ಸುವರ್ಣವಿಧಾನಸೌಧ: ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ಹಾಗೂ ಅದರಿಂದ ಆಗುತ್ತಿರುವ ಅವಾಂತರಗಳು ಕೆಳಮನೆಯಲ್ಲಿ ಪ್ರತಿಧ್ವನಿಸಿತು. ಈ ಕುರಿತ ಪ್ರತ್ಯೇಕ ಚರ್ಚೆಗೆ ಪಕ್ಷಾತೀತವಾಗಿ ಒತ್ತಾಯ ಕೇಳಿಬಂತು.
ಉತ್ತರ ಕರ್ನಾಟಕ ಸಮಸ್ಯೆಗಳ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಶರಣು ಸಲಗಾರ, ಮೊಬೈಲ್ನಲ್ಲಿಯ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ನಿಂದ ಗ್ರಾಮೀಣ ಭಾಗದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಯುವಸಮೂಹ ಬಲಿಯಾಗುತ್ತಿದೆ. ಆತ್ಮಹತ್ಯೆ ಪ್ರಕರಣಗಳು ಕೂಡ ನಡೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ನ ನರೇಂದ್ರಸ್ವಾಮಿ, ಇದೊಂದು ಗಂಭೀರ ವಿಷಯವಾಗಿದೆ. ಈ ಸಮಸ್ಯೆ ರಾಜ್ಯದ ಎಲ್ಲ ಭಾಗಗಳಲ್ಲೂ ಇದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನಿನ ಆವಶ್ಯಕತೆ ಇದೆ. ಆದ್ದರಿಂದ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಲಹೆ ಮಾಡಿದರು.
ಆಗ, ಉಳಿದ ಹಲವು ಸದಸ್ಯರು ಕೂಡ ದನಿಗೂಡಿಸಿ, ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ, “ಆನ್ಲೈನ್ ಬೆಟ್ಟಿಂಗ್, ಗೇಮಿಂಗ್, ಮಟ್ಕಾ ಮತ್ತಿತರ ವಿಚಾರಗಳಲ್ಲಿ ಸರ್ಕಾರ ಹಲವು ಕಠಿಣ ಕ್ರಮ ಕೈಗೊಂಡಿದೆ. ಅದರ ಬಗ್ಗೆಯೂ ಮಾಹಿತಿ ನೀಡಬೇಕಿದೆ. ಆದ್ದರಿಂದ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿ’ ಎಂದು ಹೇಳಿದರು.
ಸಭಾಧ್ಯಕ್ಷ ಯು.ಟಿ. ಖಾದರ್, “ಸಮಯಾವಕಾಶದ ಲಭ್ಯತೆ ನೋಡಿಕೊಂಡು ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.