಲಕ ಗೆದ್ದು ಸಂಶೋಧಕ ಪತಿ, ಹಂಪ. ನಾಗರಾಜಯ್ಯನವರ ಒಡನಾಟದಲ್ಲಿ ವಿದ್ವತ್‌ ತಪಶ್ಚರ್ಯೆ ಹಾಗೂ ಅಕ್ಷರಪ್ರೀತಿಯೊಂದಿಗೆ ದಾಂಪತ್ಯದ ಮಾಗುವಿಕೆಯೆಂದರೇನೆಂದು ಕಂಡುಕೊಂಡ ಲೇಖಕಿ ಮುಂದೆ ಕನ್ನಡನಾಡಿನ ಸಂಶೋಧಕಿ-ಬರಹಗಾರ್ತಿಯಾಗಿ ನಾಡಿನ ಸಾಹಿತಿಗಳು, ತನ್ನ ವಿದ್ಯಾರ್ಥಿಗಳು, ಸಹೋದ್ಯೋಗಿಗಳೊಂದಿಗಿನ ಒಡನಾಟವನ್ನು ವಿವರಿಸಿದ ಕುತೂಹಲಕಾರಿ ಕಥನ ಇದಾಗಿದೆ. ಈ ಬರಹವನ್ನು “ಆತ್ಮಚರಿತ್ರೆ’ ಅಥವಾ “ಆತ್ಮಕಥೆ’ ಎಂದು ಕರೆದುಕೊಳ್ಳುವ ಬದಲಿಗೆ “ಜೀವನಯಾನ’ ಎಂದು ಹೇಳಿಕೊಳ್ಳುವ ಮೂಲಕ “ಇರುವುದೊಂದೇ ಜೀವ, ಇರುವುದೊಂದೇ ಬದುಕು, ಅದ ಸಾರ್ಥಕ ಮಾಡಿಕೋ’ ಎನ್ನುವ ತನ್ನ ಖಚಿತ ನಿಲುವನ್ನು ಪ್ರಕಟಪಡಿಸಿದ್ದಾರೆ. “ಬಡತನದ ಬೇಗೆ, ಪ್ರೀತಿಯ ಬೆಂಕಿ ಇವೆರಡೂ ನನ್ನನ್ನು ಪುಟಕ್ಕಿಟ್ಟ ಚಿನ್ನದಂತೆ ಅಪರಂಜಿಯಾಗಿಸಿತು’ ಎಂಬ ಸಾರ್ಥಕ್ಯ ಭಾವವನ್ನು ಈ ಸಂಪುಟದಲ್ಲಿ ಓದುಗರಿಗೂ ಮನಗಾಣಿಸಿದ್ದಾರೆ. ಇಲ್ಲಿನ ಪುಟಗಳ ನಡುವೆ ಲೇಖಕಿ ಬಳಸಿಕೊಂಡ “ಕಮಲಾಪ್ರಿಯ’ ಅಂಕಿತದ ಸ್ವಂತ ವಚನಗಳು ನಿರೂಪಿತ ವಿಷಯ/ಸಂದರ್ಭಗಳಿಗೆ ಪೂರಕವಾಗಿದ್ದು , ಹಾಳೆಗಳ ನಡುವಿನ ನವಿಲುಗರಿಗಳಂತೆ ಮುದ ನೀಡುತ್ತವೆ.

ಜಕಾ

Advertisement

Udayavani is now on Telegram. Click here to join our channel and stay updated with the latest news.

Next