ಬೆಂಗಳೂರು : ಕೋವಿಡ್ ಕರ್ಫ್ಯೂ ನಡುವೆಯೂ ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಶುಕ್ರವಾರ ಆಭರಣಗಳ ಖರೀದಿ ನಡೆದಿದ್ದು, ರಾಜ್ಯಾದ್ಯಂತ ಸುಮಾರು 30 ಕೋ. ರೂ.ವಹಿವಾಟು ನಡೆಯಿತು ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.
ಮೊದಲೇ ನಿಗದಿಪಡಿಸಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರಿಗೆ ಸಾಂಕೇತಿಕವಾಗಿ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಕೋವಿಡ್ ಮೆಡಿಕಲ್ ಕಿಟ್‌ನೊಂದಿಗೆ ಮನೆಗೆ ತಲುಪಿಸಲಾಯಿತು.
ಹಲವು ಮಳಿಗೆಗಳಲ್ಲಿ ಆನ್‌ಲೈನ್ ಬುಕ್ಕಿಂಗ್ ನಡೆಯಿತು. ಆನ್‌ಲೈನ್‌ನಲ್ಲಿ ಬುಕ್ ಮಾಡಿ ರಶೀದಿ ಪಡೆದವರಿಗೆ ಲಾಕ್‌ಡೌನ್ ಮುಗಿದ ಬಳಿಕ ಅವರು ಖರೀದಿಸಿದ ಆಭರಣಗಳನ್ನು ತಲುಪಿಸುವ ಕೆಲಸ ನಡೆಯಲಿದೆ.
ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಆಭರಣಗಳ ವ್ಯಾಪಾರ ನಡೆಯಿತು. ಈಗಾಗಲೇ ಕೆಲವು ಗ್ರಾಹಕರು ವೆಬ್‌ಸೈಟ್‌ನಲ್ಲಿ ಹಾಕಲಾದ ಭಿನ್ನ ಶೈಲಿಯ ಆಭರಣಗಳನ್ನು ನೋಡಿ ಖರೀದಿಸಿದ್ದಾರೆ ಎಂದು ಕರ್ನಾಟಕ ಆಭರಣ ವರ್ತಕರ ಸಂಘದ ಅಧ್ಯಕ್ಷ ಟಿ.ಎ.ಶರವಣ ಹೇಳಿದ್ದಾರೆ.
ಇದನ್ನೂ ಓದಿ :‘ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ 9.5 ಕೋಟಿ ರೈತರಿಗೆ ಮೊದಲ ಕಂತಿನ ಹಣ ಬಿಡುಗಡೆ
ಕರ್ನಾಟಕದಾದ್ಯಂತ ಸುಮಾರು 50 ಸಾವಿರ ಆಭರಣ ಮಳಿಗೆಗಳಿವೆ. ಬೆಂಗಳೂರಿನಲ್ಲಿಯೇ 25 ಸಾವಿರಕ್ಕೂ ಅಧಿಕ ಚಿನ್ನಾಭರಣ ಮಳಿಗೆಗಳಿವೆ. ಎಲ್ಲ ಮಳಿಗೆಗಳಲ್ಲಿ ಆನ್‌ಲೈನ್ ಪ್ರಕ್ರಿಯೆ ನಡೆದಿಲ್ಲ. ಕೆಲವೇ ಕೆಲವು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಆಭರಣ ವ್ಯಾಪಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ ಹೇಳಿದ್ದಾರೆ.