ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದರೆ,1,444 ಮತದಾರರು ಇರುವ ಕ್ಷೇತ್ರದಲ್ಲಿ ಈವರೆಗೂ ಕೇವಲ 44 ಮಂದಿ ಮಾತ್ರ ಮತ ಚಲಾಯಿಸಿರುವ ಘಟನೆ ಬೆಂಗಳೂರಿನ ಲೊಟ್ಟೆಗೊಳ್ಳಹಳ್ಳಿಯಲ್ಲಿ ನಡೆದಿದೆ. ಇದಕ್ಕೆ ಕಾರಣ ಇವಿಎಂ ಯಂತ್ರದಲ್ಲಿನ ದೋಷ!
ಇವಿಎಂ ಯಂತ್ರದಲ್ಲಿನ ದೋಷದ ಹಿನ್ನೆಲೆಯಲ್ಲಿ ಲೊಟ್ಟೆಗೊಳ್ಳಹಳ್ಳಿಯ 158ನೇ ಬೂತ್ ಗಳಲ್ಲಿ ಮತದಾನ ಸ್ಥಗಿತಗೊಂಡಿರುವುದಾಗಿ ಮತದಾರರು ಆರೋಪಿಸಿದ್ದಾರೆ.
ಇವಿಎಂ ದೋಷದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೇರೆ, ಬೇರೆ ಸ್ಥಳಗಳಿಂದ ಮತಚಲಾಯಿಸಲು ಆಗಮಿಸಿದ್ದ ಮತದಾರರು ಕಾಯುವಂತಾಗಿದೆ.
ಇಂದು ಬೆಳಗ್ಗೆಯಿಂದ ಮೂರು ಬಾರಿ ಮತಗಟ್ಟೆಗೆ ಬಂದಿದ್ದೇವೆ, ಆದರೆ ಈವರೆಗೂ ಮತಯಂತ್ರ ಸರಿಹೋಗಿಲ್ಲ ಎಂದು ಮಹಿಳಾ ಮತದಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಮರುಮತದಾನಕ್ಕೆ ಆದೇಶ
ಇವಿಎಂ ಸಮಸ್ಯೆ ಕಾರಣದಿಂದಾಗಿ ಲೊಟ್ಟೆಗೊಳ್ಳಹಳ್ಳಿ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ. ಮರು ಮತದಾನದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.