ಬೆಂಗಳೂರು: ಸತತ ನಾಲ್ಕು ಸೋಲು ಅನುಭವಿಸಿ ಐಪಿಎಲ್ 12ನೇ ಆವೃತ್ತಿಯಲ್ಲಿ ಕುಂಟುತ್ತಾ ಸಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗೆಲುವೆಂಬುದು ಗಗನ ಕುಸುಮವಾಗಿಯೇ ಉಳಿದುಬಿಟ್ಟಿದೆ. ಸತತ ಸೋಲುಗಳು ಆಟಗಾರರ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ.
ಇದೆಲ್ಲದರ ನಡುವೆ ಶುಕ್ರವಾರದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ (ಕೆಕೆಆರ್) ತಂಡವನ್ನು ಕೊಹ್ಲಿ ಹುಡುಗರು ಎದುರಿಸಲಿದ್ದಾರೆ. ಇಲ್ಲಾದರೂ ಆರ್‌ಸಿಬಿಗೆ ಗೆಲುವು ಸಿಗಬಹುದೆ? ಅಥವಾ ಮತ್ತೆ ಕೊಹ್ಲಿ ಪಡೆ ಸೋಲನ್ನೇ ಅಪ್ಪಿಕೊಳ್ಳಬಹುದೇ? ಈ ಎಲ್ಲ ಪ್ರಶ್ನೆಗೆ ಶುಕ್ರವಾರ ತಡರಾತ್ರಿ ಉತ್ತರ ಸಿಗಲಿದೆ.
ಪುಟಿದೇಳುತ್ತಿಲ್ಲ ಆರ್‌ಸಿಬಿ: ತಾರಾ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ ಸಮಯಕ್ಕೆ ಸರಿಯಾಗಿ ಸಿಡಿಯುತ್ತಿಲ್ಲ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಕಾಲಿನ್ ಗ್ರ್ಯಾನ್‌ಹೋಮ್, ಶಿಮ್ರಾನ್ ಹೆಟ್‌ಮೈರ್‌ರಂತಹ ಖ್ಯಾತನಾಮರು ಸದ್ದಿಲ್ಲದೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ. ಬೌಲಿಂಗ್‌ನಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಹೊರತುಪಡಿಸಿ ಮತ್ತೆಲ್ಲ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಫೀಲ್ಡಿಂಗ್‌ನಲ್ಲೂ ಆರ್‌ಸಿಬಿ ತಪ್ಪುಗಳನ್ನೇ ಎಸಗುತ್ತಿದೆ. ಒಟ್ಟಾರೆ ತನ್ನ ಬಲವನ್ನು ಕಳೆದುಕೊಂಡು ಹಲ್ಲು ಕಿತ್ತ ಹಾವಿನಂತಾಗಿದೆ.
ಒಂದೆರಡು ಪಂದ್ಯದಲ್ಲಿ ಸೋತ ಆರ್‌ಸಿಬಿ ತನ್ನ ತಪ್ಪನ್ನು ತಿದ್ದಿಕೊಳ್ಳಬಹುದು, ಮುಂದೆ ಸುಧಾರಿಸಿಕೊಳ್ಳಬಹುದು ಎಂದು ಅಭಿಮಾನಿಗಳು ತಮ್ಮಷ್ಟಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಆದರೆ ತಪ್ಪುಗಳನ್ನೇ ಮನೆಯನ್ನಾಗಿಸಿಕೊಂಡ ಆರ್‌ಸಿಬಿ ತಾನಾಡಿರುವ ನಾಲ್ಕು ಪಂದ್ಯಗಳಲ್ಲೂ ಹೀನಾಯ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶಿಸಿ ಮುಖಭಂಗ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಧೋನಿ ನೇತೃತ್ವದ ಚೆನ್ನೈಗೆ ಶರಣಾಗಿತ್ತು. 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವಿನ ಸಮೀಪ ಬಂದು ಸೋತಿತ್ತು. ಆ ಬಳಿಕ ಹೈದ್ರಾಬಾದ್ ಹಾಗೂ ರಾಜಸ್ಥಾನ್ ವಿರುದ್ಧವೂ ಆರ್‌ಸಿಬಿ ತನ್ನ ಕಳಪೆ ಆಟ ಪ್ರದರ್ಶಿಸಿ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ 5ನೇ ಪಂದ್ಯಕ್ಕೆ ಸಜ್ಜಾಗಿದೆ. ಆರ್‌ಸಿಬಿ ಹಿಂದಿನ ಎಲ್ಲ ನೋವನ್ನು ಮರೆತು ತನ್ನ ಮುಂದಿನ ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸುತ್ತಾ ಹೋದರೆ ಪ್ಲೆ ಆಫ್ಗೇರುವ ಸಾಧ್ಯತೆ ಇದೆ. ಆದರೆ ಆರ್‌ಸಿಬಿ ಬ್ಯಾಟ್ಸ್‌ಮನ್, ಬೌಲರ್ ಮೈ ಚಳಿ ಬಿಟ್ಟು ಆಡಬೇಕು ಅಷ್ಟೆ.
ಬಲಿಷ್ಠ ಕೆಕೆಆರ್: ಕೆಕೆಆರ್ ತನ್ನ ಮೊದಲೆರಡು ಪಂದ್ಯದಲ್ಲಿ ಕ್ರಮವಾಗಿ ಹೈದ್ರಾಬಾದ್, ಪಂಜಾಬ್ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಡೆಲ್ಲಿ ವಿರುದ್ಧದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಸೂಪರ್ ಓವರ್‌ನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತ್ತು. ಕೇವಲ 3 ರನ್‌ನಿಂದ ಕೆಕೆಆರ್ ಸೋಲು ಅನುಭವಿಸಿತ್ತು. ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಶುಭ್‌ಮನ್ ಗಿಲ್‌ರಂತಹ ಅಗ್ರ ಬ್ಯಾಟ್ಸ್‌ಮನ್‌ಗಳು ಕೆಕೆಆರ್ ಪರ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.