Advertisement

ಅಸಮರ್ಪಕ ಮೌಲ್ಯಮಾಪನಕ್ಕೆ ಕೇವಲ 100 ರೂ. ದಂಡ!

11:12 AM Apr 01, 2022 | Team Udayavani |

ದಾವಣಗೆರೆ: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟ ಎನಿಸಿದ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಅಸಮರ್ಪಕವಾಗಿ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಗೆ ಶಿಕ್ಷಣ ಇಲಾಖೆ ವಿಧಿಸಿದ ದಂಡ ಮೊತ್ತ ತಲಾ 100 ರೂ.!

Advertisement

ಹೌದು, ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಅಸಮರ್ಪವಾಗಿ ಮಾಡಿ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಜತೆಗೆ ವಿದ್ಯಾರ್ಥಿ ಭವಿಷ್ಯ ಹಾಗೂ ಜೀವದೊಂದಿಗೂ (ಕೆಲವೊಮ್ಮೆ ಆತ್ಮಹತ್ಯೆಯಂಥ ಕ್ರಮದಿಂದ) ಚೆಲ್ಲಾಟವಾಡುವ ಮೌಲ್ಯಮಾಪಕರಿಗೆ ಸರ್ಕಾರ ವಿಧಿಸಿದ ದಂಡ ಮೊತ್ತ ನಿಜಕ್ಕೂ ಅಚ್ಚರಿ ಮೂಡಿಸಿದೆ.

ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಂಬಂಧಿಸಿ ಪ್ರತಿ ವರ್ಷ ಅನೇಕ ಅವಾಂತರಗಳು ಸುದ್ದಿಯಾಗುತ್ತಲೇ ಇವೆ. ಅಷ್ಟೇ ಅಲ್ಲ, ಮರು ಮೌಲ್ಯಮಾಪನದಲ್ಲೂ ಅಂಕಗಳು ವ್ಯತ್ಯಾಸವಾಗಿ ಮೌಲ್ಯಮಾಪಕರ ಕಾರ್ಯದ ಬಗ್ಗೆ ಶಂಕೆ ಮೂಡುವಂತಾಗಿದೆ. ಆದರೂ ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲೆ ಯಾವುದೇ ಗಂಭೀರ ಶಿಸ್ತು ಕ್ರಮ ಆಗದೇ ಕೇವಲ ನೂರು ರೂ. ದಂಡ ಹಾಕಿ ಕೈತೊಳೆದುಕೊಳ್ಳುವ ಇಲಾಖೆಯ ನೀತಿ ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲಿನ ಕ್ರಮ ಕುರಿತು ಕಳೆದ ಸೋಮವಾರ ವಿಧಾನ ಪರಿಷತ್ತಿನಲ್ಲಿ ಎನ್‌.ರವಿಕುಮಾರ್‌ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಉತ್ತರ ನೀಡಿದ್ದಾರೆ. ಇದರಲ್ಲಿ ಮೌಲ್ಯಮಾಪಕರಿಗೆ ವಿಧಿಸಿದ ದಂಡದ ಮೊತ್ತದ ಮಾಹಿತಿ ಬಹಿರಂಗಗೊಂಡಿದೆ.

ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ (2018-19, 2019-20 ಹಾಗೂ 2020-21ನೇ ಸಾಲಿನಲ್ಲಿ ) ನಡೆದ ಪಿಯು ಪರೀಕ್ಷೆಗಳಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದವರ ನಾಲ್ವರಿಂದ ಒಟ್ಟು 400 ರೂ. ದಂಡವನ್ನು ವಿಶೇಷ ಪ್ರಕರಣದಡಿ ವಸೂಲಿ ಮಾಡಲಾಗಿದೆ. 2018-19ನೇ ಸಾಲಿನಲ್ಲಿ ಯಾವುದೇ ದಂಡ ವಸೂಲಿ ಮಾಡಿಲ್ಲ. 2019-20ನೇ ಸಾಲಿನಲ್ಲಿ ಮಾತ್ರ ನಾಲ್ವರಿಂದ ತಲಾ 100 ರೂ. ಗಳಂತೆ 400 ರೂ. ವಸೂಲಿ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಕೋವಿಡ್‌-19 ಕಾರಣದಿಂದ ವಾರ್ಷಿಕ ಪರೀಕ್ಷೆ ನಡೆಸಿಲ್ಲ. ಆದರೆ ಖಾಸಗಿ ಅಭ್ಯರ್ಥಿಗಳು ಮತ್ತು ಸರ್ಕಾರಿ ಆದೇಶದನ್ವಯ ಪ್ರಕಟಿಸಿದ ಫಲಿತಾಂಶ ಒಪ್ಪದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಈ ಸಾಲಿನಲ್ಲಿಯೂ ಅಸಮರ್ಪಕ ಮೌಲ್ಯಮಾಪನ ಮಾಡಿದವರಿಂದ ಯಾವುದೇ ದಂಡ ವಸೂಲಿ ಮಾಡಿಲ್ಲ.

Advertisement

ಅಂಕ ವ್ಯತ್ಯಾಸ ವಿವರ: ಕಳೆದ 3 ವರ್ಷಗಳಲ್ಲಿ ಅಸಮರ್ಪಕ ಮೌಲ್ಯಮಾಪನದಿಂದ 2,777 ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಸ್ಕಾ Âನ್‌ ಪ್ರತಿ ನೀಡಿ ಮರು ಎಣಿಕೆ ಮತ್ತು ಮರು ಮೌಲ್ಯಮಾಪನದ ಮೂಲಕ ಶೇ.6 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾದಲ್ಲಿ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಪಾವತಿಸಿದ ಹಣವನ್ನು ಪಡೆದ ಅಂಕಗಳೊಂದಿಗೆ ನೀಡಲಾಗಿದೆ.

2019ರಲ್ಲಿ 1008 ವಿದ್ಯಾರ್ಥಿಗಳ ಅಂಕಗಳು ಶೇ.6ಕ್ಕಿಂತ ಹೆಚ್ಚು ವ್ಯತ್ಯಾಸವಾಗಿತ್ತು. 66 ವಿದ್ಯಾರ್ಥಿಗಳ ಅಂಕ ಶೇ.6ಕ್ಕಿಂತ ಕಡಿಮೆ ವ್ಯತ್ಯಾಸವಾಗಿತ್ತು. 2020ರಲ್ಲಿ ಅತಿ ಹೆಚ್ಚು ಅಂದರೆ 1540 ವಿದ್ಯಾರ್ಥಿಗಳ ಅಂಕಗಳು ಶೇ.6ಕ್ಕಿಂತ ಹೆಚ್ಚು ವ್ಯತ್ಯಾಸವಾಗಿತ್ತು. 124 ವಿದ್ಯಾರ್ಥಿಗಳ ಅಂಕ ಶೇ.6ಕ್ಕಿಂತ ಕಡಿಮೆ ವ್ಯತ್ಯಾಸವಾಗಿತ್ತು. 2021ರಲ್ಲಿ 31 ವಿದ್ಯಾರ್ಥಿಗಳ ಅಂಕ ಶೇ.6ಕ್ಕಿಂತ ಹೆಚ್ಚು ವ್ಯತ್ಯಾಸವಾಗಿತ್ತು. ಎಂಟು ವಿದ್ಯಾರ್ಥಿಗಳ ಅಂಕ ಶೇ.6ಕ್ಕಿಂತ ಕಡಿಮೆ ವ್ಯತ್ಯಾಸವಾಗಿತ್ತು.

ಒಟ್ಟಾರೆ ಪಿಯು ಪರೀಕ್ಷೆಯಲ್ಲಿನ ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲೆ ಇಲಾಖೆ ಗಂಭೀರ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಬೇಕು. ಇಲ್ಲಿದ್ದರೆ ಮೌಲ್ಯಮಾಪನದಲ್ಲಿನ ಅವಾಂತರ ಹೀಗೆಯೇ ಮುಂದುವರೆದರೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಪಾಲಕರ ಆಕ್ರೋಶಕ್ಕೂ ಕಾರಣವಾಗಲಿದೆ.

ಕ್ರಿಮಿನಲ್‌ ಕೇಸ್‌ ಇಲ್ಲ: ಅಸಮರ್ಪಕ ಮೌಲ್ಯಮಾಪನದಿಂದಾಗಿ ಕಡಿಮೆ ಅಂಕ ಬಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೆ ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಹಾಗೂ ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬಗ್ಗೆ ಸರ್ಕಾರದ ನಿಲುವೇನು ಎಂಬ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿರುವ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಕಳೆದ ಮೂರು ವರ್ಷಗಳಲ್ಲಿ ಇಂಥ ಪ್ರಕರಣ ಯಾವುದೂ ದಾಖಲಾಗಿಲ್ಲ. ಅಲ್ಲದೇ ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

ವಿದ್ಯಾರ್ಥಿಗಳ ಭವಿಷ್ಯ ಪರೀಕ್ಷೆ ಮೌಲ್ಯಮಾಪನದಲ್ಲಿ ಅಡಗಿದೆ. ಹಾಗಾಗಿ ಅದರಲ್ಲಿ ಎಳ್ಳಷ್ಟೂ ತಪ್ಪು ನಡೆಯಬಾರದು. ತಪ್ಪು ನಡೆದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕು. ಕೇವಲ 100 ರೂ. ವಿಧಿಸಿದರೆ ಸಾಲದು. ಇನ್ನೊಮ್ಮೆ ಮೌಲ್ಯಮಾಪನದಲ್ಲಿ ತಪ್ಪು ಮಾಡದಂತೆ ಎಚ್ಚರಿಕೆ ಗಂಟೆ ಆಗುವ ರೀತಿಯಲ್ಲಿ ಶೈಕ್ಷಣಿಕ ಶಿಕ್ಷೆ ವಿಧಿಸಬೇಕು.

-ಡಾ|ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞ, ದಾವಣಗೆರೆ

 

ಅಸಮರ್ಪಕ ಮೌಲ್ಯಮಾಪನ ಮಾಡಿದವರಿಗೆ 100 ರೂ. ದಂಡ ಹಾಕುವುದು ಸಮಂಜಸವಲ್ಲ. ತಪ್ಪು ಮಾಡುವ ಮೌಲ್ಯಮಾಪಕರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ಹೆಸರನ್ನು ಎಲ್ಲರಿಗೂ ತಿಳಿಯುವಂತೆ ಬಹಿರಂಗಪಡಿಸಬೇಕು. ಜತೆಗೆ ಅವರ ಒಂದೆರಡು ತಿಂಗಳ ಸಂಬಳ ಕಡಿತಗೊಳಿಸಬೇಕು. ಅಂದಾಗ ಮಾತ್ರ ಮಾಡಿದ ತಪ್ಪಿಗೆ ಒಂದಿಷ್ಟು ಕ್ರಮ ಆದಂತಾಗುತ್ತದೆ.

-ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next