Advertisement

ಜ.1ರಿಂದ ಆನ್‌ಲೈನ್‌ ಸೇವೆ ಕಡ್ಡಾಯ

12:45 PM Sep 20, 2018 | Team Udayavani |

ಮಹಾನಗರ: ಜನವರಿ 1 ರಿಂದ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಪೌರ ಸೇವೆಗಳು ಆನ್‌ಲೈನ್‌ನಲ್ಲಿ ಸಿಗಲಿವೆ. ಆಸ್ತಿ ತೆರಿಗೆ, ಖಾತಾ ಪಡೆಯಲು ಮೊಬೈಲ್‌ ನಲ್ಲಿಯೇ ವ್ಯವಹರಿಸಬಹುದು! ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ವಹಿ- ನಕಲು (ಖಾತಾ) ಕಟ್ಟಡ ನಕ್ಷೆ ಅನುಮೋದನೆ, ನೀರು ಹಾಗೂ ವಿದ್ಯುತ್‌ ಸಂಪರ್ಕ, ರಸ್ತೆ ತುಂಡರಿಸಲು ಅನುಮತಿ ಸೇರಿದಂತೆ ಪೌರ ಸೇವೆಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸುವುದನ್ನು ಸರಕಾರ ಕಡ್ಡಾಯಗೊಳಿಸಿ ಆದೇಶಿಸಿದೆ. ಇದರಂತೆ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಮೂಲ್ಕಿ, ಮೂಡಬಿದಿರೆ ಪುರಸಭೆ, ಬಂಟ್ವಾಳ ಪುರಸಭೆ, ಬೆಳ್ತಂಗಡಿ, ಸುಳ್ಯ ಪಟ್ಟಣ ಪಂಚಾಯತ್‌ನಲ್ಲಿ ಈ ಸೇವೆ ದೊರೆಯಲಿದೆ.

Advertisement

ಇದರ ಜತೆಗೆ ಕರ್ನಾಟಕ ಮುನಿಸಿಪಲ್‌ ಡೇಟಾ ಸೊಸೈಟಿ ಮುಖಾಂತರ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಗಿ ಹಾಗೂ ಲೇಔಟ್‌ ಅನುಮೋದನೆ ವ್ಯವಸ್ಥೆ ತಂತ್ರಾಂಶವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಅಗತ್ಯವಿರುವಲ್ಲಿ ಗ್ರಾಹಕೀಕರಣ (ಕಸ್ಟಮೈಸೇಶನ್‌) ಮಾಡಿ ಬಳಸುವಂತೆಯೂ ಸರಕಾರ ಅನುಮತಿ ನೀಡಿದೆ. ನಾಗರಿಕರಿಗೆ ಪೌರ ನಾಗರಿಕ ಸೇವೆಗಳನ್ನು ಸುಲಭವಾಗಿ ಒದಗಿಸಲು ಸ್ವಯಂ ಚಾಲಿತ ಆನ್‌ಲೈನ್‌ ತಂತ್ರಾಂಶ ಅಭಿವೃದ್ಧಿ ಪಡಿಸಿ ಇದರ ಬಳಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ 2018-19ರ ರಾಜ್ಯ ಬಜೆಟ್‌ ನಲ್ಲಿ ಘೋಷಣೆ ಮಾಡಲಾಗಿತ್ತು.

ಆನ್‌ಲೈನ್‌ ಅರ್ಜಿ
ಕೇಬಲ್‌, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆಯುವ ಮುಂಚಿತವಾಗಿ ಸಂಬಂಧಪಟ್ಟ ಸಂಸ್ಥೆಗಳು ಪಾಲಿಕೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ರಸ್ತೆ ಅಗೆಯುವ ಉದ್ದೇಶ, ಸ್ಥಳ ಹಾಗೂ ಅಳತೆ ಬಗ್ಗೆ ಮಾಹಿತಿ ನೀಡಿ ಗೂಗಲ್‌ ಮ್ಯಾಪಿಂಗ್‌ ಸ್ಥಳ ಪಿನ್‌ ಮಾಡಬೇಕು. ರಸ್ತೆ ಅಗೆತಕ್ಕೆ ಬಂದ ಅರ್ಜಿಗಳನ್ನು ಆಯಾಯ ವಾರ್ಡ್‌ಗಳ ಸಹಾಯಕ ಎಂಜಿನಿಯರ್‌ಗೆ ರವಾನಿಸಲಾಗುತ್ತದೆ. ಅವರು ಸ್ಥಳ ಪರಿಶೀಲನೆ ಮಾಡಿ ಅನುಮತಿ ಅಥವಾ ನಿರಾಕರಣೆಯ ಬಗ್ಗೆ ನಿರ್ಧರಿಸಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಾರೆ. ಅದರ ಮೇಲೆ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಸ್ಥಳೀಯ ಸಹಾಯಕ ಎಂಜಿನಿಯರ್‌, ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರೆ ಸ್ವಯಂಚಾಲಿತವಾಗಿ ಡಿಮಾಂಡ್‌ ನೋಟಿಸ್‌ ಸೃಷ್ಟಿಯಾಗಲಿದೆ. ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಾರೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ದ ಕ್ರಮ ಜರಗಿಸಲಾಗುತ್ತದೆ.

ತುಮಕೂರು ಪಾಲಿಕೆಯ ಮಾದರಿ
ಪಾಲಿಕೆಯಲ್ಲಿ ಸದ್ಯ ನೀರಿನ ಬಿಲ್‌ ಅನ್ನು ಆನ್‌ಲೈನ್‌ ಮೂಲಕ ಪಾವತಿಸಲು ಸಿದ್ಧತೆ ನಡೆಸಲಾಗಿದೆ. ಇದರ ಜತೆಗೆ ಎಲ್ಲ ಪೌರ ಸೇವೆಗಳನ್ನು ಆನ್‌ ಲೈನ್‌ ಮಾಡುವ ಕುರಿತಂತೆ ಸರಕಾರ ಸೂಚನೆ ನೀಡಿದೆ. ಇದರಂತೆ ತುಮಕೂರು ನಗರಪಾಲಿಕೆಯಲ್ಲಿ ಈಗಾಗಲೇ ಕೈಗೊಂಡಿರುವ ವ್ಯವಸ್ಥೆಗಳನ್ನು ಮಂಗಳೂರಿನಲ್ಲಿಯೂ ಅಳವಡಿಸುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ. ಈ ಮೂಲಕ ಎಲ್ಲ ಪೌರ ಸೇವೆಗಳು ಜನರಿಗೆ ಕುಳಿತಲ್ಲಿಯೇ ಸಿಗಲಿವೆ. ಪೂರಕವಾಗಿ ನಗರದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿಡುವ ಕಾರ್ಯನಡೆಸಲಾಗುತ್ತಿದೆ ಎನ್ನುತ್ತಾರೆ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್‌ ಡಿ’ಸೋಜಾ.

ಆನ್‌ಲೈನ್‌ ಪಾವತಿ; ಆ್ಯಪ್‌ ಬಿಡುಗಡೆ
ಪಾಲಿಕೆಯ ಎಲ್ಲ ಪೌರ ಸೇವೆಗಳನ್ನು ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಈ ಸಂಬಂಧ ಸಾಫ್ಟ್ ವೇರ್‌ ಮೇಲ್ದರ್ಜೆಗೇರಿಸುವ ಕೆಲಸ ಪ್ರಗತಿಯಲ್ಲಿದೆ. ಸಿದ್ಧತೆ ಪೂರ್ಣವಾದ ಬಳಿಕ ಸಾರ್ವಜನಿಕರಿಗೆ ನೆರವಾಗಲು ಹೊಸ ಆ್ಯಪ್‌ ಬಿಡುಗಡೆ ಮಾಡಿ ಅದರ ಮೂಲಕವೇ ಮೊಬೈಲ್‌ ಸಹಾಯದಿಂದ ತೆರಿಗೆ ಪಾವತಿ, ಪೌರ ಸೇವೆಗಳು ಲಭ್ಯವಾಗಲಿದೆ.
– ಮಹಮ್ಮದ್‌ ನಝೀರ್‌,
ಆಯುಕ್ತರು, ಮನಪಾ

Advertisement
Advertisement

Udayavani is now on Telegram. Click here to join our channel and stay updated with the latest news.

Next