Advertisement

5 ಬ್ಯಾಂಕ್‌ಗಳಿಗಷ್ಟೇ ಪಿಂಚಣಿ ಹಣ ಹಾಕ್ತೇವೆ

12:33 PM Aug 25, 2019 | Suhan S |

ಕೋಲಾರ: ಕೇಂದ್ರ ಸರ್ಕಾರ ಎಸ್‌ಬಿಐ, ಸಿಂಡಿಕೇಟ್, ಕಾರ್ಪೋರೆಷನ್‌, ಕೆನರಾ ಹಾಗೂ ವಿಜಯ ಬ್ಯಾಂಕ್‌ ಖಾತೆಗಳಿಗೆ ಮಾತ್ರ ಪಿಂಚಣಿ ಹಣ ನೀಡಲು ಆದೇಶಿಸಿದೆ. ಆದರೆ, ಕೆಲವರು ಬ್ಯಾಂಕ್‌ ಆಫ್‌ ಬರೋಡಾಗೆ ನೀಡುವಂತೆ ಮನವಿ ಮಾಡಿದ್ದು, ಅದನ್ನು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಪಷ್ಟಪಡಿಸಿದರು.

Advertisement

ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ನಿವೃತ್ತ ನೌಕರರ ಪಿಂಚಣಿ ಅದಾಲತ್‌ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಿವೃತ್ತ ನೌಕರರು ಪಿಂಚಣಿ ಸೌಲಭ್ಯ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಬ್ಯಾಂಕ್‌ ಮತ್ತು ಖಜಾನೆ ಅಧಿಕಾರಿಗಳು ಎಚ್ಚೆತ್ತು ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ತಡ ಮಾಡದೇ ನೀಡಿ: ಪ್ರಥಮ ಅದಾಲತ್‌ ಸಭೆ ಇದಾಗಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಿವೃತ್ತ ನೌಕರರ ಕುಂದುಕೊರತೆಗಳ ಸಭೆ ಕರೆಯಲಾಗಿದೆ. ಪಿಂಚಣಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಮತ್ತು ಖಜಾನೆ ಸಮಸ್ಯೆ ಹೇಳಿಕೊಂಡಿದ್ದಾರೆ. ಶೀಘ್ರವೇ ಪರಿಹಾರ ಮಾಡಲಾಗುವುದು. ಯಂತ್ರಗಳ ರಿಪೇರಿಯಿಂದಲೂ ವಿಳಂಬವಾಗುತ್ತಿದೆ ಎಂದು ನೌಕರರು ದೂರಿದ್ದಾರೆ. ಅವುಗಳನ್ನು ಸರಿಪಡಿಸಬೇಕು. ತಿಂಗಳಾಂತ್ಯ ಅಥವಾ ಮೊದಲನೇ ವಾರದಲ್ಲಿ ತಡ ಮಾಡದೇ ನಿವೃತ್ತರಿಗೆ ಪಿಂಚಣಿ ಹಣ ನೀಡುವಂತೆ ಬ್ಯಾಂಕ್‌ ಮತ್ತು ಖಜಾನೆ ಅಧಿಕಾರಿಗಳಿಗೆ ಸೂಚಿಸಿದರು.

85 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಇರುವ ಬಾಕಿ ವೇತನ ಕೂಡಲೇ ಪಾವತಿಸಬೇಕು. ಶೇ.20 ವೇತನ ಪರಿಷ್ಕರಣೆ ನೀಡಬೇಕು. ಅದಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನವರು ಇಲಾಖೆಯವರಿಗೆ ಪತ್ರ ಬರೆದು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಸಮಸ್ಯೆ ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆ: ವೃದ್ಧಾಪ್ಯ, ವಿಧವಾ ವೇತನಕ್ಕೆ ಸಂಬಂಧಿಸಿದಂತೆ ಹೋಬಳಿವಾರು ಸಭೆ ಕರೆದು ಕುಂದುಕೊರತೆ ಆಲಿಸಲಾಗುತ್ತಿದೆ. ಅದರಂತೆಯೇ ತಾಲೂಕು ಮಟ್ಟದಲ್ಲಿ ನಿವೃತ್ತ ನೌಕರರಿಗಾಗಿ ಸಭೆಗಳನ್ನು 2 ತಿಂಗಳಿಗೊಮ್ಮೆ ನಡೆಸಿ ಬಗೆಹರಿಸಲಾಗುವುದು. ನಾವೂ ಮುಂದೆ ಒಂದು ದಿನ ನಿವೃತ್ತಿಯಾಗಿ, ಪಿಂಚಣಿ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

Advertisement

ಹೋರಾಟದ ಎಚ್ಚರಿಕೆ: ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಯರಾಮರೆಡ್ಡಿ ಮಾತನಾಡಿ, ಜಿಲ್ಲಾದ್ಯಂತ ನಿವೃತ್ತ ನೌಕರರಿಗೆ ಎಲ್ಲಾ ಬ್ಯಾಂಕ್‌ ಮತ್ತು ಖಜಾನೆಯಲ್ಲಿ ಸಮಸ್ಯೆಯಾಗುತ್ತಿದೆ. ಯಾರೂ ಕೇಳುತ್ತಿಲ್ಲ. ಅನೇಕರಿಗೆ ಸಾಕಷ್ಟು ವಯಸ್ಸಾಗಿದೆ ಎನ್ನುವುದನ್ನೂ ಅರಿಯದೆ, ಪದೇ ಪದೆ ಅಲೆದಾಡಿಸುತ್ತಿದ್ದು, ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಿಂಚಣಿ ಸೌಲಭ್ಯ: ಬಂಗಾರಪೇಟೆ ಪೆರುಮಾಳ್‌ ಮಾತ ನಾಡಿ, ಬ್ಯಾಂಕ್‌ಗಳಲ್ಲಿ ಸರಿಯಾಗಿ ಪಿಂಚಣಿ ಸೌಲಭ್ಯ ಪಡೆಯಲಾಗುತ್ತಿಲ್ಲ. ಎಸ್‌ಬಿಐನವರು ಬಹಳ ನಿರ್ಲಕ್ಷ್ಯ ದಿಂದ ಕಾಣುತ್ತಿದ್ದಾರೆ. ಸಿಬ್ಬಂದಿ ಸರಿಯಾಗಿ ಸ್ಪಂದಿ ಸುತ್ತಿಲ್ಲ. ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಪಿಂಚಣಿ ಸೌಲಭ್ಯ ಸಕಾಲಕ್ಕೆ ಬರುವಂತೆ ಮಾಡಬೇಕು ಎಂದರು.

ಬರೋಡ ಬ್ಯಾಂಕ್‌ಗೆ ಹಾಕಿ: ಗಿರಿಜಾ ಮಾತನಾಡಿ, ನಮ್ಮ ಮಾವನಿಗೆ 85 ವರ್ಷ ವಯಸ್ಸಾಗಿದ್ದು, ಸಾಲಿನಲ್ಲಿ ನಿಂತು ಪಿಂಚಣಿ ಪಡೆಯಲಾಗುತ್ತಿಲ್ಲ. ಬ್ಯಾಂಕ್‌ನವರಿಗೆ ನಮ್ಮ ಕಷ್ಟ ಹೇಳಿದರೆ ಅರ್ಥ ಆಗುತ್ತಿಲ್ಲ. ಸಾಲದ ವ್ಯವಸ್ಥೆಯನ್ನೂ ವಿಳಂಬ ಮಾಡುತ್ತಿದ್ದಾರೆ ಎಂದು ಎಸ್‌ಬಿಐ ಹಾಗೂ ಸಿಂಡಿಕೇಟ್ ಬ್ಯಾಂಕ್‌ಗಳ ವಿರುದ್ಧ ಆರೋಪಿಸಿ, ಬರೋಡ ಬ್ಯಾಂಕ್‌ನಲ್ಲಿ ಸೌಲಭ್ಯ ಮಾಡಿಕೊಡುವಂತೆ ಮನವಿ ಮಾಡಿದರು.

ಪ್ರತ್ಯೇಕ ಕೌಂಟರ್‌ ತೆರೆಯಿರಿ: ಮಾಲೂರು ಎಂ.ಆರ್‌.ವೆಂಕಟೇಶ್‌ ಮಾತನಾಡಿ, ಎಸ್‌ಬಿಐನಲ್ಲಿ ಇದಕ್ಕಿಂತಲೂ ಸಮಸ್ಯೆಯಿದೆ. ಯಂತ್ರಗಳು ಕೆಲಸ ಮಾಡುತ್ತಿಲ್ಲ ಎಂದು ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ. ಕುಳಿತುಕೊಳ್ಳಲು ಜಾಗವಿಲ್ಲ. ಪ್ರತ್ಯೇಕ ಕೌಂಟರ್‌ ತೆರೆದು ವ್ಯವಸ್ಥೆ ಸರಿಪಡಿಸಬೇಕು ಎಂದು ಕೋರಿದರು.

ಕಷ್ಟಗಳಿಗೆ ಸ್ಪಂದಿಸಲ್ಲ: ಶ್ರೀನಿವಾಸಪುರದ ಶ್ರೀನಿವಾಸರೆಡ್ಡಿ ಮಾತನಾಡಿ, ಎಸ್‌ಬಿಐನಲ್ಲಿ ಎಟಿಎಂ ಇದ್ದರೂ ಹಣ ಇರಲ್ಲ. ಕುಳಿತುಕೊಳ್ಳಲು ಜಾಗವಿಲ್ಲ. ಬ್ಯಾಂಕ್‌ನಲ್ಲಿ ವ್ಯವಸ್ಥೆ ತೀರಾ ಹದಗೆಟ್ಟಿದೆ. ಯುವ ಸಿಬ್ಬಂದಿ ಯಾವುದಕ್ಕೂ ಸ್ಪಂದಿಸುತ್ತಿಲ್ಲ, ನನಗೆ 82 ವರ್ಷ ವಯಸ್ಸಾಗಿದೆ. ಹೃದಯ ಶಸ್ತ್ರಚಿಕಿತ್ಸೆಯಾಗಿದೆ, ಏನಾದರೂ ತೊಂದರೆಯಾದರೆ ಯಾರು ಗತಿ ಎಂದು ಅಳಲು ತೋಡಿಕೊಂಡರು. ಈ ವೇಳೆ ಬ್ಯಾಂಕ್‌ ಅಧಿಕಾರಿಗಳು ತಮ್ಮ ಸಿಬ್ಬಂದಿಯ ತಪ್ಪು ಒಪ್ಪಿಕೊಂಡು, ಮುಂದೆ ಈ ರೀತಿ ತೊಂದರೆಯಾಗದಂತೆ ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ಭರವಸೆ ನೀಡಿದರು. ಸಭೆಯಲ್ಲಿ ತಹಶೀಲ್ದಾರ್‌ ನಾಗಮಣಿ, ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next