Advertisement

Online Scam:ʻಜಮ್ತಾರಾʼ ಮಾದರಿ ವಂಚನೆಯಲ್ಲಿ 99,999 ರೂ. ಕಳೆದುಕೊಂಡ ಸಂಸದ ದಯಾನಿಧಿ ಮಾರನ್‌

07:17 PM Oct 10, 2023 | Pranav MS |

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆಗಳು ತೀರಾ ಸಾಮಾನ್ಯ ಎನ್ನುವಂತಾಗಿದೆ. ಬಡವ, ಶ್ರೀಮಂತ, ಅಕ್ಷರಸ್ಥ, ಅನಕ್ಷರಸ್ಥ ಎನ್ನದೆ ಆನ್‌ಲೈನ್‌ ವಂಚಕರು ಜನರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ.

Advertisement

ಇದೀಗ ಆನ್‌ಲೈನ್‌ ವಂಚನೆಯ ಬಿಸಿ ತಮಿಳುನಾಡು ಸಂಸದ, ಡಿಎಂಕೆ ಮುಖಂಡ ದಯಾನಿಧಿ ಮಾರನ್‌ ಅವರಿಗೂ ತಟ್ಟಿದೆ. ಜಮ್ತಾರಾ ವಂಚನೆಯ ಮಾದರಿಯಲ್ಲೇ ನಡೆದ ವಂಚನೆಯಲ್ಲಿ ಮಾರನ್‌ 99,999 ರೂ. ಗಳನ್ನು ಕಳೆದುಕೊಂಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿರುವ ದಯಾನಿಧಿ ಮಾರನ್‌, ʻತನ್ನ ಪತ್ನಿ ಪ್ರಿಯ ಮಾರನ್‌ ಅವರಿಗೆ ಆದಿತ್ಯವಾರ ಅಪರಿಚಿತ ಫೋನ್‌ ಕರೆಯೊಂದು ಬಂದಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ರೂ.99,999 ಹಣವನ್ನು ವರ್ಗಾಯಿಸುವಂತೆ ಹೇಳಿದ್ದಾರೆ. ಪ್ರಿಯಾ ಅವರಿಗೆ 3 ಬಾರಿ ಈ ರೀತಿಯ ಕರೆಗಳು ಬಂದಿದ್ದು, ಅವರು ಯಾವುದೇ ರೀತಿಯ OTP , ಇತರೆ ಮಾಹಿತಿಗಳನ್ನು ಹಂಚಿಕೊಂಡಿಲ್ಲʼ ಎಂದು ಹೇಳಿದ್ದಾರೆ.

ದಯಾನಿಧಿ ಮಾರನ್‌ ಮತ್ತು ಪತ್ನಿ ಪ್ರಿಯಾ ಇಬ್ಬರೂ ಹೊಂದಿದ್ದ ಆಕ್ಸಿಸ್‌ ಬ್ಯಾಂಕ್‌ನ ಜಂಟಿ ಅಕೌಂಟ್‌ನಿಂದ ರೂ. 99,999 ವರ್ಗಾವಣೆಯಾಗಿದೆ. ಈ ಅಕೌಂಟ್‌ಗೆ ಪ್ರಿಯಾ ಅವರ ಫೋನ್‌ ನಂಬರ್‌ ಲಿಂಕ್‌ ಆಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಕರೆ ಮಾಡಿದ್ದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದು, ಹಣಕ್ಕೆ ಬೇಡಿಕೆಯಿಟ್ಟಾಗ ಆತನಿಗೆ ನೇರವಾಗಿ ತಮ್ಮ ಪತಿಯನ್ನು ಸಂಪರ್ಕಿಸುವಂತೆ ಪ್ರಿಯಾ ತಿಳಿಸಿದ್ದಾರೆ.

Advertisement

ಅದೇ ದಿನ ಪ್ರಿಯಾ ಅವರಿಗೆ ಇನ್ನೆರಡು ನಂಬರ್‌ಗಳಿಂದ ಕರೆಗಳು ಬಂದಿದ್ದು ಕೆಲವೇ ಹೊತ್ತಿನಲ್ಲಿ ದಯಾನಿಧಿ ಅವರಿಗೆ ತಮ್ಮ ಎಕೌಂಟ್‌ನಿಂದ 99,999 ರೂ. ವರ್ಗಾವಣೆಯಾಗಿರುವ SMS ಬಂದಿತ್ತು.

ದಯಾನಿಧಿ ಮಾರನ್‌ ಈ ಕುರಿತು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

 ಏನಿದು ಜಮ್ತಾರಾ ಮಾದರಿ ವಂಚನೆ?

ಜಮ್ತಾರಾ ಎಂಬುದು ಜಾರ್ಖಂಡ್‌ನ ಒಂದು ನಗರವಾಗಿದ್ದು ಇಲ್ಲಿನ ವಂಚಕರು ಸಾಮಾನ್ಯವಾಗಿ ಜನರನ್ನು ವಂಚಿಸಲು ಸಾಮಾಜಿಕ ಎಂಜಿನಿಯರಿಂಗ್‌ನಂತಹ ತಂತ್ರಗಳನ್ನು ಬಳಸುತ್ತಾರೆ. ಅಲ್ಲಿ ಅವರು ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿ ತಮ್ಮನ್ನು ನಂಬುವಂತೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಜಮ್ತಾರಾ ಶೈಲಿಯ ವಂಚಕರು ಭಾರತದ ಇತರ ಭಾಗಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಇದು ಒಂದು ಪ್ರಮುಖ ಸವಾಲಾಗಿದ್ದು ಈ ವಂಚಕರನ್ನು ಹತ್ತಿಕ್ಕಲು ಮತ್ತು ಅವರ ಕಾರ್ಯಾಚರಣೆಗಳನ್ನು ಕೆಡವಲು ಹಲವಾರು ಪ್ರಯತ್ನಗಳು ನಡೆದಿವೆ. ಜಮ್ತಾರಾ ವಂಚಕರು ತಮ್ಮ ಸೆಲ್‌ಫೋನ್ ಸಂಖ್ಯೆಯನ್ನು ಬಹುತೇಕ ಬ್ಯಾಂಕ್‌ಗಳಿಗೆ ಗ್ರಾಹಕ ಸೇವಾ ಸಂಖ್ಯೆ (ಕಸ್ಟಮರ್‌ ಕೇರ್‌) ಗಳಾಗಿ ಪ್ರಕಟಿಸುತ್ತಾರೆ. ಬ್ಯಾಂಕ್‌ಗಳು ಅಥವಾ ಆನ್‌ಲೈನ್ ವ್ಯಾಪಾರದ ಬಗ್ಗೆ ಜನರು  ಸೇವಾ ಮಾಹಿತಿಯನ್ನು ಹುಡುಕುತ್ತಿರುವಾಗ ಇಂತಹ ನಕಲಿ ಸಂಖ್ಯೆಗಳಿಂದಾಗಿ ಸೈಬರ್ ವಂಚನೆಗೆ ಬಲಿಯಾಗುತ್ತಾರೆ.

ಇದನ್ನೂ ಓದಿ: Ironman 70.3 Goa: ಸ್ಪರ್ಧೆಯ ವೇಳೆ ಕುಸಿದು ಬಿದ್ದು ಮೃತಪಟ್ಟ ಸ್ಪರ್ಧಿ

Advertisement

Udayavani is now on Telegram. Click here to join our channel and stay updated with the latest news.

Next