Advertisement

Online: ಆನ್‌ಲೈನ್‌ ಪಾರ್ಟ್‌ ಟೈಂ ಉದ್ಯೋಗ ವಂಚನೆ: ಎಚ್ಚರ ವಹಿಸಲು ಪೊಲೀಸರ ಸೂಚನೆ

08:30 PM Aug 24, 2023 | Team Udayavani |

ಮಂಗಳೂರು: ಸೈಬರ್‌ ವಂಚಕರು ಆನ್‌ಲೈನ್‌ ಪಾರ್ಟ್‌ ಟೈಮ್‌ ಉದ್ಯೋಗದ ಭರವಸೆ ನೀಡಿ ಹಣ ಹೂಡಿಕೆ ಮಾಡಿಸಿ ವಂಚಿಸುತ್ತಿರುವ ಬಗ್ಗೆ ಎಚ್ಚರದಿಂದ ಇರುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

Advertisement

ಯಾವುದೇ ಹೂಡಿಕೆ ಮಾಡದೆ ಮನೆಯಿಂದಲೇ ಪಾರ್ಟ್‌ಟೈಮ್‌ ಉದ್ಯೋಗದ ಮೂಲಕ ಹಣ ಗಳಿಸಬಹುದು. ಆಸಕ್ತಿ ಇದ್ದಲ್ಲಿ ಸಂಪರ್ಕಿಸಿ ಎಂದು ಸೈಬರ್‌ ವಂಚಕರು ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ವಾಟ್ಸ್‌ಆ್ಯಪ್‌/ಟೆಲಿಗ್ರಾಂ ಮೂಲಕ ಬಲ್ಕ್ ಎಸ್‌ಎಂಎಸ್‌ ರವಾನೆ ಮಾಡುತ್ತಾರೆ. ಇದನ್ನು ನಂಬಿ ಸಂಪರ್ಕಿಸುವವರಿಗೆ ಆರೋಪಿಗಳು ತಾವು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿಕೊಡುವ ಯೂಟ್ಯೂಬ್‌ ಚಾನೆಲ್‌ಗ‌ಳನ್ನು ಸಬ್‌ಸೆð„ಬ್‌ ಮಾಡುವಂತೆ ಹಾಗೂ ವೀಡಿಯೋಗಳನ್ನು ಲೈಕ್‌ ಮಾಡಿ ಸ್ಕ್ರೀನ್‌ ಶಾಟ್‌ಗಳನ್ನು ಕಳುಹಿಸುವಂತೆ ತಿಳಿಸುತ್ತಾರೆ. ಅದರಂತೆ ಪ್ರತಿ ದಿನ 5ರಿಂದ 10 ಸ್ಕ್ರೀನ್‌ ಶಾಟ್‌ ಕಳುಹಿಸಿದಾಗ ಮೊದಲ ಹಂತದಲ್ಲಿ ಸಣ್ಣ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಪಾವತಿಸುತ್ತಾರೆ.

ಬಳಿಕ ವರಸೆ ಬದಲಾಯಿಸುವ ವಂಚಕರು, ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸುವ ಲಿಂಕ್‌ನಲ್ಲಿ ತಮ್ಮ ವೈಯುಕ್ತಿಕ ಮಾಹಿತಿಯನ್ನು ದಾಖಲಿಸಿ ಪ್ರೊಫೈಲ್‌ ತೆರೆದು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸುತ್ತಾರೆ. ಆ ಮೂಲಕ ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಳ್ಳುತ್ತಾರೆ.

ದ್ವಿಗುಣಗೊಂಡಂತೆ ತೋರ್ಪಡಿಕೆ
ಹೂಡಿಕೆ ಮಾಡಿದ ವ್ಯಕ್ತಿಗಳು, ವಂಚಕರು ತಿಳಿಸಿದಂತೆ ತೆರೆದಿರುವ ಆನ್‌ಲೈನ್‌ ಡ್ಯಾಷ್‌ ಬಾರ್ಡ್‌ನಲ್ಲಿ ಅವರು ಹೂಡಿಕೆ ಮಾಡಿದ ಹಣದ ಇಂಡೆಕ್ಸ್‌ನಲ್ಲಿ ಹಣ ದ್ವಿಗುಣಗೊಂಡಿರುವುದನ್ನು ಕಂಡು ಖುಷಿ ಪಡುತ್ತಾರೆ. ಆದರೆ ಹಣ ದ್ವಿಗುಣಗೊಂಡಿರುವುದು ತಪ್ಪು ಮಾಹಿತಿಯಾಗಿರುತ್ತದೆ. ಹಣವನ್ನು ವಿಥ್‌ಡ್ರಾ ಮಾಡಲು ಪ್ರಯತ್ನಿಸಿದರೆ ಮುಂದಿನ ಹಂತವನ್ನು ಪೂರ್ಣಗೊಳಿಸದೆ (ಟಾಸ್ಕ್) ಅದು ಸಾಧ್ಯವಿಲ್ಲವೆಂದು ತಿಳಿಸಿ ಹಣವನ್ನು ಮರುಪಾವತಿಸದೆ ವಂಚನೆ ಮಾಡುತ್ತಾರೆ.

ಮೋಸದ ಜಾಲಕ್ಕೆ ಬೀಳದಿರಿ
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಅಪರಿಚಿತ ನಂಬರ್‌ಗಳಿಂದ ವಾಟ್ಸ್‌ಆ್ಯಪ್‌ ಮೂಲಕ ಮತ್ತು ಅಪರಿಚಿತ ವ್ಯಕ್ತಿಗಳಿಂದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೂಲಕ ಅರೆಕಾಲಿಕ ಉದ್ಯೋಗ ಬಗ್ಗೆ ಸ್ವೀಕೃತವಾಗುವ ಸಂದೇಶಗಳಿಗೆ ಸ್ಪಂದಿಸದೆ ಇರುವುದು ಮತ್ತು ಆ ನಂಬರ್‌ಗಳನ್ನು ಕೂಡಲೇ ರಿಪೋರ್ಟ್‌ ಮತ್ತು ಬ್ಲಾಕ್‌ ಮಾಡಬೇಕು. ಪಾರ್ಟ್‌ಟೈಮ್‌ ಉದ್ಯೋಗದಿಂದ ನಿರೀಕ್ಷೆಗೂ ಮೀರಿದ ಹೆಚ್ಚು ಆದಾಯ ಗಳಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ/ಈ ಮೇಲ್‌ ಮೂಲಕ ಎಸ್‌ಎಂಎಸ್‌ ಮೂಲಕ ಬರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಬೇಡಿ. ವಂಚಕರು ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದರಲ್ಲಿ ಜಾಣರಾಗಿದ್ದು, ಇಂಥವರ ಮೋಸದ ಜಾಲಕ್ಕೆ ಬೀಳಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next