Advertisement

ಆನ್‌ಲೈನ್‌ ಮೊಬೈಲ್‌ ಖರೀದಿ ವಂಚನೆ ಪ್ರಕರಣ: ಹೈರಾಣಾದ ಗ್ರಾಹಕ!

12:37 AM Jan 27, 2023 | Team Udayavani |

ಮಂಗಳೂರು: ಆನ್‌ಲೈನ್‌ ಮೂಲಕ 55 ಸಾವಿರ ರೂ. ಮೊಬೈಲ್‌ ಖರೀದಿಸಿ ಮೋಸ ಹೋಗಿದ್ದ ಗ್ರಾಹಕರೊಬ್ಬರಿಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಪರಿಹಾರ ದೊರಕಿಸಿಕೊಟ್ಟಿದೆ.
ದ.ಕ. ಜಿಲ್ಲಾ ಆಯೋಗವು ನೊಂದ ಗ್ರಾಹಕನಿಗೆ ವೆಚ್ಚ ಮಾಡಿದ ಮೊತ್ತದ ಜತೆ ಪರಿಹಾರ, ಇತರ ಖರ್ಚು ಹಾಗೂ ವೆಚ್ಚವಾಗಿ 15 ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸುವಂತೆ ವಂಚನೆ ಆರೋಪಕ್ಕೆ ಗುರಿಯಾದ ಸಂಸ್ಥೆಗೆ ಆದೇಶಿಸಿದೆ.

Advertisement

ಅಳತೆ, ಪ್ರಮಾಣದಲ್ಲಿನ ವ್ಯತ್ಯಾಸ, ಗ್ರಾಹಕ ಸೇವೆಗಳಲ್ಲಿ ಆಗುವ ಮೋಸ, ವಂಚನೆಯ ಪ್ರಕರಣಗಳನ್ನು ಗ್ರಾಹಕ ಆಯೋಗ ನಿರ್ವಹಿಸುತ್ತಿದ್ದು, ನೊಂದವರಿಗೆ ಪರಿಹಾರ ಒದಗಿಸುತ್ತಿದೆ..

ಪ್ರಕರಣದ ವಿವರ
ಸುರತ್ಕಲ್‌ ಬಾಳದ ಎಂಆರ್‌ಪಿಎಲ್‌ ಬಳಿಯ ಸಾಫ್ಟ್ವೇರ್‌ ಎಂಜಿನಿಯರ್‌ ಹರ್ಷ ಮೆಂಟೆ ಅವರು ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಆನ್‌ಲೈನ್‌ ಮೂಲಕ 55 ಸಾವಿರ ರೂ. ಪಾವತಿಸಿ ಮೊಬೈಲ್‌ ಗೆ ಬೇಡಿಕೆ ಸಲ್ಲಿಸಿದ್ದರು. 2020ರ ಜೂನ್‌ 17 ರಂದು ಬಂದ ಪಾರ್ಸೆಲ್‌ ನಲ್ಲಿ ಕೇವಲ ಚಾರ್ಜರ್‌ ಮತ್ತು ಇಯರ್‌ಫೋನ್‌ ಮಾತ್ರ ಇತ್ತು. ಆ ಕೂಡಲೇ ಸಂಬಂಧಪಟ್ಟ ಆನ್‌ ಲೈನ್‌ ವ್ಯಾಪಾರ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ 5 ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡುವ ಭರವಸೆ ನೀಡಿದ್ದರು. ಸುಮಾರು 6 ತಿಂಗಳವರೆಗೆ ಮೇಲಿಂದ ಮೇಲೆ ಕರೆ ಮಾಡಿದರೂ ಸ್ಪಂದಿಸದಿದ್ದಾಗ ಗ್ರಾಹಕ ಆಯೋಗದ ದ.ಕ. ಜಿಲ್ಲಾ ಕಚೇರಿಯನ್ನು ಸಂಪರ್ಕಿಸಿದರು. ಬಳಿಕ 2022ರ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ದೂರು ಸಲ್ಲಿಸಿದರು. ಪ್ರಕರಣ ಕೈಗೆತ್ತಿಕೊಂಡ ಆಯೋಗದ ತ್ರಿಸದಸ್ಯ ಪೀಠ ಜ. 11ರಂದು ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದೆ. ದೂರುದಾರರಿಗೆ ನಷ್ಟವಾಗಿರುವ 55 ಸಾವಿರ ರೂ. ಮೊತ್ತದ ಜತೆಗೆ 2022ರ ಅಕ್ಟೋಬರ್‌ 12 ರಿಂದ ಅನ್ವಯವಾಗುವಂತೆ ಪಾವತಿಯ ದಿನಾಂಕದವರೆಗೆ ವಾರ್ಷಿಕ ಶೇ. 8 ರ ಬಡ್ಡಿ ಹಾಗೂ ಖರ್ಚು-ವೆಚ್ಚ ಸೇರಿ ಹೆಚ್ಚುವರಿ 15 ಸಾವಿರ ರೂ. ಪಾವತಿಸುವಂತೆ ಆನ್‌ಲೈನ್‌ ಸಂಸ್ಥೆಗೆ ಸೂಚಿಸಿದೆ.

ಜಾಗೃತಿ, ಮಾಹಿತಿಯ ಕೊರತೆ
ಗ್ರಾಹಕರು ತಮಗಾಗುವ ಮೋಸದ ಬಗ್ಗೆ ಆಯೋಗವನ್ನು ಸಂಪರ್ಕಿಸುವಲ್ಲಿ ಜಾಗೃತಿ, ಮಾಹಿತಿಯ ಕೊರತೆ ಇದೆ ಎಂಬ ಅಪವಾದದ ಹೊರತಾಗಿಯೂ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2022ರ ಡಿಸೆಂಬರ್‌ ಅಂತ್ಯದವರೆಗೆ ದಾಖಲಾದ 13,965 ಪ್ರಕರಣಗಳಲ್ಲಿ 13,516 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ. ಉಡುಪಿಯಲ್ಲಿ 2022ರ ಸೆಪ್ಟಂಬರ್‌ ವರೆಗೆ ದಾಖಲಾದ 2,320 ಪ್ರಕರಣಗಳಲ್ಲಿ 2,242 ಪ್ರಕರಣಗಳು ಇತ್ಯರ್ಥಗೊಂಡಿವೆ.

ಪ್ರಕರಣಕ್ಕೆ ಸಂಬಂಧಿಸಿ ಆನ್‌ಲೈನ್‌ ಸಂಸ್ಥೆಯ ಕಸ್ಟಮರ್‌ ಕೇರ್‌ಗೆ ಎರಡು ವರ್ಷಗಳಲ್ಲಿ 200ಕ್ಕೂ ಅಧಿಕ ಕರೆಗಳನ್ನು ಮಾಡಿದ್ದೇನೆ. ಅವರು ಹಣ ಹಿಂದಿರುಗಿಸುವುದಾಗಿ ಹೇಳುತ್ತಾ ಬಂದಿದೆಯೇ ವಿನಾ ನ್ಯಾಯ ದೊರಕಿಲ್ಲ. ಪ್ರತೀ ಕರೆಯ ಸಂದರ್ಭದಲ್ಲೂ ಕಸ್ಟಮರ್‌ ಕೇರ್‌ನ ಬೇರೆ ಬೇರೆ ಸಿಬಂದಿ ಪ್ರತಿಕ್ರಿಯಿಸುತ್ತಿದ್ದ ಕಾರಣ ನನ್ನ ಪ್ರಕರಣವನ್ನು ಪ್ರತೀಬಾರಿ ವಿವರಿಸಬೇಕಿತ್ತು. ಇದರಿಂದ ನನ್ನ ಮಾನಸಿಕ ನೆಮ್ಮದಿಯೂ ಹಾಳಾಗಿತ್ತು. ಈಗ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಿಂದ ಪರಿಹಾರದ ಆದೇಶವಾಗಿದೆ.
– ಹರ್ಷ, ನೊಂದ ಗ್ರಾಹಕ, ಮಂಗಳೂರು

Advertisement

ದ.ಕ. ಜಿಲ್ಲೆಯಲ್ಲಿ ಕೋವಿಡ್‌ ಆರೋಗ್ಯ ವಿಮೆ ಇತ್ಯಾದಿ ಹಲವು ರೀತಿಯ ದೂರುಗಳು ದಾಖಲಾಗುತ್ತಿವೆ. 2016ರಿಂದ ಅಂಕಿ-ಅಂಶಗಳನ್ನು ಗಮನಿಸಿದರೆ ಗ್ರಾಹಕರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ನೂತನ ಅಧಿಸೂಚನೆ ಪ್ರಕಾರ 5 ಲಕ್ಷ ರೂ. ವರೆಗಿನ ಮೌಲ್ಯದ ವಸ್ತು ಅಥವಾ ಸೇವೆಯಲ್ಲಿ ಆಗಿರುವ ಅನ್ಯಾಯ, ವಂಚನೆಗೆ ಸಂಬಂಧಿಸಿ ಗ್ರಾಹಕರು ಉಚಿತವಾಗಿ ಆಯೋಗದಿಂದ ಸೇವೆಯನ್ನು ಪಡೆಯಬಹುದು. 5 ಲಕ್ಷ ರೂ.ನಿಂದ 10 ಲಕ್ಷ ರೂ. ವರೆಗಿನ ಸೇವೆಗೆ 200 ರೂ., 10 ಲಕ್ಷ ರೂ.ನಿಂದ 20 ಲಕ್ಷ ರೂ. ವರೆಗಿನ ಸೇವೆಗೆ 400 ರೂ. ಹಾಗೂ 20 ಲಕ್ಷ ರೂ.ನಿಂದ 50 ಲಕ್ಷ ರೂ. ವರೆಗಿನ ಮೌಲ್ಯದ ಸೇವೆಗಳಿಗೆ 1 ಸಾವಿರ ರೂ. ಶುಲ್ಕ ನೀಡಬೇಕು.
– ಗಂಗಾಧರ ನಾಯಕ್‌ ಎಂ.ಟಿ.,
ಸಹಾಯಕ ಆಡಳಿತಾಧಿಕಾರಿ, ದ.ಕ. ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ

– ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next