ಮುಂಬಯಿ : 2019ರ ಲೋಕಸಭಾ ಚುನಾವಣೆಯ ಪ್ರಚಾರಾಭಿಯಾನದ ವೇಳೆ ಕಾಂಗ್ರೆಸ್ ಪದಾಧಿಕಾರಿಗಳು ತನ್ನೊಂದಿಗೆ ನಡೆದು ಕೊಂಡ ರೀತಿ ಮತ್ತು ತೋರಿದ ದುರ್ನಡತೆಯ ಬಗ್ಗೆ ಗಂಭಿರ ಆರೋಪ ಮಾಡಿ ಪಕ್ಷದ ಹಿರಿಯ ನಾಯಕ ಮಿಲಿಂದ್ ದೇವರಾ ಅವರಿಗೆ ಕಳೆದ ಮೇ 16ರಂದು ಬರೆದಿದ್ದ ಪತ್ರವನ್ನು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ಬಾಲಿವುಡ್ ನಟಿ, 45ರ ಹರೆಯದ ಊರ್ಮಿಳಾ ಮಾತೋಂಡ್ಕರ್ ಸಮರ್ಥಿಸಿಕೊಂಡಿದ್ದಾರೆ.
ಈ ವರ್ಷ ಮಾರ್ಚ್ 27ರಂದು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಮುಂಬಯಿ ಉತ್ತರ ಸಂಸತ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಹಾಲಿ ಬಿಜೆಪಿ ಅಭ್ಯರ್ಥಿ ಗೋಪಾಲ ಶೆಟ್ಟಿ ಅವರೆದುರು 4.5 ಲಕ್ಷ ಮತಗಳ ಭಾರೀ ಮತದಿಂದ ಊರ್ಮಿಳಾ ಮಾತೋಂಡ್ಕರ್ ಪರಾಜಿತರಾಗಿದ್ದರು.
ಆದರೆ ಪ್ರಚಾರಾಭಿಯಾನದ ವೇಳೆ ತನ್ನ ಅನುಭವಕ್ಕೆ ಬಂದ ಪಕ್ಷದ ಹುಳುಕುಗಳನ್ನು ಊರ್ಮಿಳಾ ಅವರು ಮೇ 16ರಂದು ಹಿರಿಯ ಕಾಂಗ್ರೆಸ್ ನಾಯಕ ಮಿಲಿಂದ್ ದೇವರಾ ಅವರಿಗೆ ಪತ್ರ ಬರೆದು ಬಹಿರಂಗಪಡಿಸಿದ್ದರು.
“ನಾನು ಪಕ್ಷದ ಹಿತಾಸಕ್ತಿಯಲ್ಲಿ, ಪಕ್ಷದ ಅಭ್ಯುದಯಕ್ಕಾಗಿ, ಪತ್ರ ಬರೆದು ದೇವರಾ ಅವರನ್ನು ಎಚ್ಚರಿಸಿದ್ದೆ. ನಾನು ಪಕ್ಷ ಸೇರಿದ್ದು ದೇಶ ಸೇವೆಯ ಉದ್ದೇಶಕ್ಕಾಗಿಯೇ ಹೊರತು ಸ್ವಂತ ಹಿತಾಸಕ್ತಿಗಾಗಿ ಅಲ್ಲ’ ಎಂದು ಊರ್ಮಿಳಾ ಹೇಳಿದ್ದಾರೆ.
“ನನ್ನ ಚುನಾವಣಾ ಪ್ರಚಾರಾಭಿಯಾನದ ಹೊಣೆ ಹೊತ್ತಿದ್ದ ಕಾಂಗ್ರೆಸ್‌ನ ಸಂದೇಶ್ ಕೋಂಡ್ವಿಲ್ಕರ್ ಮತ್ತು ಭೂಷಣ ಪಾಟೀಲ್ ಅವರ ಕಾರ್ಯವೈಖರಿ ದೋಷಯುಕ್ತವಾಗಿತ್ತು. ಹೊತ್ತಲ್ಲದ ಹೊತ್ತಲ್ಲಿ ಅವರು ನನಗೆ ಫೋನ್ ಕರೆ ಮಾಡಿ ಪ್ರಚಾರ ಕಾರ್ಯಕ್ಕೆ ಸಾಕಷ್ಟು ಹಣ ಇಲ್ಲ ಎಂದು ಹೇಳುತ್ತಿದ್ದರು. ಹಣ ಸಂಗ್ರಹಿಸಿ ಕೊಡುವಂತೆ ಅವರು ನನ್ನ ಕುಟುಂಬ ಸದಸ್ಯರಿಗೆ ಫೋನ್ ಕರೆ ಮಾಡುತ್ತಿದ್ದರು. ಸರಿಯಾಗಿ ರಾಲಿಗಳನ್ನು ಸಂಘಟಿಸುತ್ತಿರಲಿಲ್ಲ’ ಎಂದು ಊರ್ಮಿಳಾ ಪತ್ರದಲ್ಲಿ ಆರೋಪಿಸಿದ್ದರು.
ದೇವರಾ ಅವರಿಗೆ ನಾನು ಆ ಪತ್ರವನ್ನು ಮತಗಟ್ಟೆ ಸಮೀಕ್ಷೆ, ಚುನಾವಣಾ ಫಲಿತಾಂಶ ಬಹಿರಂಗಕ್ಕೆ ಮೊದಲೇ ಬರೆದಿದ್ದು ಅದುವೇ ನನ್ನ ಪ್ರಾಮಾಣಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಊರ್ಮಿಳಾ ಹೇಳಿದ್ದಾರೆ.