ಶಿವಮೊಗ್ಗ: ಜಗತ್ತಿನಲ್ಲಿ ಯಾವುದಾದರೂ ಸಂಘಟನೆ ತನ್ನ ಸಿದ್ದಾಂತ, ಸಾಮಾಜಿಕ ಗುರಿ ಬಗ್ಗೆ ಚಿಂತನೆ ಮಾಡಿ ಪ್ರತಿ ಬಾರಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಸಿದ್ದರೆ ಅದು ಬಿಜೆಪಿ. ಅತಿ ಹೆಚ್ಚು ಕಾರ್ಯಕರ್ತರಿರುವ ಪಕ್ಷ ಬಿಜೆಪಿಯು ಸಿದ್ದಾಂತ ಮತ್ತು ಮೌಲ್ಯಗಳ ಜೊತೆ ಎಂದು ರಾಜಿ ಮಾಡಿಕೊಳ್ಳುವುದಿಲ್ಲ. ದೇಶದ ವಿಷಯ ಬಂದಾಗ ನಮಗೆ ದೇಶವೇ ಮೊದಲು ಪಕ್ಷ ಆಮೇಲೆ ಎಂದು ಬಿಜೆಪಿ ಪ್ರಶಿಕ್ಷಣ ವರ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮೌಲ್ಯಾಧಾರಿತ ರಾಜಕಾರಣ ದೇಶದಲ್ಲಿ ಮಾಡಲು ಸಾಧ್ಯವಿದ್ಧರೆ ಅದು ಬಿಜೆಪಿಯಿಂದ ಮಾತ್ರ. ಬಿಜೆಪಿ ಬಗ್ಗೆ ರಾಜಕೀಯ ಪಕ್ಷಗಳು ವಿಭಿನ್ನವಾಗಿ ವ್ಯಾಖ್ಯಾನ ಮಾಡುತ್ತವೆ. ಆದರೆ ಅದೆಲ್ಲವೂ ರಾಜಕೀಯ ದೃಷ್ಟಿಕೊನದಲ್ಲಿ. ಆದರೆ ಬಡವರು, ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಬಿಜೆಪಿ ಬಗ್ಗೆ ಆಶಾಕಿರಣ ಹೊಂದಿದ್ದಾರೆ. ಆದರೆ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಒಂದು ಕಾಲದಲ್ಲಿ ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದೆ ಎಂದು ಆರೋಪಿಸಿದ್ದರು. ಆದರೆ ಸಂವಿಧಾನವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು. ಕಾಂಗ್ರೆಸ್ಸಿಗರು ಅಂಬೇಡ್ಕರ್ ಬಗ್ಗೆ ಹೇಗೆ ನಡೆದುಕೊಂಡರು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ. ಅಂಬೇಡ್ಕರ್ ಗೆ ಕೋರ್ಟ್ ನಲ್ಲಿ ವಾದ ಮಾಡಲು ಅವಕಾಶ ನೀಡಲಿಲ್ಲ. ಚುನಾವಣೆಯಲ್ಲಿ ಸೋಲಿಸಿದರು. ಸತ್ತಾಗ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಜಾಗವನ್ನೂ ನೀಡಲಿಲ್ಲ. ಸ್ವಾತಂತ್ರ ಹೋರಾಟದ ಬಳಿಕ ಅದರ ಲಾಭ ಪಡೆದು ರಾಜಕಾರಣ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಎಂದೂ ರಾಜಕಾರಣ ಮಾಡಿಲ್ಲ ಎಂದು ಆರೋಪಿಸಿದರು.
ದೇಶದ 7 ಕೋಟಿ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಸರ್ವ ವ್ಯಾಪಿ ಸರ್ವ ದೃಷ್ಟಿಯಿಂದ ಬಿಜೆಪಿ ಅಧಿಕಾರ ನಡೆಸುತ್ತಿದೆ. ಕೋವಿಡ್ ಹಾಗೂ ಕೋವಿಡ್ ನಂತರ ಇಡೀ ವಿಶ್ವದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ ಭಾರತ ಈ ಅವಧಿಯಲ್ಹಿ ಶೇಕಡಾ ಏಳರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಇದು ದೊಡ್ಡ ಸಾಧನೆ. ಇದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಬಲರಾಗಲು ಸಾಧ್ಯ. ಸಬಲರಾಗದಿದ್ದಲ್ಲಿ ನಾಯಕತ್ವ ಬೆಳೆಯುವುದಿಲ್ಲ ಎಂದರು.
ಕೋವಿಡ್ ಸಮಯದಲ್ಲಿ ನಾವು ಹೆಚ್ಚಿನ ಕೆಲಸ ಮಾಡಿದ್ದೇವೆ. ಕೋವಿಡ್ ಅವಧಿಯಲ್ಲಿ ಮಾದರಿಯಾಗಿ ಯಡಿಯೂರಪ್ಪಕೆಲಸ ಮಾಡಿ ತೋರಿಸಿದ್ದಾರೆ. ಮುಂದೆ ಯಾವುದೇ ಮಹಾಮಾರಿ ಬಂದರೂ ನಿಭಾಯಿಸಲು ಸಾವು ಸಿದ್ಧರಿದ್ದೇವೆ. ಯಡಿಯೂರಪ್ಪ ಅವಧಿಯಲ್ಲಿ ಆರಂಭಗೊಂಡ ನೀರಾವರಿ ಯೋಜನೆಗಳನ್ನು ಮುಂದುವರಿಸಿ ಇನ್ನೂ ಕೆಲ ಯೋಜನೆಗಳನ್ನು ಆರಂಭಿಸುತ್ತೇವೆ. ರಾಜ್ಯವನ್ನು ಎಲ್ಲ ದೃಷ್ಟಿಯಿಂದಲೂ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಆರು ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ, ಮೂರು ಸಾವಿರ ಕಿಲೋಮೀಟರ್ ರಾಜ್ಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಿದ್ದೇವೆ.15 ಸಾವಿರ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ದಾಸ್ಯ ಪದ್ದತಿ: ಸಂವಿಧಾನದಲ್ಲಿ ನಂಬಿಕೆ ಇಲ್ಲ ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾಲ್ಕು ದಶಕಗಳ ಕಾಲ ಎಸ್ ಸಿ, ಎಸ್ ಟಿ ಗೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ, ಸಮ್ಮಿಶ್ರ ಸರ್ಕಾರ ಇರುವಾಗ ಸಮಿತಿ ರಚನೆಯಾಯಿತು. ಆದರೆ ಏನೂ ಕೆಲಸವಾಗಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ನಾಗಮೋಹನ್ ದಾಸ್ ವರದಿ ಪಡೆದು ಕೆಲಸ ಮಾಡಿ ತೋರಿಸಿದರು. ಕಾಂಗ್ರೆಸ್ಸಿಗರು ತಾವು ಮಾಡುವುದಿಲ್ಲ. ಮಾಡುವವರಿಗೂ ಬಿಡುವುದಿಲ್ಲ. ಈ ಜನಾಂಗ ಯಾವತ್ತೂ ಅಭಿವೃದ್ಧಿಯಾಗಬಾರದರು, ವೋಟ್ ಬ್ಯಾಂಕ್ ಮಾಡಿಕೊಂಡಿದ್ದರು. ದಾಸ್ಯ ಸಂಸ್ಕೃತಿಯನ್ನು ಕಾಂಗ್ರೆಸ್ ನಡೆಸುತ್ತಿದೆ. ಕಾಂಗ್ರೆಸ್ ಮುಖವಾಡ ಕಳಚಿದ್ದು ಹೀಗಾಗಿಯೇ ಎಲ್ಲೆಡೆ ಕಾಂಗ್ರೆಸ್ ಸೋಲುತ್ತಿದೆ. ನಮ್ಮ ಸರ್ಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕನ್ನು ಹಸನು ಮಾಡುವ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ:ಇಫಿ ಚಿತ್ರೋತ್ಸವ : ಫಿಲ್ಮ್ ಬಜಾರ್ ನಲ್ಲಿ ಕಂಗೊಳಿಸಿದ ‘ನೀವಿನ್ನೂ ನೋಡದ ಮಣಿಪುರʼ!
ಸಮಗ್ರ ಅಭಿವೃದ್ಧಿ, ದುಡಿಯುವ ವರ್ಗಕ್ಕೆ ಕೆಲಸ ನೀಡುವ ಕೆಲಸ ಮಾಡುತಿದ್ದೇವೆ. ಅಂಜನಾದ್ರಿ ಬೆಟ್ಟದಲ್ಲಿ 120 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಗೋಹತ್ಯೆ ನಿಷೇಧ ಕಾನೂನಿನಲ್ಲಿ ನಮ್ಮ ಆದರ್ಶವಿದೆ. ಪುಣ್ಯಕೋಟಿ ಯೋಜನೆ ಮಾಡಿ ಒಂದು ಗೋವು ರಕ್ಷಣೆಗೆ 11 ಸಾವಿರ ರೂಪಾಯಿ ನೀಡಲಾಗುತ್ತಿದೆ. ಗೋವುಗಳ ರಕ್ಷಣೆ ಮಾಡಲು ಪೂಜನೀಯವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಜನರನ್ನು ಪ್ರೇರೇಪಿಸಿ ಒಳ್ಳೆ ಕೆಲಸಕ್ಕೆ ಜನರನ್ನು ಭಾಗಿಯಾಗಿಸಿಕೊಳ್ಳಲಾಗಿದೆ. ಮತಾಂತರ ನಿಷೇದ ಕಾಯ್ದೆ ಜಾರಿಗೆ ತಂದಾಗ ವಿರೋಧ ಪಕ್ಷಗಳು ಭಾರಿ ಮಾತನಾಡಿದರು. ಆದರೆ ಇದೀಗ ಸುಪ್ರೀಂ ಕೋರ್ಟ್ ಅದೇ ತೀರ್ಪನ್ನು ನೀಡಿದೆ. ನಮ್ಮ ಮಂದಿರಗಳನ್ನು ಭಕ್ತರೇ ಮೇಲ್ವಿಚಾರಣೆ ಮಾಡುವಂತಾಗಬೇಕು. ಮುಂದಿನ ದಿನಗಳಲ್ಲಿ ಇದನ್ನು ಮಾಡಿಯೇ ತೀರುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.