ಕೆಜಿಎಫ್: ಪೊಲೀಸ್ ಇಲಾಖೆ ಆನ್‌ಲೈನ್ ವಂಚಕರ ವಿರುದ್ಧ ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆ ಸಂದೇಶ ನೀಡುತ್ತಿದ್ದರೂ, ಬೇಗ ಶ್ರೀಮಂತರಾಗುವ ಆಸೆಗೆ ಬಿದ್ದು ನಗರದ ದಂಪತಿಗಳಿಬ್ಬರು ಬರೋಬ್ಬರಿ 69 ಲಕ್ಷ ರೂ. ಕಳೆದುಕೊಂಡು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಎಷ್ಟೇ ಅರಿವು ಮೂಡಿಸಿದರೂ ಆನ್‌ಲೈನ್ ವಂಚಕರ ಜಾಲಕ್ಕೆ ಅಮಾಯಕರು ಸಿಕ್ಕಿ ಹಾಕಿಕೊಳ್ಳು ತ್ತಿದ್ದು, ಈ ಸಂಬಂಧ ಹಲವಾರು ಪ್ರಕರಣಗಳು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದರೆ, ಮತ್ತೆಷ್ಟೋ ಪ್ರಕರಣ ಮರ್ಯಾದೆಗೆ ಅಂಜಿ ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತಿವೆ. ಯುವಕರು ಹೆಚ್ಚಾಗಿ ಈ ಜಾಲಕ್ಕೆ ಹೆಚ್ಚಾಗಿ ಸಿಲುಕಿಕೊಳ್ಳುತ್ತಿರುವುದು ವಿಪರ್ಯಾಸವೆಂದರೂ ಸತ್ಯವಾಗಿದೆ.
ಮೊಬೈಲ್ ಫೋನ್‌ನಲ್ಲಿ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡುವ ಆ್ಯಪ್‌ಗ್ಳಿಂದ ಯುವಕರಿಗೆ ಹಣದ ಸಂಪಾದನೆಯ ಹುಚ್ಚನ್ನು ಹಿಡಿಸಿ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಅದೆಷ್ಟೋ ಮಂದಿ ಮನೆಯವರಿಗೆ ಗೊತ್ತಾಗದಂತೆ ಕೈಸುಟ್ಟುಕೊ ಳ್ಳುತ್ತಿದ್ದಾರೆ. ಈ ಜಾಲಕ್ಕೆ ತಾಜಾ ಉದಾಹರಣೆ ಎಂದರೆ, ಭಾನುವಾರ ಕೆಜಿಎಫ್‌ನ ವಿವೇಕ್ ನಗರದ ನಿವಾಸಿಗಳಾದ ವಿ.ಸುಧಾಕರ್ ರೆಡ್ಡಿ ಮತ್ತು ಗೀತಾ ದಂಪತಿ ಆನ್‌ಲೈನ್ ಮೂಲಕ ವ್ಯಾಪಾರ ಮಾಡಿ ಅಧಿ ಕ ಲಾಭ ಪಡೆಯುವ ಆಸೆಗೆ ಬಿದ್ದು, ಬರೋಬ್ಬರಿ 69 ಲಕ್ಷ ರೂ. ಕಳೆದುಕೊಂಡು ಕೊನೆಗೆ ದಿಕ್ಕು ತೋಚದಂತಾಗಿ ಸೈಬರ್ ಕ್ರೈಂ ಪೊಲೀಸ್‌ರಿಗೆ ದೂರು ನೀಡಿದ್ದಾರೆ.
ಕಳೆದ 2022ರ ನವೆಂಬರ್ 22ರಂದು 9880714888 ಮೊಬೈಲ್ ಸಂಖ್ಯೆಯಿಂದ ಗೀತಾ ಅವರ ಮೊಬೈಲ್ ವಾಟ್ಸಾಪ್‌ಗೆ ಅನಾಮಧೇಯ ಸಂದೇಶವೊಂದು ಬಂದಿದ್ದು, ಅದರಲ್ಲಿ ಸಂದೇಶ ಕಳಿಸಿದವರ ಹೆಸರು ಕ್ಲಾರಾ ಹೆಯಾತ್ ಎಂದು ಇದ್ದು, ತಾನು ಒಂದು ಟ್ರೇಡಿಂಗ್ ಕಂಪನಿಯಲ್ಲಿ ಪಾಲುದಾರಳಾಗಿದ್ದು, ನೀವು ಕೂಡ ಇದರಲ್ಲಿ ಪಾಲುದಾರರಾದಲ್ಲಿ ನಿಮಗೆ ಅ ಧಿಕ ಲಾಭ ಬರುವುದಾಗಿ ತಿಳಿಸಿ, ಮೆಟಾ ಬಿ ಟ್ರೇಡ್ ಎಂಬ ಕಂಪನಿಯ ಲಾಗಿನ್ ಐಡಿ ನೀಡಿದ್ದರು ಎನ್ನಲಾಗಿದೆ.
ವಂಚಕರ ಖಾತೆಗೆ ಹಣ ಜಮಾ: ಬಳಿಕ ಗೀತಾ ಆ ಕಂಪನಿಯ ಐಡಿಗೆ ಲಾಗಿನ್ ಆಗಿ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ ಜಾಯಿನ್ ಆಗಿದ್ದರು. ಕಳೆದ ಜನವರಿ 5ರಂದು ಟ್ರೇಡಿಂಗ್ ಪ್ರಾರಂಭದ ಚೆಕಿಂಗ್ ಮೊತ್ತ 10 ರೂ. ಗೀತಾ ಅವರ ಖಾತೆಗೆ ಇಜಾ ಬ್ಯೂಟಿ ಎಚ್ ಲಿಮಿಟೆಡ್ ಎಂಬುವವರ ಐಸಿಐಸಿಐ ಬ್ಯಾಂಕ್‌ನ ಚಾಲ್ತಿ ಖಾತೆ ಸಂಖ್ಯೆ 075505001090ಯಿಂದ ಜಮೆ ಆಗಿತ್ತು. ಇದಾದ ನಂತರ ಕ್ಲಾರಾ ಹೆಯಾತ್ ಟ್ರೇಡಿಂಗ್ ಮಾಡಿದಲ್ಲಿ ಹಣ ದ್ವಿಗುಣವಾಗುವುದಾಗಿ ತಿಳಿಸಿದ್ದರಿಂದ ಗೀತಾ ಅವರು ಮನೆಯಲ್ಲಿದ್ದ
ಒಡವೆಗಳನ್ನು ಅಡವಿಟ್ಟು ಆನ್‌ಲೈನ್ ವಂಚಕರ ಖಾತೆಗೆ ಒಂದು ತಿಂಗಳ ಕಾಲ ನಿರಂತರವಾಗಿ ಹಣವನ್ನು ಜಮೆ ಮಾಡಿದ್ದಾರೆ.
ಪೊಲೀಸರಿಗೆ ದೂರು: ಗೀತಾ ಮತ್ತು ಈಕೆಯ ಪತಿ ಸುಧಾಕರ್ ಬ್ಯಾಂಕ್ ಖಾತೆಯಿಂದ ಸುಮಾರು 69,13,203 ರೂ.ಗಳನ್ನು ವಂಚಕರು ತಮ್ಮ ಖಾತೆಗೆ ತುಂಬಿಸಿಕೊಂಡಿದ್ದಾರೆ. ತಮ್ಮ ಹಣದ ಬಗ್ಗೆ ಸುಧಾಕರ್ ಅವರು ಫೋನ್ ಕರೆ ಮಾಡಿ ಕೇಳಿದಾಗ ನಿಮ್ಮ ಹಣ ಮತ್ತು ಬಡ್ಡಿಯನ್ನು ಆರು ತಿಂಗಳೊಳಗೆ ಕೊಡುವುದಾಗಿ ನಂಬಿಸಿ ಕೊನೆಗೆ ಹಣವನ್ನು ಕೊಡದೆ ರಿಪ್ಲೇ ಸಹ ನೀಡದೆ ಮೋಸ ಮಾಡಿದ್ದಾರೆ. ಅಂತಿಮವಾಗಿ ಸುಧಾಕರ್ ಮತ್ತು ಗೀತಾ ದಂಪತಿ ಹಣ ಕಳೆದುಕೊಂಡಿರುವ ಬಗ್ಗೆ ಕೆಜಿಎಫ್‌ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕರು ಅನಧಿಕೃತ ಪ್ಲೇ ಸ್ಟೋರ್ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಬಾರದು. ಅನಾಮಧೇಯ ಕರೆಗಳಿಗೆ ಸ್ಪಂದಿಸದೆ, ವಾಟ್ಸಾಪ್‌ಗ್ಳಲ್ಲಿ ಹಣದ ಆಮಿಷ ಒಡ್ಡುವ ಮೇಸಜ್‌ಗಳಿಗೆ ಕಿವಿಗೊಡಬಾರದು. ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆ ವಿವರ, ಒಟಿಪಿಗಳನ್ನಾಗಲಿ ಅನಾಮಧೇಯ ವ್ಯಕ್ತಿಗಳಿಗೆ ನೀಡಬಾರದು.
-ಲಕ್ಷ್ಮೀನಾರಾಯಣ, ವೃತ್ತ ನಿರೀಕ್ಷಕ, ಸೈಬರ್ ಕ್ರೈಂ ಪೊಲೀಸ್ ಠಾಣೆ
-ನಾಗೇಂದ್ರ ಕೆ.