Advertisement
ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ (2018) 85 ಪ್ರಕರಣಗಳು, ಈ ವರ್ಷ (2019) ಜನವರಿಯಿಂದ ಜೂನ್ 10ರ ವರೆಗಿನ 5 ತಿಂಗಳ ಅವಧಿ ಯಲ್ಲಿ 76 ವಂಚನಾ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ದಾಖಲಾಗಿರುವ ಸೈಬರ್ ಅಪರಾಧಗಳ ಸಂಖ್ಯೆ 6,000 ದಾಟಿವೆ. ವರದಿಯಾದ ಪ್ರತಿಯೊಂದು ಪ್ರಕರಣವೂ ವಿಶಿಷ್ಟವಾಗಿದೆ.
ಮಂಗಳೂರಿನ ಆ ವ್ಯಕ್ತಿ ಬೆಂಗಳೂರಿಗೆ ಇಂಡಿಗೊ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿ ಟಿಕೆಟ್ ಹಣ ಪಾವತಿಸಿದ್ದರು. ಆದರೆ ಮಕ್ಕಳ ಆಟಿಕೆ ವಸ್ತುಗಳ ಲಗ್ಗೇಜ್‌ಗೆ ಸಂಬಂಧಿಸಿದ ಹಣ ಪಾವತಿಸಲು ಮರೆತಿದ್ದರು. ಈ ಬಗ್ಗೆ ಮನೆಗೆ ಬಂದ ಬಳಿಕವೇ ಅವರಿಗೆ ನೆನಪಾಗಿತ್ತು. ಇನ್ನೇನು ಮಾಡುವುದೆಂದು ಆಲೋಚ ನೆಯಲ್ಲಿ ತೊಡಗಿದ್ದಾಗ ಅವರಿಗೆ ಆನ್‌ಲೈನ್ ಪಾವತಿ ಬಗ್ಗೆ ಹೊಳೆಯಿತು. ಮನೆಯಲ್ಲಿ ಕುಳಿತುಕೊಂಡು ಇಂಡಿಗೋ ಏರ್‌ಲೈನ್ಸ್‌ಗಾಗಿ ಗೂಗಲ್ ಸರ್ಚ್ ಹಾಕಿದರು. ಈ ಸಂದರ್ಭ ಇಂಡಿಗೊ ಏರ್‌ಲೈನ್ಸ್ ಕಟ್ಟಡದ ಚಿತ್ರ ಇರುವ ವೆಬ್‌ಸೈಟ್ ಲಭಿಸಿದ್ದು, ಅದರಲ್ಲಿ ಗ್ರಾಹಕರ ಸಂಪರ್ಕಕ್ಕಾಗಿ ಫೋನ್ ನಂಬರ್ ಇತ್ತು. ಈ ನಂಬರ್‌ಗೆ ಕರೆ ಮಾಡಿ ಆಟಿಕೆ ಸಾಮಾನು ಲಗ್ಗೇಜ್‌ಗಾಗಿ 50 ರೂ. ಪಾವ ತಿಸ ಬೇಕಾಗಿದೆ ಎಂದು ತಿಳಿಸಿದಾಗ ಆಚೆ ಕಡೆಯಿಂದ ಮಾತ ನಾಡಿದ ವ್ಯಕ್ತಿ ಖಾತೆ ನಂಬರ್ ಒಂದನ್ನು ಈಗ ಮೆಸೇಜ್ ಮಾಡ್ತೇವೆ, ಅದಕ್ಕೆ 50 ರೂ. ವರ್ಗಾವಣೆ ಮಾಡಿ ಎಂದು ತಿಳಿಸಿದ್ದಾನೆ. ಹಾಗೆ ಕೆಲವೇ ಸಮಯದಲ್ಲಿ ಖಾತೆ ನಂಬರ್ ಬಂದಿದ್ದು, ಅದಕ್ಕೆ 50 ರೂ. ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಆ ಬಳಿಕ ಕೆಲವೇ ಸಮಯ ದಲ್ಲಿ ಅವರ ಖಾತೆಯಿಂದ ಹಂತ ಹಂತ ವಾಗಿ ಒಟ್ಟು 1,02,999 ರೂ. ವರ್ಗಾವಣೆ ಆಗಿದೆ. ಗೂಗಲ್ ಸರ್ಚ್‌ನಲ್ಲಿ ಅವರು ನೋಡಿದ್ದ ವೆಬ್‌ಸೈಟ್ ಅಸಲಿಗೆ ಇಂಡಿಗೋ ಸಂಸ್ಥೆಯದ್ದಾಗಿರದೆ ಹ್ಯಾಕರ್ಗಳ ವೆಬ್‌ಸೈಟ್ ಆಗಿತ್ತು ಎನ್ನುವುದು ಅವರಿಗೆ ಆ ಬಳಿಕ ಗೊತ್ತಾಯಿತು. ಹ್ಯಾಕರ್ಗಳು ಇಂಡಿಗೋ ಸಂಸ್ಥೆಯ ಫೋಟೋ, ಮಾಹಿತಿಯನ್ನು ಬಳಸಿ ತಮ್ಮದೇ ಆದ ನಕಲಿ ವೆಬ್‌ಸೈಟ್‌ನ್ನು ಸೃಷ್ಟಿಸಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ.
Related Articles
ಎಟಿಎಂ ಮೆಶಿನ್‌ಗೆ ಸ್ಕಿಮಿಂಗ್ ಡಿವೈಸ್ ಅಳವಡಿಸಿ ಎಟಿಎಂ ಕಾರ್ಡಿನ ಮಾಹಿತಿ ಸಂಗ್ರಹಿಸಿ ಎಟಿಎಂ ಕಾರ್ಡ್‌ದಾರರ ಖಾತೆಯಿಂದ ಹಣ ಎಗರಿಸುವ ಜಾಲ ಮಂಗಳೂರಿನಲ್ಲಿ ಮತ್ತೆ ಸಕ್ರಿಯವಾಗಿದ್ದು, ಇದೇ ಜೂನ್ ತಿಂಗಳಲ್ಲಿ ಇಂತಹ ಒಂದು ವಂಚನ ಪ್ರಕರಣ ನಡೆದಿದೆ. ಈ ಹಿಂದ ಕಳೆದ ಅಕ್ಟೋಬರ್‌ನಲ್ಲಿ ಇಂತಹ ಪ್ರಕರಣ ವರದಿಯಾಗಿತ್ತು.
Advertisement
ಕಪಿತಾನಿಯೊ ಶಾಲೆ ಎದುರಿನ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಜೂ. 9ರಂದು ವಂಚಕರು ಹಲವು ಮಂದಿ ಗ್ರಾಹಕರ ಹಣವನ್ನು ಸ್ಕಿಮಿಂಗ್ ಮೂಲಕ ದೋಚಿ ದ್ದಾರೆ. ಹೈದರಾಬಾದ್‌ನಲ್ಲಿರುವ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ತನ್ನ ವಿಜಯಾ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಖಾತೆಗಳ ಎಟಿಎಂ ಕಾರ್ಡ್ ಮೂಲಕ ತಲಾ 10,000 ರೂ. ಡ್ರಾ ಮಾಡಿದ್ದು, ಮರು ದಿನ (ಜೂ. 10) ಬೆಳ ಗಾ ಗು ವಷ್ಟರಲ್ಲಿ ಅವರ ಖಾತೆಯಿಂದ ವಂಚಕರು 2,25,000 ರೂ. ದೋಚಿದ್ದಾರೆ. ಅದೇ ಎಟಿಎಂಗೆ ತೆರಳಿದ್ದ ಇನ್ನೋರ್ವ ಮಹಿಳೆಯ ಖಾತೆಯಿಂದ ವಂಚಕರು 10,000 ರೂ. ಎಗರಿಸಿದ್ದಾರೆ.
ಈ ಬಗ್ಗೆ ಸೈಬರ್ ಠಾಣೆಗೆ ದೂರು ಬಂದ ಹಿನ್ನೆಲೆಯಲ್ಲಿ ಸೈಬರ್ ಠಾಣೆಯ ಪೊಲೀಸರು ಕಪಿತಾನಿಯೋ ಬಳಿಯ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದ ಸಿಸಿ ಕೆಮರಾ ಪರಿಶೀಲಿಸಿದಾಗ ಇಬ್ಬರು ಅಪರಿಚಿತರು ಎಟಿಎಂ ಕೇಂದ್ರದ ಬಳಿಯೇ ಕಾದು ನಿಂತು ಎಟಿಎಂ ಮೆಶಿನ್‌ಗೆ ತಮ್ಮ ಡಿವೈಸ್ ಅಳವಡಿಸಿ ಆಗಿಂದಾಗ್ಗೆ ಎಟಿಎಂ ಕೇಂದ್ರದ ಒಳಗೆ ಆಗಿಂದಾಗ್ಗೆ ಹೋಗಿ ಬರುತ್ತಿರುವುದು ಕಂಡು ಬಂದಿದೆ. ಜೂ. 9 ರವಿವಾರ ಆಗಿದ್ದರಿಂದ ಜನರ ಓಡಾಟ ಕಡಿಮೆ ಇದ್ದದ್ದು ವಂಚಕರಿಗೆ ಅನುಕೂಲವಾಗಿತ್ತು.
ಫೋನ್ ಮಾಡಿ ವಂಚಿಸಿದರುಇನ್ನೊಂದು ಪ್ರಕರಣದಲ್ಲಿ ವಂಚಕರು ಪುರೋಹಿತರೊಬ್ಬರನ್ನು ಫೋನ್ ಮಾಡಿ ಯಾಮಾರಿಸಿ ಅವರ ಖಾತೆಯಿಂದ 40,000 ರೂ.ಎಗರಿಸಿದ್ದಾರೆ. ಜೂ. 7ರಂದು ಬೆಳಗ್ಗೆ 7.30ಕ್ಕೆ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ “ನಾವು ಎಸ್‌ಬಿಐನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅಪ್ ಡೇಟ್ ಮಾಡಲು ಕಾರ್ಡ್ ನಂಬರ್ ಕೊಡಿ. ಕಾರ್ಡ್‌ಗೆ ಸಿಗ್ನೇಚರ್ ಮಾಡಿದ್ದೀರಾ? ಸಿಗ್ನೇಚರ್ ಮಾಡಿರದಿದ್ದರೆ ಅದರ ಪಕ್ಕದಲ್ಲಿರುವ ನಂಬರ್ ಹೇಳಿ’ ಎಂದಿದ್ದಾರೆ. ಪುರೋಹಿತರು ಸಿಗ್ನೇಚರ್ ಮಾಡುವ ಜಾಗದ ಪಕ್ಕದಲ್ಲಿರುವ ನಂಬರ್ ತಿಳಿಸಿದ್ದಾರೆ. ಆಗ ಆಚೆ ಕಡೆಯಿಂದ ಮಾತನಾಡಿದ ವ್ಯಕ್ತಿ ಈಗ ನಿಮಗೆ ಎಟಿಪಿ ನಂಬರ್ ಬರುತ್ತದೆ; ಅದನ್ನು ನಮಗೆ ತಿಳಿಸಿ ಎಂದಿದ್ದಾರೆ. ಕೆಲವೇ ಕ್ಷಣದಲ್ಲಿ ಒಟಿಪಿ ನಂಬರ್ ಬಂದಿದ್ದು ಅದನ್ನೂ ಪುರೋಹಿತರು ತಿಳಿಸಿದ್ದಾರೆ. ಒಟಿಪಿ ನಂಬರ್ ಕೊಟ್ಟ ಕೂಡಲೇ ಪುರೋಹಿತರ ಖಾತೆಯಿಂದ 40,000 ರೂ.ಡ್ರಾ ಆಗಿದೆ. ಸಾಲ ಮಾಡಿ ಕೊಡಿಸುವುದಾಗಿ ನಂಬಿಸಿ ವಂಚನೆ
ಆರ್ಥಿಕ ಸಂಕಷ್ಟದಲ್ಲಿದ್ದ ಈ ವ್ಯಕ್ತಿಯ ಮೊಬೈಲ್‌ಗೆ ಸುಲಭವಾಗಿ ಬ್ಯಾಂಕ್ ಸಾಲ ತೆಗೆಸಿಕೊಡುವುದಾಗಿ ಮಾ. 1ರಂದು ದಿಲ್ಲಿ ಮೂಲದ “ನವ ಯುಗ ಫೈನಾನ್ಸ್’ ಎಂಬ ಸಂಸ್ಥೆಯಿಂದ ವಾಟ್ಸಪ್ ಸಂದೇಶ ಬಂದಿತ್ತು. ಅದನ್ನು ನಂಬಿದ ಈ ವ್ಯಕ್ತಿ ಅದರಲ್ಲಿದ್ದ ಸಂಸ್ಥೆಯ ನಂಬರಿಗೆ ಕರೆ ಮಾಡಿ ಬ್ಯಾಂಕ್ ಸಾಲ ತೆಗೆಸಿ ಕೊಡುವಂತೆ ಕೋರಿದ್ದರು. ಅವರಿಗೆ ಸಹಾಯ ಮಾಡುವುದಾಗಿ ನಂಬಿಸಿದ ಸಂಸ್ಥೆಯವರು ಅರ್ಜಿ ಪರಿಶೀಲನ ಶುಲ್ಕ, ಕಾನೂನು ಸಲಹಾ ಶುಲ್ಕ, ವಕೀಲರ ಶುಲ್ಕ ಎಂದೆಲ್ಲಾ ಹೇಳಿ 7,13,500 ರೂ. ಗಳನ್ನು ಪಡೆದಿದ್ದರು. ಅರ್ಜಿದಾರರು ಎಲ್ಲ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಸಂದಾಯ ಮಾಡಿದ್ದರು. ಸಾಲದ ಮೊತ್ತ ಮಂಜೂರಾಗ ಬೇಕಾದರೆ ಇನ್ನೂ 4 ಲಕ್ಷ ರೂ. ಪಾವತಿಸಬೇಕು ಎಂದು ತಿಳಿಸಿದಾಗ ಅರ್ಜಿದಾರರಿಗೆ ಸಂಶಯ ಬಂದಿತ್ತು. ಬಳಿಕ ಅವರು ದಿಲ್ಲಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿನ ಕಟ್ಟಡವೊಂದರಲ್ಲಿ “ನವ ಯುಗ ಫೈನಾನ್ಸ್’ ಎಂಬ ನಾಮ ಫಲಕ ಬಿಟ್ಟರೆ ಕಚೇರಿಯಾಗಲಿ ಸಿಬಂದಿಯಾಗಲಿ ಇರಲಿಲ್ಲ. ಬಳಿಕ ಅವರು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಈ ವ್ಯಕ್ತಿ ತಮ್ಮ ಮನೆಯನ್ನು ಲೀಸ್‌ಗೆ ಕೊಟ್ಟು ಅದರಿಂದ ಬಂದ ಹಣವನ್ನು ಮತ್ತು ಸ್ನೇಹಿತರಿಂದ ಕಾಡಿ ಬೇಡಿ ಪಡೆದ ಹಣವನ್ನು ವಂಚಕರಿಗೆ ಪಾವತಿಸಿದ್ದು, ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಜಾಗೃತರಾಗಿ
ಸೈಬರ್ ಅಪರಾಧಗಳು ಮುಖ್ಯವಾಗಿ ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳಿಗೆ ಸಂಬಂಧಿಸಿ ನಡೆಯುತ್ತವೆ. ವಂಚಕರು ದೂರದಲ್ಲಿ ಕುಳಿತುಕೊಂಡು ಎಟಿಎಂ/ ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಪಡೆದು ಹಣ ಎಗರಿಸುತ್ತಾರೆ. ಜನರು ಜಾಗೃತರಾಗ ಬೇಕು. ಮೊಬೈಲ್ ಫೋನ್‌ಗೆ ಅಪರಿಚಿತರಿಂದ ಬರುವ ಸಂದೇಶಗಳಿಗೆ, ಕರೆಗಳಿಗೆ ಸ್ಪಂದಿಸ ಬಾರದು. ತಮ್ಮ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಎಟಿಎಂ/ ಕ್ರೆಡಿಟ್‌ಕಾರ್ಡ್ ಸಂಖ್ಯೆ, ಒಟಿಪಿಯನ್ನು ಅಪರಿಚಿತರಿಗೆ ಕೊಡ ಬಾರದು. ಎಟಿಎಂ ಕೇಂದ್ರದಲ್ಲಿ ಶಂಕಿತರ ಇದ್ದರೆ ಎಚ್ಚರಿಕೆ ವಹಿಸಬೇಕು. ಆನ್‌ಲೈನ್ ವಂಚಕರು ಜಾರ್ಖಂಡ್‌ನಿಂದ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದ್ದು, ತನಿಖಾ ತಂಡವನ್ನು ಜಾರ್ಖಂಡ್‌ಗೆ ಕಳುಹಿಸಲಾಗುವುದು.
– ಸಂದೀಪ್ ಪಾಟೀಲ್, ಪೊಲೀಸ್ ಆಯುಕ್ತರು, ಮಂಗಳೂರು - ಹಿಲರಿ ಕ್ರಾಸ್ತಾ