Advertisement

ಯೂರೋಪ್‌ನಂತಾದರೆ ಮಾತ್ರ ಭಾರತದ ಫ‌ುಟ್‌ಬಾಲ್‌ಗೆ ಉಳಿಗಾಲ

06:35 AM Oct 05, 2017 | |

ಭಾರತದ ಫ‌ುಟ್‌ಬಾಲ್‌ನಲ್ಲಿ ಯಾವ ಕೊರತೆಯಿದೆ ಎಂದು ಗೊತ್ತಾಗಬೇಕಾದರೆ ಯೂರೋಪ್‌ ರಾಷ್ಟ್ರಗಳಲ್ಲಿನ ಸ್ಥಿತಿಯನ್ನು ಗಮನಿಸಬೇಕು. ಇಂಗ್ಲೆಂಡ್‌, ಸ್ಪೇನ್‌, ಫ್ರಾನ್ಸ್‌, ಜರ್ಮನಿ, ಇಟಲಿಯಲ್ಲಿನ ಫ‌ುಟ್‌ಬಾಲ್‌ ಲೀಗ್‌ಗಳು ವಿಶ್ವದಲ್ಲೇ ಶ್ರೀಮಂತ, ಜನಪ್ರಿಯ ಕ್ರೀಡಾಕೂಟಗಳೆನಿಸಿವೆ. ಅವುಗಳ ಒಂದಂಶ ಕೂಡ ಭಾರತೀಯ ಫ‌ುಟ್‌ಬಾಲ್‌ನಲ್ಲಿ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯೂರೋಪ್‌ ಲೀಗ್‌ಗಳತ್ತ ಇಣುಕು ನೋಟ.

Advertisement

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌
ಈ ಕೂಟ ಇಂಗ್ಲೆಂಡ್‌ನ‌ಲ್ಲಿ ಆರಂಭವಾಗಿದ್ದು 1992ರಲ್ಲಿ. ಇದು ವಿಶ್ವದ ಜನಪ್ರಿಯ ಫ‌ುಟ್‌ಬಾಲ್‌ ಲೀಗ್‌. ಇಲ್ಲಿ ಒಟ್ಟು 20 ತಂಡಗಳು ಆಡುತ್ತವೆ. ಈ ಕೂಟದ ಪ್ರತಿ ಪಂದ್ಯದಲ್ಲಿ ಸರಾಸರಿ 3 ಗೋಲುಗಳು ಸಿಡಿಯುತ್ತವೆ. ಪಂದ್ಯವನ್ನು ಜನ ವೀಕ್ಷಿಸಬೇಕಾದರೆ ಅಲ್ಲಿ ನಿಯಮಿತವಾಗಿ ಗೋಲುಗಳು ಸಿಡಿಯಬೇಕು, ಅಬ್ಬರ, ರೋಚಕತೆ ಇರಬೇಕು. ಆದ್ದರಿಂದಲೇ ಇಲ್ಲಿನ ಪಂದ್ಯಗಳನ್ನು ಲಕ್ಷಾಂತರ ಜನ ವೀಕ್ಷಿಸುತ್ತಾರೆ. ಜೊತೆಗೆ ಸಾವಿರಾರು ಕೋಟಿ ರೂ. ಹಣ ಹರಿದಾಡುತ್ತದೆ. ಒಬ್ಬೊಬ್ಬ ಆಟಗಾರನನ್ನು ಖರೀದಿಸಲು ಸಾವಿರ, 2 ಸಾವಿರ ಕೋಟಿ ರೂ.ಗಳನ್ನು ನೀಡಲೂ ಇಲ್ಲಿ ಹಿಂಜರಿಯುವುದಿಲ್ಲ.

ಸ್ಪೇನಿನ ಲಾ ಲಿಗಾ
ಸ್ಪೇನಿನಲ್ಲಿ ಈ ಕೂಟ ಆರಂಭವಾಗಿದ್ದು 1929ರಲ್ಲಿ. ಇಲ್ಲಿ ಒಟ್ಟು 20 ತಂಡಗಳು ಆಡುತ್ತವೆ. ಇಲ್ಲೂ ಪಂದ್ಯವೊಂದರಲ್ಲಿ ಸರಾಸರಿ 3 ಗೋಲುಗಳು ಸಿಡಿಯಲ್ಪಡುತ್ತವೆ. ಸಾವಿರಾರು ಕೋಟಿ ರೂ. ಇಲ್ಲೂ ಹರಿದಾಡುತ್ತದೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಯೋನೆಲ್‌ ಮೆಸ್ಸಿ, ನೇಯ್ಮರ್‌, ಲೂಯಿಸ್‌ ಸ್ವಾರೆಜ್‌, ಗೆರಾರ್ಡ್‌ ಪಿಕ್‌, ಆಂಡ್ರೆಸ್‌  ಇನಿಯೆಸ್ಟಾ, ಸರ್ಗಿಯೊ ಬಸ್ಕೆಟ್ಸ್‌ರಂತಹ ವಿಶ್ವಖ್ಯಾತರು ಆಡುತ್ತಿರುವುದೇ ಇಲ್ಲೇ. ಅದರಲ್ಲೂ ಫ‌ುಟ್‌ಬಾಲ್‌ ಪ್ರಿಯರ ಆರಾಧ್ಯದೈವಗಳಾದ ರೊನಾಲ್ಡೊ, ಮೆಸ್ಸಿಯನ್ನು ನೀವು ಇದೇ ಕೂಟದಲ್ಲಿ ನೋಡಬಹುದು.

ಜರ್ಮನಿಯ ಬುಂಡೆಸ್‌ಲಿಗಾ
ಇದು ಆರಂಭವಾಗಿದ್ದು 1963ರಲ್ಲಿ. ಇಲ್ಲಿ 18 ತಂಡಗಳು ಆಡುತ್ತವೆ. ಇಲ್ಲಿ ಅತಿ ಹೆಚ್ಚು ಯುವ ಫ‌ುಟ್‌ಬಾಲ್‌ ಪ್ರತಿಭೆಗಳು ಆಡುತ್ತಾರೆ. ಪ್ರತಿ ಪಂದ್ಯದಲ್ಲಿ ಅಂದಾಜು 2.7 ಗೋಲುಗಳು ಸಿಡಿಯುತ್ತವೆ. ಜಗತ್ತಿನ 3ನೇ ಜನಪ್ರಿಯ ಫ‌ುಟ್‌ಬಾಲ್‌ ಕೂಟವೆನಿಸಿದೆ. ಇದರ ಜನಪ್ರಿಯತೆ ಮೊದಲೆರಡು ಕೂಟಗಳಿಗೆ ಅತಿ ಸನಿಹದಲ್ಲಿದೆ. ವಿಚಿತ್ರವೆಂದರೆ ಉಳಿದ ಲೀಗ್‌ಗಳಿಗೆ ಹೋಲಿಸಿದರೆ ಇಲ್ಲಿ ಗೋಲು ಸಿಡಿಯುವುದು ಕಡಿಮೆ. ಆದರೆ ಅತಿ ಹೆಚ್ಚು ಜನರು ಆಗಮಿಸುವ ಲೀಗ್‌ ಇದು ಮಾತ್ರ!

ಭಾರತದಲ್ಲಿ ಆಗಬೇಕಿರುವುದೇನು?
ಆಟದಲ್ಲಿ ವೇಗವಿಲ್ಲ: ಭಾರತದಲ್ಲಿರುವ ಎರಡೂ ಲೀಗ್‌ಗಳಲ್ಲಿ ವೇಗವಿಲ್ಲ. ಅಂದರೆ ಇಲ್ಲಿನ ಆಟಗಾರರ ವೇಗ ಯೂರೋಪ್‌ ಲೀಗ್‌ಗಳಿಗೆ ಹೋಲಿಸಿದರೆ ಅತ್ಯಂತ ನಿಧಾನ. ಚೆಂಡನ್ನು ತಳ್ಳುವ ರೀತಿ, ತಡೆದು ಮತ್ತೂಂದು ಕಡೆ ಕಳುಹಿಸುವುದು, ಗೋಲುಪೆಟ್ಟಿಗೆ ಬಳಿಗೆ ಧಾವಿಸುವುದು, ತಲೆಯಿಂದ ಹೆಡ್‌ ಮಾಡುವುದರ ಸಮೀಪಕ್ಕೂ ಭಾರತದ ಆಟಗಾರರಿಲ್ಲ. ಈ ವಿಭಾಗದಲ್ಲಿ ಸುಧಾರಣೆಯನ್ನು ಬುಡಮಟ್ಟದಲ್ಲೇ ಮಾಡಬೇಕಿದೆ.

Advertisement

ಪಂದ್ಯದಲ್ಲಿ ರೋಚಕತೆಯಿಲ್ಲ
ಫ‌ುಟ್‌ಬಾಲ್‌ ಪಂದ್ಯಗಳಲ್ಲಿ ತೀವ್ರ ಸ್ಪರ್ಧೆ, ಅತ್ಯಂತ ವೇಗ, ಗೋಲುಗಳ ಅಬ್ಬರವಿದ್ದರೆ ಸಹಜವಾಗಿ ಜನ ಬರುತ್ತಾರೆ. ಭಾರತದಲ್ಲಿ ಇದರ ಕೊರತೆಯಿದೆ. ವಿದೇಶಿ ಫ‌ುಟ್‌ಬಾಲಿಗರೂ ಈ ಕೊರತೆಯನ್ನು ತುಂಬಲು ಶಕ್ತರಾಗಿಲ್ಲ. ನಿವೃತ್ತಿಯ ಅಂಚಿನಲ್ಲಿರುವ ಯೂರೋಪ್‌ನ ಲೀಗ್‌ಗಳಲ್ಲಿ ಅವಕಾಶ ಕಳೆದುಕೊಂಡ ಈ ತಾರೆಯರಿಂದ ಮಹತ್ವದ ಏನನ್ನೂ ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಭಾರತದಲ್ಲೇ ಪ್ರತಿಭೆಗಳನ್ನು ಸೃಷ್ಟಿಸಲು, ಅವರ ಸಾಮರ್ಥ್ಯ ವೃದ್ಧಿಸಲು ಯತ್ನಿಸಬೇಕಿದೆ.

ನೇರಪ್ರಸಾರದಲ್ಲೂ ಸಮಸ್ಯೆ
ಭಾರತದಲ್ಲಿ ಐಲೀಗ್‌ ಕೂಟದ ನೇರಪ್ರಸಾರವೇ ಸಮಸ್ಯೆಯಲ್ಲಿದೆ. 2010ರಲ್ಲಿ ಈ ಕೂಟದ ನೇರಪ್ರಸಾರದಿಂದ ಜೀ ಹೊರಬಂತು. ಸದ್ಯ ಟೆನ್‌ ಆ್ಯಕ್ಷನ್‌ ಎಂಬ ವಾಹಿನಿ ನೇರಪ್ರಸಾರ ಮಾಡುತ್ತಿದೆ. ನೇರಪ್ರಸಾರದ ಗುಣಮಟ್ಟದಲ್ಲೂ ವ್ಯತ್ಯಾಸವಿದೆ. ಬಹಳ ಸ್ಪಷ್ಟವಾಗಿ ವೀಕ್ಷಕರಿಗೆ ಆಟಗಾರರಾಗಲೀ, ಚೆಂಡಿನ ಚಲನೆಯಾಗಲೀ ಕಾಣದೇ ನೋಡುವುದೇ ಬೇಸರ ಎನ್ನುವ ಪರಿಸ್ಥಿತಿಯಿದೆ. ಇದನ್ನು ಸರಿಪಡಿಸದಿದ್ದರೆ ವೀಕ್ಷಕರು ದೂರ ಸರಿಯುವುದನ್ನು ತಡೆಯಲು ಸಾಧ್ಯವಿಲ್ಲ.

ರೋಚಕ ವೀಕ್ಷಕ ವಿವರಣೆಯಿಲ್ಲ
ಭಾರತದ ಫ‌ುಟ್‌ಬಾಲ್‌ ನೇರಪ್ರಸಾರದ ವೀಕ್ಷಕ ವಿವರಣೆ ಚೆನ್ನಾಗಿರುವುದಿಲ್ಲ ಎಂಬ ಆಪಾದನೆಯಿದೆ. ಇದಕ್ಕಾಗಿ ವಿದೇಶಿ ವೀಕ್ಷಕ ವಿವರಣೆಕಾರರನ್ನು ಬಳಸಿಕೊಳ್ಳಲು ಶುರು ಮಾಡಲಾಗಿದೆ. ಭಾರತದ ಮಟ್ಟಿಗೆ ಭಾಷೆ, ವ್ಯಾಕರಣಗಳು ತಪ್ಪಾಗಿ ಬಳಸಲ್ಪಡುತ್ತಿವೆ ಎಂದು ಕೆಲವರು ದೂರುತ್ತಾರೆ. ಪಂದ್ಯದ ರೋಚಕತೆ ಹೆಚ್ಚಿಸುವಲ್ಲಿ ಈ ವಿವರಣೆಕಾರರದ್ದೂ ಮಹತ್ವದ ಪಾತ್ರವಿದೆ. ಅದಕ್ಕೆ ಗಮನ ಕೊಡಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next