ಯಲಹಂಕ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯಾಸಂಗದ ಜತೆಗೆ ಆವಿಷ್ಕಾರದತ್ತ ಮುನ್ನಗ್ಗಬೇಕು. ಆಗ ಮಾತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ದೇಶಪಾಂಡೆ ಫೌಂಡೇಷನ್‌ನ ಅಧ್ಯಕ್ಷ ಗುರುರಾಜ್ ದೇಶ್ ದೇಶಪಾಂಡೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಯಲಹಂಕ ಉಪನಗರದ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೌಶಲ್ಯ ಅಭಿವೃದ್ದಿ ಕೇಂದ್ರದ ಉದ್ಘಾಟನೆ ಮತ್ತು ಕಾಲೇಜಿನ 25ನೇ ಬೆಳ್ಳಿ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ವ್ಯಾಸಂಗದ ಜೊತೆಗೆ ಸಾಮಾಜಿಕಜ್ಞಾನವೂ ಮುಖ್ಯ. ಆಗ ಮಾತ್ರ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಕೈಗಾರಿಕೋದ್ಯಮ ಸಲಹೆಗಾರರಾದ ಬಿ.ವಿ.ಜಗದೀಶ್ ಮಾತನಾಡಿ ತಂತ್ರಜ್ಞಾನ, ವಿಶ್ವಾಸ, ಸಂವಹನ ಕೌಶಲ್ಯ, ಜಾಗತಿಕ ಪ್ರಭಾವ ಅತಿ ಮುಖ್ಯ. ಇವು ಈ ಹಿಂದೆ ಇರಲಿಲ್ಲ. ಹಾಗಾಗಿ ಅಂದಿನ ಜನರಲ್ಲಿ ಎಷ್ಟೇ ಜ್ಞಾನ ಇದ್ದರೂ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ.
ಆದರೆ, ಇಂದು ಈ ನಾಲ್ಕು ಇದ್ದು ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ತನ್ನ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಿದೆ. ತಾವು ಸಹ ಅದಕ್ಕೆ ತಕ್ಕಂತೆ ತಮ್ಮ ಸಾಮರ್ಥಯ ಹೆಚ್ಚಿಸಿಕೊಳ್ಳಬೇಕು ಎಂದರು. ಇದೇ ವೇಳೆ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಲಾಯಿತು.
ಶೇಷಾದ್ರಿಪುರ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವುಡೇ ಪಿ ಕೃಷ್ಣ ಮಾತನಾಡಿ, ಜಿಲ್ಲೆಯ ವಿವಿಧ ಜಿಲ್ಲೆಗಳಲ್ಲಿ ವಿದ್ಯಾಸಂಸ್ಥೆಗಳಿದ್ದು, ಸುಮಾರು 21 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕೌಶಲ್ಯ ಅಭಿವೃದ್ಧಿ ಕೇಂದ್ರದಡಿ ತರಬೇತಿ ನೀಡಲಾಗುವುದು ಎಂದು ಹೇಳಿದರು. ಶೇಷಾದ್ರಿಪುರ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಸಂತನು ದಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.