ಬಾಗಲಕೋಟೆ: ನೀರಿನ ಟ್ಯಾಂಕರ್ ಬಂತು ಓಡ್ರಲೇ…ಇದು ಬಾದಾಮಿ ತಾಲೂಕು ಕೆಲವಡಿ ಗ್ರಾಪಂ ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ ನಿತ್ಯ ಕೇಳಿ ಬರುವ ಕೂಗು.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ಬಹುತೇಕ ಹಳ್ಳಿಗಳಿಗಿಂತ, ಲಿಂಗಾಪುರದಲ್ಲಿ ಸಮಸ್ಯೆಯ ತೀವ್ರತೆ ಹೆಚ್ಚಿದೆ. ಇಲ್ಲಿನ ಜನ-ಜಾನುವಾರುಗಳಿಗೆ ನೀರು ಕೊಡುವ ಪ್ರಯತ್ನ ತಾಲೂಕು ಆಡಳಿತ ಮಾಡಿದೆಯಾದರೂ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
550ದನ-ಕುರಿ-1300 ಜನ: ಕೆಲವಡಿ ಗ್ರಾಪಂ ವ್ಯಾಪ್ತಿಯ ಲಿಂಗಾಪುರದಲ್ಲಿ 915 ಜನ ಮತದಾರರಿದ್ದಾರೆ. 1388 ಜನಸಂಖ್ಯೆ ಇಲ್ಲಿದ್ದು, ಕುಡಿಯುವ ನೀರಿಗೆ ಸದ್ಯ ಸರ್ಕಾರದ ಟ್ಯಾಂಕರ್‌ಗಳೇ ಜಲಮೂಲವಾಗಿವೆ.
250ಕ್ಕೂ ಹೆಚ್ಚು ಎತ್ತು, ಎಮ್ಮೆ, ಆಕಳು ಇದ್ದು, ಸುಮಾರು 300ಕ್ಕೂ ಹೆಚ್ಚು ಕುರಿಗಳಿವೆ. ಕುರಿ-ದನಗಳು ಸೇರಿ ಸುಮಾರು 550ಕ್ಕೂ ಹೆಚ್ಚು ಆಗಲಿದ್ದು, ಅವುಗಳಿಗೆ ನೀರು ಕೊಡುವುದೇ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆ. ನೀರಿನ ಸಮಸ್ಯೆಯಿಂದ ಹಲವು ರೈತರು, ತಮ್ಮ ಜಾನುವಾರುಗಳನ್ನು ಕೆರೂರ ಸಂತೆಗೆ ಹೋಗಿ ಮಾರಾಟ ಮಾಡಿದವರೂ ಇದ್ದಾರೆ. ಇನ್ನೂ ಕೆಲವರು, ಇನ್ನೇನು ಬರ ಮುಗಿಯಿತು, ಇಂದಲ್ಲ-ನಾಳೆ ಮಳೆ ಬಂದರೆ ಸಮಸ್ಯೆ ಮುಗಿಯಲಿದೆ ಎಂಬ ಆಶಾಭಾವನೆಯಿಂದ ಕಾಯುತ್ತಿದ್ದಾರೆ.
ಜನಕ್ಕೂ-ದನಕ್ಕೂ 10 ಲೀಟರ್ ನೀರು: ಕೆಲವಡಿ ಗ್ರಾಪಂನಿಂದ ಲಿಂಗಾಪುರಕ್ಕೆ ನಿತ್ಯ 6 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಳಗ್ಗೆ 3 ಟ್ಯಾಂಕರ್, ಸಂಜೆ 3 ಟ್ಯಾಂಕರ್ ನೀರು ಕೊಡುತ್ತಿದ್ದು, ಗ್ರಾಮಕ್ಕೆ ನೀರಿನ ಸಮಸ್ಯೆಯಿಲ್ಲ. ಟ್ಯಾಂಕರ್ ನೀರು ಕೊಡುತ್ತಿದ್ದೇವೆ ಎಂಬ ಲೆಕ್ಕದಲ್ಲಿ ಗ್ರಾಪಂ ಇದೆ. ಆದರೆ, ಜನ-ಜಾನುವಾರುಗಳಿಗೆ ಕುಡಿಯಲು ಸಾಕಾಗುವಷ್ಟು ನೀರು ಕೊಡಿ ಎಂಬ ಕಂದಾಯ ಸಚಿವರ ನಿರ್ದೇಶನ ಪಾಲನೆಯಾಗಿಲ್ಲ ಎಂಬುದು ಗ್ರಾಪಂ ಸದಸ್ಯರ ಆರೋಪ. ಈಚೆಗೆ ಜಿಲ್ಲೆಗೆ ಬಂದಿದ್ದ ಕಂದಾಯ ಸಚಿವ ಆರ್. ವಿ. ದೇಶಪಾಂಡೆ, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಕೊಡಬೇಕು. ಅದರಲ್ಲೂ ಜಾನುವಾರುಗಳ ಸಮಸ್ಯೆ ಕೇಳುವವರು ಯಾರು. ಅವುಗಳ ಸಮಸ್ಯೆಯನ್ನು ಅಧಿಕಾರಿಗಳೇ ಗ್ರಹಿಸಿಕೊಂಡು, ಸ್ಪಂದಿಸಬೇಕು. ಒಂದು ಜಾನುವಾರಿಗೆ ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯುತ್ತದೆ ಎಂಬ ಅಂದಾಜಿನೊಂದಿಗೆ ಜನರಿಗೆ ಕೊಡುವ ಟ್ಯಾಂಕರ್ ನೀರಿನಲ್ಲಿ, ಅದನ್ನೂ ತಾಳೆ ಮಾಡಿ ನೀರು ಕೊಡಿ ಎಂದು ಸೂಚಿಸಿದ್ದರು. ಈ ಬೇಡಿಕೆಯನ್ನು ಸ್ವತಃ ಲಿಂಗಾಪುರ, ತೆಗ್ಗಿ ಗ್ರಾಮಗಳ ಜನರು, ಕಂದಾಯ ಸಚಿವರು ತೆಗ್ಗಿ ಗ್ರಾಮಕ್ಕೆ ಭೇಟಿ ನೀಡಿದಾಗ ಇಟ್ಟಿದ್ದರು. ಅದಕ್ಕೆ ಸಚಿವರೂ ನಿರ್ದೇಶನ ಕೊಟ್ಟಿದ್ದರು. ಆದರೆ, ಲಿಂಗಾಪುರದಲ್ಲಿ ಜನರಿಗೂ, ಜಾನುವಾರುಗಳಿಗೂ ಕೇವಲ 10 ಲೀಟರ್ ನೀರು ಕೊಡಲಾಗುತ್ತಿದೆ. ಜನರಾದರೆ ಹೇಗಾದರೂ ಮಾಡಬಹುದು, ಆದರೆ, ಜಾನುವಾರುಗಳ ಚಿಂತೆಯೇ ದೊಡ್ಡದಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಆಸರೆಯಾಗಿತ್ತು ಕೆರೆ: ಗ್ರಾಮದಲ್ಲಿ ಈ ಬಾರಿ ಬರದ ತೀವ್ರತೆ ಹೆಚ್ಚಾಗಿದೆ. ಪ್ರತಿವರ್ಷ ಲಿಂಗಾಪುರದ ಕೆರೆಯಲ್ಲಿ ನೀರು ಇರುತ್ತಿತ್ತು. ಹೀಗಾಗಿ ಜಾನುವಾರು, ಕುರಿ-ಮೇಕೆಗಳಿಗೆ ಕೆರೆಯ ನೀರೇ ಆಸರೆಯಾಗಿತ್ತು. ಈ ಬಾರಿ ಕೆರೆ ಸಂಪೂರ್ಣ ಒಣಗಿ ನಿಂತಿದ್ದು, ಜಾನುವಾರುಗಳಿಗೂ ಟ್ಯಾಂಕರ್ ನೀರು ಕೊಡುವ ಪರಿಸ್ಥಿತಿ ಬಂದೊದಗಿದೆ.
ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಒತ್ತಾಯ. ಅದಕ್ಕೂ ಮುಂಚೆ ಸದ್ಯ ಗ್ರಾಮಕ್ಕೆ ನಿತ್ಯ 6 ಟ್ಯಾಂಕರ್ ನೀರು ಮಾತ್ರ ನೀರು ಪೂರೈಸುತ್ತಿದ್ದು, ಇಲ್ಲಿನ ಜನಸಂಖ್ಯೆ, ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಟ್ಯಾಂಕರ್ ನೀರು ಹೆಚ್ಚಿಸಬೇಕು ಎಂಬುದು ಅವರ ಬೇಡಿಕೆ. ಇದಕ್ಕೆ ಬಾದಾಮಿ ತಾಲೂಕು ಆಡಳಿತ ತಕ್ಷಣ ಸ್ಪಂದಿಸಬೇಕಿದೆ.