ಬೆಂಗಳೂರು: ಬಿಎಂಟಿಸಿಯಲ್ಲಿ ಅಂತರ ಘಟಕ ಅಥವಾ ವಿಭಾಗಗಳ ವರ್ಗಾವಣೆ ಎಂದರೆ ಹಣ ಮಾಡಲು “ಸುಗ್ಗಿ ಕಾಲ’ ಎಂಬ ಆರೋಪ ಇದೆ. ಇದಕ್ಕೆ ಪೂರಕವಾಗಿ ಆಗಾಗ್ಗೆ ಈ ಸಂಬಂಧದ ಪ್ರತಿಭಟನೆಗಳು ಆಯಾ ಘಟಕಗಳಲ್ಲಿ ನಡೆಯುತ್ತಲೇ ಇರುತ್ತವೆ. ಇನ್ಮುಂದೆ ಇದಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ಯಾಕೆಂದರೆ, ವರ್ಗಾವಣೆ ವ್ಯವಸ್ಥೆ ಈಗ ಸಂಪೂರ್ಣ ಆನ್‌ಲೈನ್ ಆಗಲಿದೆ.
ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ ಮಾದರಿಯಲ್ಲೇ ಬಿಎಂಟಿಸಿ ನೌಕರರ ವರ್ಗಾವಣೆಗೆ ಮೊದಲೇ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರಬೇಕು. ಇದಾದ ನಂತರ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಕೌನ್ಸೆಲಿಂಗ್ ಕರೆಯಲಾಗುವುದು. ಈ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲಷ್ಟೇ “ವರ್ಗಾವಣೆ ಭಾಗ್ಯ’ ದೊರೆಯಲಿದೆ.
ಈ ಮೊದಲು ಎಲ್ಲವೂ ಮ್ಯಾನುವಲ್ ಆಗಿತ್ತು. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಸಿಗುತ್ತಿತ್ತು. ಡಿಪೋ ವ್ಯಾಪ್ತಿಯ ಮೇಲಧಿಕಾರಿ ನೀಡುವ ವರದಿ ಪ್ರಭಾವ ಬೀರುತ್ತಿತ್ತು. ಅಷ್ಟೇ ಅಲ್ಲ, ಇದಕ್ಕಾಗಿ ಪ್ರಭಾವಿಗಳಿಂದ ಶಿಫಾರಸು ಪತ್ರಗಳೂ ಬರುತ್ತಿದ್ದವು. ಕೊನೆಗೆ ಪಾರದರ್ಶಕದ ಕೊರತೆ ಆರೋಪ ಎದುರಿಸಬೇಕಾಗಿತ್ತು. ಇದು ಅಧಿಕಾರಿಗಳಿಗೆ ಪ್ರತಿ ಬಾರಿ ತಲೆನೋವಾಗಿತ್ತು.
ಈ ಹಿನ್ನೆಲೆಯಲ್ಲಿ “ಕೌನ್ಸೆಲಿಂಗ್ ಆ್ಯಪ್’ ಅನ್ನು ಅಭಿವೃದ್ಧಿಪಡಿಸಿರುವ ಬಿಎಂಟಿಸಿ, ಆಯಾ ಡಿಪೋಗಳ ವ್ಯಾಪ್ತಿಯಲ್ಲೇ ವರ್ಗಾವಣೆ ಬಯಸುವ ನೌಕರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ಎರಡು ಸಾವಿರ ಅರ್ಜಿಗಳನ್ನು ನಿರೀಕ್ಷಿಸಲಾಗದ್ದು, ತಿಂಗಳಾಂತ್ಯಕ್ಕೆ ಕೌನ್ಸೆಲಿಂಗ್ ಸೇರಿದಂತೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಐಟಿ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ರ್‍ಯಾಂಕಿಂಗ್ ಆಧರಿಸಿ ಕೌನ್ಸೆಲಿಂಗ್: ಇದಕ್ಕೆ ಪೂರಕವಾಗಿ ಕಳೆದ ಮೂರು ತಿಂಗಳಿಂದ ಆಯಾ ಘಟಕಗಳ ವ್ಯಾಪ್ತಿಯಲ್ಲಿ ಚಾಲಕ ಮತ್ತು ನಿರ್ವಾಹಕರ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಚಾಲನಾ ಅವಧಿ, ಅನುಸೂಚಿತವಲ್ಲದ ಹೆಚ್ಚುವರಿ ಸೇವೆ, ಸೇವೆಯ ಪ್ರಕಾರ (ಪಾಳಿ), ಪ್ರಯಾಣಿಕರ ರೇಟಿಂಗ್, ನಿಗದಿತ ಮಾರ್ಗ ಪೂರ್ಣಗೊಳಿಸಿರುವುದು,
ತರುವ ಆದಾಯ ಸೇರಿದಂತೆ ಹಲವು ಅಂಶಗಳ ಮೌಲ್ಯಮಾಪನ ಮಾಡಲಾಗುತ್ತದೆ. ಇದರಲ್ಲಿ ಪಡೆಯುವ ಅಂಕಗಳನ್ನು ಆಧರಿಸಿ ರ್‍ಯಾಂಕಿಂಗ್ ನೀಡಲಾಗುತ್ತಿದೆ. ಇದರ ಮುಂದುವರಿದ ಭಾಗವೇ ಕೌನ್ಸೆಲಿಂಗ್ ಪ್ರಕ್ರಿಯೆ. ಮೌಲ್ಯಮಾಪನದಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಕೌನ್ಸೆಲಿಂಗ್‌ನಲ್ಲಿ ಆದ್ಯತೆ ದೊರೆಯಲಿದೆ ಎಂದೂ ಅವರು ಹೇಳಿದರು.
ಇವರಿಗೆ ವಿನಾಯ್ತಿ?: ಪರಸ್ಪರ ವರ್ಗಾವಣೆ, ವಿಧವೆ, ಪತಿ-ಪತ್ನಿ, ಆರೋಗ್ಯ ಸಮಸ್ಯೆಯಂತಹ ಪ್ರಕರಣಗಳಿಗೆ ಇದರಲ್ಲಿ ವಿನಾಯ್ತಿ ನೀಡಲಾಗಿದೆ. ಅಂದುಕೊಂಡಂತೆ ನಡೆದರೆ, ಇದೊಂದು ಉತ್ತಮ ವ್ಯವಸ್ಥೆ ಆಗುತ್ತದೆ. ಸಂಸ್ಥೆಗಾಗಿ ಶ್ರಮಿಸಿದ ಅರ್ಹರಿಗೆ ಅವಕಾಶಗಳು ದೊರೆಯುತ್ತವೆ. ಜತೆಗೆ ಪ್ರೇರಣೆಯೂ ಸಿಕ್ಕಂತಾಗುತ್ತದೆ. ಸೇವಾ ಜೇಷ್ಠತೆಗಿಂತ ಸೇವಾ ನಿಷ್ಠೆ ಇಲ್ಲಿ ಹೆಚ್ಚು ಕೆಲಸ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದು ನಿರ್ವಾಹಕ ಮಂಜುನಾಥ್ ತಿಳಿಸಿದರು.