Advertisement

ಬಿಐಇಸಿ ಕೇಂದ್ರದಲ್ಲಿ ಕೇವಲ 171 ಜನ ಮಾತ್ರ ದಾಖಲು

08:34 AM Aug 02, 2020 | Suhan S |

ಬೆಂಗಳೂರು: ನಗರದಲ್ಲಿ ಹೋಂ ಐಸೋಲೇಷನ್‌ಗೆ ಬಿಬಿಎಂಪಿ ಮತ್ತು ಜನ ಹೆಚ್ಚು ಆದ್ಯತೆ ನೀಡುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಿರುವ ಆರೈಕೆ ಕೇಂದ್ರಕ್ಕೆ ಕೇವಲ 171 ಜನ ದಾಖಲಾಗಿದ್ದಾರೆ.

Advertisement

ಈ ಕೇಂದ್ರದಲ್ಲಿ 10 ಸಾವಿರ ಸೋಂಕು ಲಕ್ಷಣವಿಲ್ಲದವರಿಗೆ ಆರೈಕೆ ನೀಡಲು ಅವಕಾಶವಿದ್ದು, ಮೊದಲ ಹಂತದಲ್ಲಿ 1,500 ಹಾಸಿಗೆಗಳನ್ನು ಸೇವೆಗೆ ಜು. 28ಕ್ಕೆ ಸೇವೆಗೆ ಮುಕ್ತಗೊಳಿಸಲಾಗಿದೆ. ಒಟ್ಟು ಐದು ಕೋವಿಡ್‌ ಆರೈಕೆ ಸಭಾಂಗಣ ನಿರ್ಮಿಸಿದ್ದು, ಇದರಲ್ಲಿ 171ಜನ ಸದ್ಯ ಈಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು 1,329 ಹಾಸಿಗೆಗಳು ಖಾಲಿ ಇವೆ.

ನಗರದಲ್ಲಿ ಸೋಂಕಿತ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ತೀವ್ರ ಲಕ್ಷಣ ಇಲ್ಲದವರಿಗೆ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇಲ್ಲಿಯವರೆಗೆ ನಗರದಲ್ಲಿ ಮೊದಲ ಹಂತದಲ್ಲಿ ಬಿಐಇಸಿ ಕೋವಿಡ್‌ ಕೇಂದ್ರ ಸೇರಿದಂತೆ ಒಟ್ಟು 10 ಕೋವಿಡ್‌ ಆರೈಕೆ ಕೇಂದ್ರಗಳನ್ನು ಸೇವೆಗೆ ಮುಕ್ತಗೊಳಿಸಲಾಗಿದ್ದು, ಇದರಲ್ಲಿ ಒಟ್ಟು 4076 ಹಾಸಿಗೆಗಳಿವೆ. ಇದರಲ್ಲಿ 2,393 ಹಾಸಿಗೆಗಳು ಭರ್ತಿಯಾಗಿದ್ದು, 1,683 ಹಾಸಿಗೆಗಳು ಇನ್ನೂ ಖಾಲಿ ಇವೆ.

ಭರ್ತಿಯಾಗಿರುವ ಎಲ್ಲ ಹಾಸಿಗೆಗಳಲ್ಲಿ ಎಲ್ಲವೂ ಸಾಮಾನ್ಯ ವಾರ್ಡ್‌ ಮಾದರಿಯ ಹಾಸಿಗೆಗಳಾಗಿವೆ. ಆದರೆ, ಮೊದಲ ಹಂತದಲ್ಲಿ ಹತ್ತು ಆರೈಕೆ ಕೇಂದ್ರಗಳು ಸೇವೆಗೆ ಮುಕ್ತವಾಗಿದ್ದರೂ, ಈ ಕೇಂದ್ರಗಳಲ್ಲಿ ಜನ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ. ವಾರ್ಡ್‌ ವಾರು ಆರೈಕೆಗೆ ಕೇಂದ್ರ ವ್ಯವಸ್ಥೆ ಮಾಡಲಾಗಿದೆ.

18,661 ಜನ ಹೋಂ ಐಸೋಲೇಷನ್‌ :  ನಗರದಲ್ಲಿ ಸೋಂಕು ದೃಢಪಟ್ಟು ಹೋಂ ಐಸೋಲೇಷನ್‌ ಆಗಿರುವವರ ಬಗ್ಗೆ ಹಾಗೂ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವವರ ಬಗ್ಗೆ ನಿಗಾ ವಹಿಸುವಂತೆ ಬೂತ್‌ ಮಟ್ಟ ಸಿಬ್ಬಂದಿಗೆ ಆಯುಕ್ತ ಮಂಜುನಾಥ ಪ್ರಸಾದ್‌ ನಿರ್ದೇಶನ ನೀಡಿದ್ದಾರೆ. ಶನಿವಾರ ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನ ಬೂತ್‌ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವವರು ಕಚೇರಿ ಕೆಲಸಗಳಿಗೆ ಹೋಗುವುದಕ್ಕೆ ಅವಕಾಶ ನೀಡಬೇಡಿ. ಅಗತ್ಯ ಬಿದ್ದರೆ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವ ಬಗ್ಗೆ ಪ್ರಮಾಣ ಪತ್ರ (ಕಚೇರಿಗೆ ದೃಢೀಕರಣ ಪತ್ರ ನೀಡಲು) ನೀಡಿ ಎಂದರು. ನಗರದಲ್ಲಿ 18,661 ಜನ ಹೋಂ ಐಸೋಲೇಷನ್‌ ನಲ್ಲಿದ್ದಾರೆ. ಸೋಂಕು ದೃಢಪಟ್ಟವರಲ್ಲಿ ಶೇ.75 ರಷ್ಟು ಸೋಂಕಿತರಿಗೆ ರೋಗದ ಲಕ್ಷಣಗಳಿಲ್ಲ. ಹೀಗಾಗಿ, ಇವರಿಗೆ ಹೋಂ ಐಸೋಲೇಷನ್‌ ಆಗಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

Advertisement

ಸೇವೆಗೆ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು :  ನಗರದಲ್ಲಿ ಕೊರೊನಾ ತಡೆಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳನ್ನು ಸೇವೆಗೆ ನಿಯೋಜಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.ಈ ಸಂಬಂಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಆದೇಶ ಮಾಡಿರುವ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು, ಜಯನಗರದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪ್ಯಾರಾ ಮೆಡಿಕಲ್‌ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತೊಡಗಿಸಿಕೊಂಡಿರುವ 994 ವಿದ್ಯಾರ್ಥಿಗಳನ್ನು ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ವಿವಿ ಕುಲಸಚಿವರು ನಿಯೋಜನೆ ಮಾಡುಂತೆ ಹಾಗೂ ಎಲ್ಲ ವಿದ್ಯಾರ್ಥಿಗಳು ಆ.3ರ ಒಳಗಾಗಿ ಬಿಬಿಎಂಪಿ ಉಪ ಆಯುಕ್ತರ (ಆಡಳಿತ) ಬಳಿ ತಪ್ಪದೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸ್ವ್ಯಾಬ್‌ ಸಂಗ್ರಹಣೆಗೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು :  ನಗರದಲ್ಲಿ ಸೋಂಕು ಪರೀಕ್ಷೆ ಗಂಟಲು ದ್ರವ ಸಂಗ್ರಹಣೆಗೆ ಸಿಬ್ಬಂದಿ ಅವಶ್ಯವಿರುವ ಹಿನ್ನೆಲೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತು ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಡಾ.ಗಣನಾಥ ಶೆಟ್ಟಿ ಅವರಿಗೆ ಬಿಬಿಎಂಪಿ ಆಯುಕ್ತರು ಪತ್ರ ಬರೆದಿದ್ದಾರೆ. ಸ್ವ್ಯಾಬ್‌ ಸಂಗ್ರಹಣಾ ಘಟಕಗಳನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ಕಾಲೇಜುಗಳಿಂದ ನಿಯೋಜಿಸುವಂತೆ ಕೋರಿದ್ದು, ಸ್ವ್ಯಾಬ್‌ಸಂಗ್ರಹಣೆಗೆ ನಿಯೋಜನೆಗೊಂಡ ವಿದ್ಯಾರ್ಥಿಗಳಿಗೆ ಮಾಸಿಕ 14 ಸಾವಿರ ರೂ. ಗೌರವಧನ, ವಾಹನ ವ್ಯವಸ್ಥೆ ನೀಡುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಸೋಂಕು ಲಕ್ಷಣವಿಲ್ಲದಿರುವವರು ಹಾಗೂ ಸೋಂಕಿನ ತೀವ್ರ ಇಲ್ಲದೆ ಇರುವವರು ಕೋವಿಡ್‌ ಆರೈಕೆ ಕೇಂದ್ರಕ್ಕೆ ನೇರವಾಗಿ ಬರುವ ಅವಕಾಶ ಕಲ್ಪಿಸಲಾಗಿದೆ. ಯಾರಿಗೆ ಮನೆಯಲ್ಲೇ ಪ್ರತ್ಯೇಕವಾಗಿರಲು ಎಲ್ಲ ಅವಕಾಶವಿದೆಯೋ ಅವರಿಗೆ ಮಾತ್ರ ಹೋಂ ಐಸೋಲೇಷನ್‌ನಲ್ಲಿರಲು ಹೇಳಲಾಗಿದೆ. ಎನ್‌. ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next