ಲಕ್ನೋ: ಉತ್ತರಪ್ರದೇಶದ ಸಂಭಲ್ ನ ಜಾಮಾ ಮಸೀದಿಯ ಹೊರಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್ ಅನ್ನು ನಿರ್ಮಿಸಿದ್ದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಉತ್ತರಪ್ರದೇಶ ಸರ್ಕಾರ ಮೂಲಭೂತ ಸೌಕರ್ಯಗಳಾದ ಶಾಲೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸುವುದನ್ನು ಬಿಟ್ಟು, ಪೊಲೀಸ್ ಚೆಕ್ ಪೋಸ್ಟ್ ಮತ್ತು ಮದ್ಯದ ಅಂಗಡಿಗಳನ್ನು ತೆರಯಲು ಹಣವನ್ನು ಬಿಡುಗಡೆ ಮಾಡುತ್ತಿರುವುದಾಗಿ ಒವೈಸಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟೀಕಿಸಿದ್ದಾರೆ.
ಸಂಭಲ್ ನ ಜಾಮಾ ಮಸೀದಿ ಮುಂಭಾಗದಲ್ಲಿ ಪೊಲೀಸ್ ಪೋಸ್ಟ್ ಅನ್ನು ನಿರ್ಮಿಸಲಾಗಿದೆ. ಆದರೆ ದೇಶದ ಯಾವುದೇ ಮೂಲೆಗೆ ಹೋಗಿ ನೋಡಿ ಎಲ್ಲಿಯೂ ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಿಲ್ಲ ಎಂದು ಒವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣವಿಲ್ಲ. ಕೇವಲ ಪೊಲೀಸ್ ಹೊರಠಾಣೆ ಮತ್ತು ಮದ್ಯದಂಗಡಿ ನಿರ್ಮಿಸಲು ಮಾತ್ರ ಹಣ ಉಪಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಹುಸಂಖ್ಯಾತರು ಇರುವ ಮುಸ್ಲಿಂ ಪ್ರದೇಶಗಳನ್ನು ಉತ್ತರಪ್ರದೇಶ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಒವೈಸಿ ದೂರಿದರು. ಸಂಭಲ್ ನಲ್ಲಿ ಸಂಘರ್ಷ ಮುಂದುವರಿದಿರುವ ನಡುವೆಯೇ ಒವೈಸಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.