Advertisement
‘ಅಪನಗದೀಕರಣ ಮತ್ತು ಡಿಜಿಟಲ್ ಆರ್ಥಿಕತೆಯತ್ತ ಬದಲಾವಣೆ’ ಎಂಬ ವಿಚಾರದ ಬಗ್ಗೆ ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ಸರಕಾರದ ವಿವಿಧ ಸಚಿವಾಲಯಗಳ ಅಧಿಕಾರಿಗಳು ರವಿವಾರ ಮಾಹಿತಿ ನೀಡಿದರು. 2016ರ ನವೆಂಬರ್‌ಗೆ ಹೋಲಿಸಿದರೆ 2017ರ ಮೇ ವೇಳೆಗೆ ಎಲ್ಲ ರೀತಿಯ ಡಿಜಿಟಲ್ ವಹಿವಾಟುಗಳು ಶೇ.23ರಷ್ಟು ಅಂದರೆ 27.5 ದಶಲಕ್ಷದಷ್ಟು ಹೆಚ್ಚಳವಾಗಿವೆ. ಐಎಂಪಿಎಸ್ ವಹಿವಾಟು ದುಪ್ಪಟ್ಟಾಗಿದ್ದು, 1.2 ದಶಲಕ್ಷದಿಂದ 2.2 ದಶಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಪ್ಲಾಸ್ಟಿಕ್ ಕಾರ್ಡ್ ಬಳಕೆಯಲ್ಲಿ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಇದು ಕಳೆದ ವರ್ಷ 6.8 ದಶಲಕ್ಷವಿತ್ತು. ಪ್ರಸಕ್ತ ವರ್ಷ 7.3 ದಶಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದ ಜನಧನ ಖಾತೆಗಳಲ್ಲಿನ ಠೇವಣಿ ಮೊತ್ತ ಬರೋಬ್ಬರಿ 64,564 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಪೈಕಿ ನೋಟು ಅಮಾನ್ಯದ ಮೊದಲ 7 ತಿಂಗಳಲ್ಲೇ 300 ಕೋಟಿ ರೂ. ಠೇವಣಿ ಇಡಲಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. ಆರ್‌ಟಿಐ ಅಡಿ ಕೇಳಲಾಗಿದ್ದ ಮಾಹಿತಿಗೆ ಉತ್ತರಿಸಿದ್ದ ವಿತ್ತ ಸಚಿವಾಲಯವು, ಕಳೆದ ಜೂನ್‌ವರೆಗೆ ದೇಶದಲ್ಲಿ 28.9 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದೆ. 2016ರ ನವೆಂಬರ್ 16ಕ್ಕೆ ಈ ಖಾತೆಗಳಲ್ಲಿ ಸುಮಾರು 64,252.15 ಕೋಟಿ ರೂ. ಠೇವಣಿ ಇತ್ತು. ಅಂದಿನಿಂದ ಪ್ರಸಕ್ತ ವರ್ಷದ ಜೂನ್ 14ರವರೆಗಿನ ಅವಧಿಯಲ್ಲಿ ಈ ಖಾತೆಗಳಲ್ಲಿ 311.93 ಕೋಟಿ ಠೇವಣಿ ಇಡಲಾಗಿದೆ ಎಂದು ಹೇಳಿದೆ.