ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಪುರಸಭೆಯಿಂದ ಇತ್ತೀಚೆಗೆ ಫಲಾನುಭವಿಗಳಿಗೆ ನಿವೇಶನಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಹೆಚ್ಚು ನಿವೇಶನ ವಿತರಿಸಲಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ 637 ನಿವೇಶನಗಳನ್ನು ಗುರುತಿಸಿ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ಎಸ್‌ಸಿ ಸಮುದಾಯಕ್ಕೆ 104, ಎಸ್ ಟಿಗೆ 218, ದಿವ್ಯಾಂಗರಿಗೆ 44, ಅಲ್ಪಸಂಖ್ಯಾತರರಿಗೆ 19, ಮಾಜಿ ಸೈನಿಕರಿಗೆ 13, ವಿಧವೆಯರಿಗೆ 6 ಹಾಗೂ ಸಾಮಾನ್ಯ ವರ್ಗದರಿಗೆ 233 ನಿವೇಶನ ವಿತರಿಸಲಾಗಿದೆ ಎಂದರು. ಮೀಸಲಾತಿ ಪರಿಕಲ್ಪನೆಯ ವಿರುದ್ಧ ನಿವೇಶನ ಹಂಚಲಾಗಿದೆ. ಶೇ.7ರಂತೆ ಎಸ್‌ಟಿಗೆ 45 ನಿವೇಶನ ನೀಡಬೇಕಾಗಿತ್ತು. ಆದರೆ, ಎಸ್‌ಟಿಗೆ ಅತಿ ಹೆಚ್ಚು ಅಂದರೆ 218 ನಿವೇಶನ ನೀಡಿದ್ದಾರೆ. ಈ ಸಮುದಾಯಕ್ಕೆ 174 ನಿವೇಶನ ಹೆಚ್ಚುವರಿಯಾಗಿ ನೀಡಿದ್ದಾರೆ. ಇತರೆ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಾರ ದಿವ್ಯಾಂಗರಿಗೆ 44 ನಿವೇಶನ ನೀಡಿದ್ದು, ಇದರಲ್ಲೂ 23 ಫಲಾನುಭವಿಗಳು ಎಸ್‌ಟಿ ಸಮುದಾಯಕ್ಕೆ ಸೇರಿರುತ್ತಾರೆ. ಅಲ್ಪಸಂಖ್ಯಾತ ಸಮುದಾಯದ ಒಬ್ಬರ ಹೆಸರು ದಿವ್ಯಾಂಗರ ಪಟ್ಟಿಯಲ್ಲಿ ಇಲ್ಲ. ಅಲ್ಪಸಂಖ್ಯಾತರಿಗೆ ಕೇವಲ 19 ನಿವೇಶನ ನೀಡಿರುವುದು ತಾರತಮ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜಕೀಯ ಪ್ರಭಾವಿಗಳು, ಹಣ ನೀಡಿದವರಿಗೆ ನಿವೇಶನ ನೀಡಿದ್ದಾರೆ ಎಂದು ಆರೋಪಿಸಿದರು.
ಗೋದಾವರಿ ಎಂಬುವರಿಗೆ ಪಟ್ಟಣದ ಮಹದೇವಪ್ರಸಾದ್ ನಗರದಲ್ಲಿ ಮನೆ ಇದ್ದರೂ ವಸತಿರಹಿತರು ಎಂದು ಅವರಿಗೆ ಮತ್ತೆ ನಿವೇಶನ ನೀಡಲಾಗಿದೆ ಎಂದು ಆರೋಪಿಸಿದರು.
ಪುರಸಭಾ ಸದಸ್ಯ ರಾಜಗೋಪಾಲ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಹೇಶ್, ತಾಲೂಕು ಅಧ್ಯಕ್ಷ ಸೈಯದ್ ಅಕ್ರಮ್ ಪಾಷಾ, ಸಿ.ಕೆ.ನಯಾಜ್ ವುಲ್ಲಾ ಹಾಜರಿದ್ದರು.