Advertisement

ಪದವಿ ಕಾಲೇಜಿಗೆ ಅರ್ಜಿಸಲ್ಲಿಸುವ ಮೊದಲು ಆನ್‌ಲೈನ್‌ ನೋಂದಣಿ! ಇಲ್ಲಿದೆ ನೋಂದಣಿ ಪ್ರಕ್ರಿಯೆ

12:34 AM Jun 24, 2022 | Team Udayavani |

ಉಡುಪಿ : ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜಿನ ಪ್ರವೇಶಕ್ಕೆ ಏಕರೂಪ ಆನ್‌ಲೈನ್‌ ವ್ಯವಸ್ಥೆಯನ್ನು ರಾಜ್ಯ ಸರಕಾರ ಈ ವರ್ಷದಿಂದ ಜಾರಿಗೆ ತಂದಿರುವುದರಿಂದ ಪ್ರವೇಶ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ.

Advertisement

ಏಕರೂಪ ವಿಶ್ವವಿದ್ಯಾನಿಲಯದ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ (ಯುಯುಸಿಎಂಸ್‌) ಮೂಲಕ ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ವೆಬ್‌ಸೈಟ್‌ ಕೂಡ ಸಿದ್ಧಪಡಿಸಲಾಗಿದೆ. https://uucms.karnataka.gov.in/ ಮೂಲಕ ವಿದ್ಯಾರ್ಥಿಗಳು ಮೊದಲು ನೋಂದಣಿ ಮಾಡಿಕೊಳ್ಳಬೇಕು. ಆಯಾ ವಿಶ್ವವಿದ್ಯಾನಿಲಯಗಳು ಪ್ರವೇಶಾತಿ ಪ್ರಕ್ರಿಯೆಯ ಅಧಿಸೂಚನೆ ಹೊರಡಿಸುತ್ತಿದ್ದಂತೆ ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಕಾಲೇಜಿನ ಕೋರ್ಸ್‌ ವಿವರ ಸಹಿತವಾಗಿ ಎಲ್ಲ ಮಾಹಿತಿಯೂ ವೆಬ್‌ಸೈಟ್‌ನಲ್ಲೇ ಲಭ್ಯವಿರುತ್ತವೆ.

ಸೀಟು ಹಂಚಿಕೆ ಕಾಲೇಜಿಗೆ ಬಿಟ್ಟದ್ದು
ಮೆರಿಟ್‌ ಆಧಾರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುವುದರಿಂದ ಬಂದಿರುವ ಅರ್ಜಿಗಳ ಆಧಾರದಲ್ಲಿ ಕಾಲೇಜುಗಳು ದಾಖಲಾತಿ ಪ್ರಕ್ರಿಯೆ ನಡೆಸಲಿವೆ. ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕದ ಅನ್ವಯವಾಗಿ ಪ್ರವೇಶ ನೀಡಲಾಗುತ್ತದೆ. ಪ್ರವೇಶದ ಸಂದರ್ಭದಲ್ಲಿ ಆನ್‌ಲೈನ್‌ನಲ್ಲೂ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ.

ಕಾಲೇಜುಗಳಲ್ಲಿ ವ್ಯವಸ್ಥೆ
ಸರಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬಹುದು ಅಥವಾ ವಿದ್ಯಾರ್ಥಿಗಳು ಮೊಬೈಲ್‌, ಕಂಪ್ಯೂಟರ್‌ಗಳಲ್ಲೂ ನಿರ್ದಿಷ್ಟ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಸಂಬಂಧಪಟ್ಟ ಕಾಲೇಜಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಅಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವ ಬಗ್ಗೆ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದು. ಮ್ಯಾನುವಲ್‌ ಅರ್ಜಿ ಪಡೆದರೆ ಕಾಲೇಜುಗಳೇ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಆರಂಭ
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಖಾಸಗಿ ಪದವಿ ಕಾಲೇಜುಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಕೆಲವೊಂದು ಕಾಲೇಜುಗಳಲ್ಲಿ ಸೀಟುಗಳು ಕೂಡ ಭರ್ತಿಯಾಗಿವೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿವಿಧ ಕಾಂಬಿನೇಷನ್‌ಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕಾಲೇಜುಗಳ ಮೂಲಗಳು ತಿಳಿಸಿವೆ.

Advertisement

ವಿ.ವಿ. ಅನುಮತಿ
ಈಗಾಗಲೇ ದ್ವಿತೀಯ ಪಿಯುಸಿ ಫ‌ಲಿತಾಂಶ ಬಂದಿರುವುದರಿಂದ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಪದವಿ ಕಾಲೇಜುಗಳ ಪ್ರವೇಶಕ್ಕೆ ಆಡಳಿತಾತ್ಮಕವಾದ ಅನುಮತಿ ನೀಡಿದ್ದೇವೆ. ಆನ್‌ಲೈನ್‌ನಲ್ಲೇ ಪ್ರಕ್ರಿಯೆ ನಡೆಯಬೇಕಿರುವುದರಿಂದ ಕಾಲೇಜುಗಳು ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಒಂದೆರಡು ದಿನದಲ್ಲಿ ಈ ಪ್ರಕ್ರಿಯೆ ಆರಂಭವಾಲಿದೆ ಎಂದು ಕುಲಪತಿ ಡಾ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದರು.

ನೋಂದಣಿ ಹೇಗೆ?
ವಿದ್ಯಾರ್ಥಿಗಳು https://uucms.karnataka.gov.in/ ನ ಮುಖಪುಟದಲ್ಲಿ ನ್ಯೂ ಯೂಸರ್‌? ರಿಜಿಸ್ಟರ್‌ ಹಿಯರ್‌ ಲಿಂಕ್‌ ಒತ್ತಿದರೆ ಹೊಸ ಪೇಜ್‌ ತೆರೆದುಕೊಳ್ಳುತ್ತದೆ. ಅಲ್ಲಿ ತಮ್ಮ ಪದವಿಪೂರ್ವ ಕಾಲೇಜಿನ ನೋಂದಣಿ ಸಂಖ್ಯೆ ಮತ್ತು ಪೂರೈಸಿದ ವರ್ಷ ನಮೂದಿಸಿ, ವೈಯಕ್ತಿಕ ದಾಖಲೆ ಭರ್ತಿ ಮಾಡಿ ಹೊಸ ಪಾಸ್‌ವರ್ಡ್‌ ಕ್ರಿಯೇಟ್‌ ಮಾಡಿಕೊಳ್ಳಬಹುದು. ಅನಂತರ ಭಾವಚಿತ್ರ/ ಸಹಿ, ವರ್ಗ/ ವಿಶೇಷ ವರ್ಗ, ಕೋಟಾ, ಶೈಕ್ಷಣಿಕ ಮಾಹಿತಿ ಅಪ್‌ಲೋಡ್‌ ಮಾಡಬೇಕು. ಒಮ್ಮೆ ಅಕೌಂಟ್‌ ಕ್ರಿಯೆಟ್‌ ಆದ ಬಳಕ ಯಾವಗ ಬೇಕಾದರೂ ತಮ್ಮದೇ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಬಹುದು. ಮುಂದೆ ಪ್ರವೇಶ ಅರ್ಜಿಯೂ ಇದರಲ್ಲಿಯೇ ಸಲ್ಲಿಸಬಹುದಾಗಿದೆ.(ಈಗ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ.)

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಕರೂಪ ವ್ಯವಸ್ಥೆ ಕಲ್ಪಿಸಿದ್ದೇವೆ. ಈಗ ನೋಂದಣಿ ಆರಂಭವಾಗಿದೆ. ಕಾಲೇಜುಗಳು ಮಾಹಿತಿ ಅಪ್‌ಲೋಡ್‌ ಮಾಡುತ್ತಿವೆ. ಆಯಾ ವಿ.ವಿ.ಗಳು ಪ್ರವೇಶಾತಿ ಅಧಿಸೂಚನೆ ಹೊರಡಿಸಿದ ಅನಂತರ ಪ್ರವೇಶ ಪ್ರಕ್ರಿಯೆ ನಡೆಯಲಿದೆ.
– ಪಿ. ಪ್ರದೀಪ್‌, ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next