Advertisement

ಪದವಿಗೆ ಆನ್‌ಲೈನ್‌ ಕಲಿಕೆ ವೇದಿಕೆ; ನ. 17ರಂದು ಮುಖ್ಯಮಂತ್ರಿ ಬಿಎಸ್‌ವೈ ಚಾಲನೆ

12:13 AM Oct 27, 2020 | mahesh |

ಬೆಂಗಳೂರು: ರಾಜ್ಯ ಸರಕಾರವು ಪದವಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಆನ್‌ಲೈನ್‌ ವೇದಿಕೆ ಸೃಷ್ಟಿಸಲು ಮುಂದಾಗಿದೆ. ಇದರಡಿ ವಿದ್ಯಾರ್ಥಿ ಗಳು ತಮಗಿಷ್ಟದ ಪ್ರಾಧ್ಯಾಪಕರ ಪಾಠ- ಪ್ರವಚನವನ್ನು ಕೇಳಿ ಕಲಿಯಬಹುದು. ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯು ಇದಕ್ಕಾಗಿ “ಕಲಿಕೆ ನಿರ್ವಹಣ ವ್ಯವಸ್ಥೆ’ (ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ-ಎಲ್‌ಎಂಎಸ್‌)ಯನ್ನು ಸಿದ್ಧಪಡಿಸಿದೆ. ವಿದೇಶಿ ವಿ.ವಿ.ಗಳು ಮತ್ತು ಅನೇಕ ಖಾಸಗಿ ಸಂಸ್ಥೆಗಳು ಈ ರೀತಿಯ ವೇದಿಕೆ ಸೃಷ್ಟಿಸಿವೆ. ಆದರೆ ಸರಕಾರಿ ಮಟ್ಟದಲ್ಲಿ ಇದು ದೇಶದಲ್ಲೇ ಮೊದಲ ಪ್ರಯೋಗ.

Advertisement

ಖ್ಯಾತನಾಮರಿಂದ ಪಾಠ
ಸರಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಎಂಜಿನಿಯರಿಂಗ್‌, ಡಿಪ್ಲೊಮಾ, ಬಿ.ಎ., ಬಿಎಸ್‌ಸಿ, ಬಿಕಾಂ ಮತ್ತಿತರ ಪದವಿ ತರಗತಿಗಳ ವಿಷಯಗಳನ್ನು ಖ್ಯಾತನಾಮರಿಂದ ಪಾಠ ಮಾಡಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತಲುಪಿಸುವ ಯೋಜನೆ ಇದು. ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಮಾತ್ರವಲ್ಲ, ತಮಗೆ ಇಷ್ಟವಾಗುವ ಪ್ರಾಧ್ಯಾಪಕರ ಪಾಠವನ್ನು ಡೌನ್‌ಲೋಡ್‌ ಮಾಡಿಕೊಂಡು ಕೇಳಲು ಅವಕಾಶವಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಕಾಲೇಜಿನ ಪ್ರಾಧ್ಯಾ ಪಕರು ಪಾಠ ಅಪ್‌ಲೋಡ್‌ ಮಾಡಬಹುದು. ವಿದ್ಯಾರ್ಥಿಗಳಿಗೆ ಪುನರ್‌ಮನನ ಮಾಡಿಕೊಳ್ಳಲು ಅವಕಾಶವಿದ್ದು, ಎಷ್ಟು ಅರ್ಥವಾಗಿದೆ ಎನ್ನುವುದರ ಮೌಲ್ಯಮಾಪನಕ್ಕೆ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ನ. 17ರಂದು ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.

ಡೌಟ್‌ ಫೋರಂ
ಈ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ತಮಗೆ ಅರ್ಥವಾಗದ ವಿಷಯದ ಬಗ್ಗೆ ಪ್ರಶ್ನೆ ಕೇಳಿ ಪರಿಹಾರ ಪಡೆಯಲು ಅವಕಾಶವಿದ್ದು, ಅದಕ್ಕಾಗಿ ಡೌಟ್‌ ಫೋರಂ ಎಂದು ಪ್ರತ್ಯೇಕ ಬಾಕ್ಸ್‌ ಇರುತ್ತದೆ.

ವೈಫೈ ಝೋನ್‌
ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯ ಮತ್ತು ಪ್ರಾಧ್ಯಾಪಕರ ಪಾಠವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಇಂಟರ್‌ನೆಟ್‌ಗೆ ಖರ್ಚು ಮಾಡುವ ಅಗತ್ಯವಿಲ್ಲ. ಅದಕ್ಕಾಗಿ ಸರಕಾರವೇ ಪ್ರತೀ ಸರಕಾರಿ ಪದವಿ ಕಾಲೇಜಿನಲ್ಲಿ ವೈಫೈ ಝೋನ್‌ ರೂಪಿಸುವ ಆಲೋಚನೆ ಹೊಂದಿದೆ.

5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ
ಈ ಆನ್‌ಲೈನ್‌ ಕಲಿಕೆ ನಿರ್ವಹಣೆ ವ್ಯವಸ್ಥೆ ಯಿಂದ ರಾಜ್ಯದ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಪ್ರಾಧ್ಯಾಪಕರಿಗೂ ಸಕ್ರಿಯವಾಗಿ ತೊಡಗಿಕೊಳ್ಳಲು, ಹೆಚ್ಚು ಕ್ರಿಯಾಶೀಲವಾಗಿ ಪಾಠ ಮಾಡಲು ಅವಕಾಶ ದೊರೆಯಲಿದೆ.

Advertisement

ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್‌ಎಂಎಸ್‌ ಆನ್‌ಲೈನ್‌ ವೇದಿಕೆ ಸಿದ್ಧಪಡಿಸುತ್ತಿದ್ದೇವೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದ್ದು, ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಲಿದೆ.
– ಡಾ| ಸಿ.ಎನ್‌. ಅಶ್ವತ್ಥನಾರಾಯಣ,  ಉನ್ನತ ಶಿಕ್ಷಣ ಸಚಿವ

 ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next