Advertisement

ದೈವಸ್ಥಳ ಆರೋಗ್ಯ ಕೇಂದ್ರದ 15 ಹುದ್ದೆಗಳಲ್ಲಿ 5 ಮಾತ್ರ ಭರ್ತಿ

10:45 PM Oct 09, 2019 | Team Udayavani |

ಬಂಟ್ವಾಳ: ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಗ್ರಾಮೀಣ ಜನತೆಯ ಆರೋಗ್ಯದ ಕೊಂಡಿಗಳಾಗಿದ್ದು, ಅಂತಹ ಕೇಂದ್ರಗಳಲ್ಲಿ ಸಿಬಂದಿ ಕೊರತೆಯಿಂದ ಜನತೆ ತೊಂದರೆ ಅನುಭವಿಸುವ ಸ್ಥಿತಿ ಇದೆ. ತಾ|ನ ಮಾಣಿನಾಲ್ಕೂರು ದೈವಸ್ಥಳ ಪ್ರಾಥ ಮಿಕ ಆರೋಗ್ಯ ಕೇಂದ್ರದಲ್ಲಿ ಮಂಜೂರಾದ 15 ಹುದ್ದೆಗಳಲ್ಲಿ ಪ್ರಸ್ತುತ 5 ಮಂದಿ ಮಾತ್ರ ಕಾರ್ಯ ನಿರ್ವಹಿಸುವ ಪರಿ ಸ್ಥಿತಿ ಇದೆ.

Advertisement

ಮಣಿನಾಲ್ಕೂರು ಹಾಗೂ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಸಾವಿರಾರು ಮಂದಿಗೆ ಪ್ರಮುಖ ಆಸ್ಪತ್ರೆ ಎನಿಸಿಕೊಂಡಿರುವ ದೈವಸ್ಥಳ ಆರೋಗ್ಯ ಕೇಂದ್ರಕ್ಕೆ ನಿತ್ಯವೂ 60ರಿಂದ 80 ರೋಗಿಗಳು ಆಗಮಿಸುತ್ತಿದ್ದು, ಸಿಬಂದಿ ಕೊರತೆಯಿಂದ ಬಂದವರು ಕಾಯಬೇಕಾದ ಸ್ಥಿತಿ ಇದೆ. ಮತ್ತೂಂದೆಡೆ 15 ಮಂದಿಯ ಕಾರ್ಯವನ್ನು 5 ಮಂದಿ ಮಾಡಬೇಕಿರುವುದರಿಂದ ಕಾರ್ಯ ನಿರ್ವ ಹಿಸುತ್ತಿರುವ ಸಿಬಂದಿಯೂ ಒತ್ತಡದಿಂ ದಲೇ ಕೆಲಸ ಮಾಡಬೇಕಿದೆ.

ಈ ಪ್ರದೇಶಗಳು ತೀರಾ ಗ್ರಾಮೀಣ ಪ್ರದೇಶವಾಗಿದ್ದು, ಖಾಸಗಿ ಆಸ್ಪತ್ರೆ/ಚಿಕಿತ್ಸಾ ಕೇಂದ್ರ ಗಳಿಲ್ಲಿಲ್ಲ. ಆರೋಗ್ಯ ತೊಂದರೆ ಕಂಡುಬಂದಾಗ ಇದೇ ದೈವಸ್ಥಳ ಆರೋಗ್ಯ ಕೇಂದ್ರಕ್ಕೆ ತೆರಳ ಬೇಕಿದೆ. ಹೀಗಾಗಿ ಇಲ್ಲಿನ ಖಾಲಿ ಹುದ್ದೆ ಗಳ ಭರ್ತಿಗಾಗಿ ಸಾರ್ವಜನಿ ಕರು ಆಗ್ರಹಿಸುತ್ತಿದ್ದಾರೆ.

ಪ್ರಸ್ತುತ ದೈವಸ್ಥಳ ಆರೋಗ್ಯ ಕೇಂದ್ರ ದಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ಹುದ್ದೆಗೆ ನಿಯೋಜನೆ ಮೇಲೆ ಭರ್ತಿ ಮಾಡಲು ಪ್ರಯತ್ನ ನಡೆದಿದ್ದು, ಮುಂದಿನ ತಿಂಗಳು ಒಬ್ಬರನ್ನು ನಿಯೋಜನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜತೆಗೆ ಇಲ್ಲಿನ ವೈದ್ಯಾಧಿ ಕಾರಿಗಳೂ ಗುತ್ತಿಗೆ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಆಯುಷ್‌ ವೈದ್ಯೆ ಡಾ| ಪುಷ್ಪಾ ಕರ್ತವ್ಯದಲ್ಲಿದ್ದಾರೆ.

ಯಾರ್ಯಾರಿದ್ದಾರೆ-ಯಾರ್ಯಾರಿಲ್ಲ
ಪ್ರಸ್ತುತ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರೊಬ್ಬರು ಕಾರ್ಯನಿರ್ವಹಿಸುತ್ತಿದ್ದು, ಫಾರ್ಮಾಸಿಸ್ಟ್‌ ಹಾಗೂ ಪ್ರಯೋಗಶಾಲೆ ತಂತ್ರಜ್ಞೆ (ಲ್ಯಾಬ್‌ ಟೆಕ್ನೀಶಿಯನ್‌) ಎರಡೂ ಹುದ್ದೆಗಳು ಖಾಲಿ ಇವೆ. ಕಿರಿಯ ಆರೋಗ್ಯ ಸಹಾಯಕ (ಪುರುಷ) ಒಟ್ಟು 3 ಹುದ್ದೆಗಳಲ್ಲಿ ಪ್ರಸ್ತುತ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಹಿರಿಯ ಆರೋಗ್ಯ ಸಹಾಯಕ ಹಾಗೂ ಸಹಾಯಕಿ ತಲಾ ಒಂದೊಂದು ಹುದ್ದೆಗಳಲ್ಲಿ ಎರಡೂ ಖಾಲಿ ಇವೆ. ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಒಂದು ಹುದ್ದೆ ಖಾಲಿಯಿದ್ದು, ಗ್ರೂಪ್‌ ಡಿ ಒಂದು ಹುದ್ದೆ ಭರ್ತಿಯಾಗಿದೆ. ಕಿರಿಯ ಆರೋಗ್ಯ ಸಹಾಯಕಿ 4 ಹುದ್ದೆಗಳಲ್ಲಿ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಟಾಫ್‌ ನರ್ಸ್‌ ಒಂದು ಹುದ್ದೆ ಭರ್ತಿಯಾಗಿದೆ.

ಹೊರಗುತ್ತಿಗೆಗೆ ತಡೆ
ಆರೋಗ್ಯ ಇಲಾಖೆಯಲ್ಲಿ ಸರಕಾರವು ಕಳೆದ ಎಪ್ರಿಲ್‌ವರೆಗೆ ಲ್ಯಾಬ್‌ ಟೆಕ್ನೀಶಿಯನ್‌, ಫಾರ್ಮಾಸಿಸ್ಟ್‌ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತಿತ್ತು. ಪ್ರಸ್ತುತ ಹೊರಗುತ್ತಿಗೆ ನೇಮಕಕ್ಕೆ ತಡೆ ನೀಡಿರುವುದರಿಂದ ಸಾಕಷ್ಟು ಆರೋಗ್ಯ ಕೇಂದ್ರಗಳಲ್ಲಿ ಈ 2 ಹುದ್ದೆಗಳ ಭರ್ತಿಗೆ ತೊಂದರೆ ಯಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

ವೈದ್ಯರ ವಸತಿಯೂ ಖಾಲಿ
ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಕರ್ತವ್ಯ ನಿರ್ವಹಿಸುವ ಆರೋಗ್ಯ ಕೇಂದ್ರ ಪಕ್ಕದಲ್ಲೇ ಇರಬೇಕು ಎನ್ನುವ ಉದ್ದೇಶದಿಂದ ಕೇಂದ್ರಗಳ ಪಕ್ಕದಲ್ಲೇ ವೈದ್ಯರ ವಸತಿ ಗೃಹವನ್ನೂ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ದೈವಸ್ಥಳ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ವೈದ್ಯರ ವಸತಿ ಗೃಹವೂ ಖಾಲಿಯಿದ್ದು, ಹಿಂದೆ ಖಾಯಂ ವೈದ್ಯರು ಅದೇ ವಸತಿ ಗೃಹದಲ್ಲಿ ನೆಲೆಸಿ, ರಾತ್ರಿ ವೇಳೆಯೂ ಜನತೆಗೆ ಆರೋಗ್ಯ ಸೇವೆ ನೀಡುತ್ತಿದ್ದರು. ಪ್ರಸ್ತುತ ಖಾಯಂ ಹುದ್ದೆ ಇಲ್ಲದೇ ಇರುವುದರಿಂದ ಜನತೆ ತುರ್ತು ಅಗತ್ಯಗಳಿಗೆ ತಾಲೂಕು ಕೇಂದ್ರವನ್ನೇ ಸಂಪರ್ಕಿಸಬೇಕಾದ ಸ್ಥಿತಿ ಇದೆ.

 ಮುಂದಿನ ತಿಂಗಳು ನಿಯೋಜನೆ
ಆರೋಗ್ಯ ಕೇಂದ್ರಗಳ ಹುದ್ದೆಗಳ ಭರ್ತಿ ಸರಕಾರಿ ಮಟ್ಟದಲ್ಲಿ ನಡೆಯಬೇಕಾಗಿದ್ದು, ನೇಮಕಾತಿ-ವರ್ಗಾವಣೆ ನಡೆದು ಹೆಚ್ಚುವರಿ ಸಿಬಂದಿ ಆಗಮಿಸಿದರೆ ಹುದ್ದೆಗಳು ಭರ್ತಿ ಆಗುತ್ತವೆ. ಬೇರೆಡೆಯಿಂದ ನಿಯೋಜನೆ ಮಾಡಿದರೆ ಅಲ್ಲಿಗೂ ತೊಂದರೆಯಾಗುತ್ತದೆ. ಪ್ರಸ್ತುತ ದೈವಸ್ಥಳ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಿರುವ ಲ್ಯಾಬ್‌ ಟೆಕ್ನೀಶಿಯನ್‌ ಹುದ್ದೆಗೆ ಮುಂದಿನ ತಿಂಗಳು ತಾತ್ಕಾಲಿಕ ನಿಯೋಜನೆ ನಡೆಸಲಾಗುತ್ತದೆ.
– ಡಾ| ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next