Advertisement

ಸಮಗ್ರ ಮಾಹಿತಿ ಕಡ್ಡಾಯ; ಗ್ರಾ.ಪಂ.ಗಳಿಗೆ ಗಡುವು

01:47 AM Feb 05, 2020 | mahesh |

ಮಂಗಳೂರು: ಗ್ರಾಮ ಪಂಚಾಯತ್‌ ಮೂಲಕ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರ ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲೇ ಕಳುಹಿಸಿ ಕೊಡುವಂತೆ ಸರಕಾರ ಸೂಚಿಸಿದೆ. ತಪ್ಪು ಮಾಹಿತಿ ನೀಡಿ ನಿವೇಶನ ಪಡೆಯುವ ವಂಚನೆಗೆ ತಡೆ ಈ ಕ್ರಮದ ಉದ್ದೇಶ. ವಸತಿ ಯೋಜನೆಯಲ್ಲಿ ಅಕ್ರಮ ತಡೆಗೆ ಮೊಬೈಲ್‌ ಆ್ಯಪ್‌ ಬಳಕೆ ಜಾರಿಗೆ ತರಲಾಗಿತ್ತು. ಇದು ಅದರ ಮುಂದುವರಿದ ಕ್ರಮ.

Advertisement

ಇದುವರೆಗೆ ಪಡಿತರ ಚೀಟಿಯನ್ನು ಆಧಾರವಾಗಿಟ್ಟುಕೊಂಡು ಸರಕಾರದ ಮನೆ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈಗ ಆಧಾರ್‌ ಸಂಖ್ಯೆ, ಗ್ರಾಮಸಭೆಗಳಲ್ಲಿ ಫ‌ಲಾನುಭವಿಗಳ ಆಯ್ಕೆಗೆ ನಡೆದಿರುವ ಠರಾವಿನ ವಿವರ, ಅರ್ಜಿದಾರರ ಕುಟುಂಬ ವಿವರ ಸೇರಿದಂತೆ ಸಮಗ್ರ ಮಾಹಿತಿ ಅಪ್‌ಲೋಡ್‌ ಮಾಡಬೇಕಾಗಿದ್ದು, ಇದಕ್ಕಾಗಿ ಗ್ರಾ.ಪಂ.ಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ. ಪಟ್ಟಿ ಅಂತಿಮಗೊಳ್ಳುವುದು ಪೂರ್ಣ ಮಾಹಿತಿ ದೊರೆತ ಅನಂತರವಷ್ಟೆ.

ಪ್ರತಿ ಹಂತದಲ್ಲಿಯೂ ಆನ್‌ಲೈನ್‌
ಗ್ರಾ.ಪಂ., ತಾ.ಪಂ. ಇಒ, ವಸತಿ/ನಿವೇಶನ ಯೋಜನೆಯ ಜಿಲ್ಲಾ ನಿರ್ದೇಶಕರು, ಜಿಲ್ಲಾಧಿಕಾರಿ, ರಾಜೀವ್‌ಗಾಂಧಿ ವಸತಿ ನಿಗಮ ಸೇರಿದಂತೆ ಫ‌ಲಾನುಭವಿಗಳ ಆಯ್ಕೆಯಿಂದ ಹಕ್ಕುಪತ್ರ ನೀಡುವವರೆಗಿನ ಎಲ್ಲ ಪ್ರಕ್ರಿಯೆಗಳು, ಅದಕ್ಕೆ ಸಂಬಂಧಿಸಿದ ಮಾಹಿತಿಗಳ ಸಲ್ಲಿಕೆ ಆನ್‌ಲೈನ್‌ ಮೂಲಕವೇ ನಡೆಯುತ್ತಿದೆ. ಸದ್ಯ ಹೊಸ ಸೇರ್ಪಡೆಗೆ ಅವಕಾಶವಿಲ್ಲ.

ಸ್ವಯಂಚಾಲಿತ ರದ್ದು
ಕೆಲವು ಗ್ರಾ.ಪಂ.ಗಳಲ್ಲಿ ಅರ್ಜಿದಾರರು ತಪ್ಪು ಮಾಹಿತಿ ಕೊಟ್ಟಿರುವುದು, ಇನ್ನು ಕೆಲವೆಡೆ ವಿವಿಧ ರೀತಿಯ ಒತ್ತಡಗಳಿಂದ ಅಪೂರ್ಣ ಮಾಹಿತಿ ಸಲ್ಲಿಕೆಯಾಗಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಕೆಲವರು ಎರಡೆರಡು ಗ್ರಾ.ಪಂ.ಗಳಲ್ಲಿ ಅರ್ಜಿ ಸಲ್ಲಿಸಿ ನಿವೇಶನ ಪಡೆದದ್ದೂ ಇದೆ. ಇದನ್ನು ತಡೆಯುವುದಕ್ಕಾಗಿ ಆನ್‌ಲೈನ್‌ ಮಾಹಿತಿ ಜತೆಗೆ ಹೊಸ ಸಾಫ್ಟ್ವೇರ್‌ ಅಳವಡಿಸಿಕೊಳ್ಳಲಾಗಿದೆ. ಇದು ಆಧಾರ್‌ ಜತೆಗೆ ಲಿಂಕ್‌ ಆಗಿದ್ದು, ತಪ್ಪು ಮಾಹಿತಿ ನೀಡಿದವರ ಹೆಸರು ತಾನಾಗಿ (ಆಟೋಮ್ಯಾಟಿಕ್‌) ಅಳಿಸಿ ಹೋಗುತ್ತದೆ.

ದ.ಕ: 27,334 ನಿವೇಶನ ರಹಿತರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 27,334 ಮಂದಿ ನಿವೇಶನರಹಿತರು ಮತ್ತು 18,922 ಮಂದಿ ವಸತಿ ರಹಿತರಿದ್ದಾರೆ. ಆದರೆ ಇದರಲ್ಲಿ ಅರ್ಹ ಅರ್ಜಿದಾರರೆಷ್ಟು ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ. 94 ಸಿಯಲ್ಲಿ ಹಕ್ಕುಪತ್ರ ಪಡೆದಿರುವ ಕೆಲವರು ಕೂಡ ಪಟ್ಟಿಯಲ್ಲಿರುವ ಸಾಧ್ಯತೆ ಇದೆ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ನಿಗಮಕ್ಕೆ ಆನ್‌ಲೈನ್‌ ಮೂಲಕವೇ ಕಳುಹಿಸಲಾಗುತ್ತಿದೆ. ಮಾಹಿತಿ ಸಿಗದ ಅರ್ಜಿಗಳನ್ನು ಕೈಬಿಡಲಾಗುತ್ತಿದೆ.

Advertisement

ನಿವೇಶನವಿಲ್ಲ; ಕೃಷಿ ಸಮ್ಮಾನ್‌ ಫ‌ಲಾನುಭವಿ!
“ನಿವೇಶನವಿಲ್ಲ, ಕೊಡಿ’ ಎಂದು ಗ್ರಾ.ಪಂ.ಗಳ ಮೂಲಕ ಅರ್ಜಿ ಸಲ್ಲಿಸಿದವರಲ್ಲಿ ಅನೇಕರು ಆರ್‌ಟಿಸಿ ಸಹಿತ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ಗೆ ಅರ್ಜಿ ಸಲ್ಲಿಸಿ ಅದನ್ನೂ ಪಡೆದಿರುವುದು ಗಮನಕ್ಕೆ ಬಂದಿದೆ. ಒಂದು ಕಡೆ ನಿವೇಶನ ಇಲ್ಲ ಎಂದು ಅರ್ಜಿ, ಇನ್ನೊಂದೆಡೆ ಸ್ವಂತ ಜಮೀನಿನ ದಾಖಲೆ ಸಲ್ಲಿಸಿರುವುದು ನಿಗಮದ ಸಂದೇಹ ಹೆಚ್ಚುವಂತೆ ಮಾಡಿದೆ. ಹೀಗಾಗಿ ಈಗ ಆನ್‌ಲೈನ್‌ ಮಾಹಿತಿ ಕಡ್ಡಾಯ.

ಆದಷ್ಟು ಶೀಘ್ರ ಅರ್ಜಿದಾರರ ಹೆಚ್ಚುವರಿ ಮಾಹಿತಿ ಕಳುಹಿಸುವಂತೆ ಸೂಚನೆ ಬಂದಿದೆ. ಅದರಂತೆ ಕಾರ್ಯಪ್ರವೃತ್ತರಾಗಿದ್ದೇವೆ. ಇದರೊಂದಿಗೆ ಈ ಹಂತದ ನಿವೇಶನರಹಿತರ ಪಟ್ಟಿ ಅಂತಿಮವಾಗಲಿದೆ. ಮುಂದೆ ನಿವೇಶನ ಲಭ್ಯತೆಗೆ ಅನುಗುಣವಾಗಿ ನಿವೇಶನ ದೊರೆಯುವುದು.
 - ಜ್ಯೋತಿ, ಡಿಆರ್‌ಡಿಎ, ಯೋಜನಾ ನಿರ್ದೇಶಕರು, ದ.ಕ.

ಉಡುಪಿ ಜಿಲ್ಲೆಯಲ್ಲಿ ಸುಮಾರು 15,000 ನಿವೇಶನ ರಹಿತರು, 20,000 ವಸತಿ ರಹಿತರಿದ್ದಾರೆ. ಅಂತಿಮ ಪಟ್ಟಿ ಇನ್ನಷ್ಟೇ ಸಿದ್ಧವಾಗಬೇಕಿದೆ.
 - ಗುರುದತ್‌, ಯೋಜನಾ ನಿರ್ದೇಶಕರು, ಡಿಆರ್‌ಡಿಎ, ಉಡುಪಿ

ದ.ಕ. ಜಿಲ್ಲೆಯಲ್ಲಿ 830.56 ಎಕರೆಗಳನ್ನು ಮನೆ ನಿವೇಶನಕ್ಕಾಗಿ ಕಾದಿರಿಸಲಾಗಿದೆ. ಡೀಮ್ಡ್ ಫಾರೆಸ್ಟ್‌, ಅಕ್ರಮ ಸಕ್ರಮದಡಿ ನಮೂನೆ 50, 53, 57 ಮತ್ತು 94 ಸಿ ಅರ್ಜಿಗಳು ತನಿಖೆಗೆ ಬಾಕಿ ಇರುವುದರಿಂದ ಇತ್ಯರ್ಥವಾದ ಅನಂತರ ನಿಯಮಾನುಸಾರ ಜಮೀನು ಕಾಯ್ದಿರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಫಲಾನುಭವಿಗಳ ಆಯ್ಕೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಉದ್ದೇಶದಿಂದ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
– ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ, ದ.ಕ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next