ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಹೊರರೋಗಿಗಳು ಇನ್ನು ಮುಂದೆ ತಮ್ಮ ನೋಂದಣಿ ಕಾರ್ಡ್ ಪಡೆಯಲು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲಬೇಕಿಲ್ಲ. ಇದಕ್ಕಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಆಧಾರಿತ ಫಾಸ್ಟ್‌ಟ್ರ್ಯಾಕ್ ಕ್ಯೂ ಸಿಸ್ಟಮ್ ಸ್ಕ್ಯಾನ್ ಮಾಡಿ, ನೋಂದಣಿ ಮಾಡಿಕೊಳ್ಳಬಹುದು. ರಾಜ್ಯದ 15 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇದ್ದು, ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯೂ ಸೇರಿದೆ.
ಹೊರರೋಗಿ ವಿಭಾಗ(ಓಪಿಡಿ)ಕ್ಕೆ ಬರುವ ರೋಗಿಗಳು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಆಸ್ಪತ್ರೆಯ ಗೋಡೆ ಮೇಲೆ ಅಂಟಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು, ವಿವರವುಳ್ಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಕ್ಯೂಆರ್ ಕೋಡ್ ಆಧಾರಿತ ನೋಂದಣಿಯನ್ನು ಸಕ್ರಿಯಗೊಳಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಕ್ಯೂಆರ್ ಕೋಡ್ ವ್ಯವಸ್ಥೆ ಪರಿಚಯಿಸಲು ಪ್ರಾಯೋಗಿಕ ಯೋಜನೆ ಕೈಗೆತ್ತಿಕೊಂಡಿದೆ. ಈ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಪಡೆದ ಹಾಸನ ಜಿಲ್ಲೆಯ ಮೊದಲ ಸರ್ಕಾರಿ ಆಸ್ಪತ್ರೆ ಕ್ರಾಫರ್ಡ್ ಆಗಿರುವುದು ವಿಶೇಷ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಜನ ದಟ್ಟಣೆ ಕಡಿಮೆ ಮಾಡಲು, ವೈದ್ಯರ ಭೇಟಿಗೆ ಆನ್‌ಲೈನ್ ಅಥವಾ ಮೊಬೈಲ್ ಸಂದೇಶದ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ಸರ್ಕಾರ ಜಾರಿಗೆ ತಂದಿದೆ. ಆಸ್ಪತ್ರೆಯಲ್ಲಿ ಜನರ ಉದ್ದದ ಸಾಲು ಕಡಿಮೆ ಮಾಡಲು ಕ್ಯೂರ್‌ಕೋಡ್ ಮೂಲಕ ನೋಂದಣಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಸಿಗುವ ಸಮಯ, ಯಾವ ವೈದ್ಯರು ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್‌ಗೆ ಸಂದೇಶ ಕಳುಹಿಸುವ ವ್ಯವಸ್ಥೆ ತರಲಾಗಿದೆ. ಆಸ್ಪತ್ರೆಯಲ್ಲಿ ಹೊರರೋಗಿಗಳಿಗಾಗಿ ಎರಡು ಕೌಂಟರ್ ಮಾಡಲಾಗುತ್ತಿದೆ. ಒಂದು ಕೌಂಟರಿನಲ್ಲಿ ಈ ತಂತ್ರಜ್ಞಾನ ಬಳಕೆ ಮಾಡಲು ಬಾರದ ರೋಗಿಗಳಿಗೆ ನೇರವಾಗಿ ಚೀಟಿ ನೀಡುವ ಪದ್ಧತಿ ಇದೆ. ಮತ್ತೂಂದು ಕೌಂಟರ್‌ನಲ್ಲಿ ಕ್ಯೂರ್ ಕೋಡ್ ಮೂಲಕ ನೋಂದಣಿ ಮಾಡಿಸುವ ರೋಗಿಗಳಿಗೆ ವೈದ್ಯರ ಭೇಟಿ ಮಾಡಲು ಚೀಟಿ ನೀಡಲಾಗುತ್ತದೆ. ಒಟ್ಟಾರೆಯಾಗಿ ಹೊಸ ವ್ಯವಸ್ಥೆಯಿಂದ ಎಷ್ಟು ಅನುಕೂಲ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕ್ಯೂಆರ್ ಕೋಡ್ ಬಳಕೆ ಹೇಗೆ?: ನೋಂದಣಿ ಎರಡು ಹಂತದ ಪ್ರಕ್ರಿಯೆಯಾಗಿದೆ. ಮೊದಲಿಗೆ ಒಬ್ಬ ರೋಗಿಯು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಸಂಖ್ಯೆಯನ್ನು ಹೊಂದಿರಬೇಕು. ಇದು 14 ಅಂಕಿಯ ವಿಶಿಷ್ಟ ಕೋಡ್ ಆಗಿರುತ್ತದೆ. ಈ ಸಂಖ್ಯೆ ಆಧಾರದಿಂದ ರಿಜಿಸ್ಟರ್ ಆಗುತ್ತದೆ. ಆಸ್ಪತ್ರೆಯ ನೋಂದಣಿ ಕೌಂಟರ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಪ್ರದರ್ಶಿಸಲಾಗಿದೆ. ರೋಗಿಯು ಆಸ್ಪತ್ರೆಯ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ರೋಗಿಯ ಸಂಪೂರ್ಣ ವಿವರವನ್ನು ಆಸ್ಪತ್ರೆಯೊಂದಿಗೆ ಹಂಚಿಕೊಳ್ಳಬಹುದು. ಬಳಿಕ ಫೋನ್‌ಗೆ ಟೋಕನ್ ಸಂಖ್ಯೆ ಬರುತ್ತದೆ. ಒಪಿಡಿ ಸ್ಲಿಪ್ ಅನ್ನು ತಕ್ಷಣವೇ ಪಡೆಯಲು ಫಾಸ್ಟ್ ಟ್ರ್ಯಾಕ್ ಕೌಂಟರ್‌ನಲ್ಲಿ ಟೋಕನ್ ಸಂಖ್ಯೆಯನ್ನು ತೋರಿಸಬೇಕು. ಡಿಜಿಟಲ್ ಲಿಂಕ್: ಒಂದು ವೇಳೆ ರೋಗಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಸಂಖ್ಯೆ ಇಲ್ಲದಿದ್ದರೆ, ಈ ಲಿಂಕ್
https://healthid.ndhm.gov.in/register ಎಬಿಎಚ್‌ಎ ಸಂಖ್ಯೆ ಪಡೆಯಬಹುದು. ಈಗಾಗಲೇ ರಾಜ್ಯದ ನಾಲ್ಕು ಆಸ್ಪತ್ರೆಗಳು ರೋಗಿಗಳ ಎಬಿಎಚ್‌ಎ ಐಡಿಗಳನ್ನು ಆರೋಗ್ಯ ದಾಖಲೆಗಳೊಂದಿಗೆ ಡಿಜಿಟಲ್ ಲಿಂಕ್ ಮಾಡಿವೆ.
ರೋಗಿಗಳ ನೋಂದಣಿಗಾಗಿ ಆ್ಯಪ್ ರೂಪಿಸಲಾಗಿದೆ. ರೋಗಿಗಳು ವಿನಾಕಾರಣ ಆಸ್ಪತ್ರೆಗೆ ಬಂದು ವೈದ್ಯರನ್ನು ಕಾಯುವುದು ತಪ್ಪುತ್ತದೆ. ಕ್ರಾಫರ್ಡ್ ಆಸ್ಪತ್ರೆಯನ್ನು ತಂತ್ರಜ್ಞಾನ ಬಳಕೆಗೆ ಸೇರಿಸಿರುವುದು ಸಂತೋಷದ ವಿಷಯ.
-ಡಾ.ಅರುಣ್‌ಕುಮಾರ್ ಆಡಳಿತ ವೈದ್ಯಾಧಿಕಾರಿಗಳು.
– ಸುಧೀರ್ ಎಸ್.ಎಲ್