Advertisement

Online Fraud : ಬ್ಯಾಂಕ್‌ ಅಧಿಕಾರಿಗಳ ಜತೆ ಪೊಲೀಸ್‌ ಕಮಿಷನರ್‌ ಸಭೆ

01:14 AM Jul 14, 2024 | Team Udayavani |

ಮಂಗಳೂರು: ಆನ್‌ಲೈನ್‌ನಲ್ಲಿ ನಡೆಯುವ ಹಣಕಾಸು ವಂಚನೆಗಳ ಪತ್ತೆ ಹಾಗೂ ಪ್ರಕರಣವನ್ನು ಭೇದಿಸಲು ಬ್ಯಾಂಕ್‌ಗಳಿಂದ ಪೊಲೀಸ್‌ ಇಲಾಖೆಗೆ ಬೇಕಾಗುವ ದತ್ತಾಂಶಸಹಿತವಾದ ಮಾಹಿತಿಯನ್ನು ತ್ವರಿತವಾಗಿ ನೀಡಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ.

Advertisement

ಶನಿವಾರ ಈ ಬಗ್ಗೆ ಕಮಿಷನರೆಟ್‌ ವ್ಯಾಪ್ತಿಯ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದ ಅವರು, ಆನ್‌ಲೈನ್‌ ವಂಚನೆ ಪ್ರಕರಣಗಳು ನಡೆದಾಗ ಅವುಗಳನ್ನು ಪತ್ತೆ ಮಾಡಿ ತನಿಖೆ ನಡೆಸಲು ಬ್ಯಾಂಕ್‌ಗಳಲ್ಲಿ ನಿರ್ದಿಷ್ಟ ಖಾತೆಗಳಲ್ಲಿ ನಡೆದಿರುವ ಹಣಕಾಸು ವಹಿವಾಟಿನ ವಿವರಗಳು ತುರ್ತಾಗಿ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಇದು ಶೀಘ್ರವಾಗಿ ದೊರೆಯುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚನೆ ನೀಡಿದರು.

“ಗೋಲ್ಡನ್‌ ಅವರ್‌’ನಲ್ಲೇ ಸ್ಪಂದಿಸಿ
ಪೊಲೀಸರು ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ವಂಚಕರ ಖಾತೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಇದಕ್ಕೆ ತೀರಾ ಕಡಿಮೆ ಸಮಯದ ಮಿತಿ ಇದೆ. ಇಂತಹ “ಗೋಲ್ಡನ್‌ ಅವರ್‌’ನಲ್ಲಿ ಬ್ಯಾಂಕ್‌ಗಳ ಸಹಕಾರ ತೀರಾ ಅಗತ್ಯ. ಆ ಅವಧಿಯಲ್ಲಿ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ನೋಡೆಲ್‌ ಅಧಿಕಾರಿಗಳ ನೇಮಕ
ನಿರ್ದಿಷ್ಟ ನಮೂನೆಯಲ್ಲಿ ವಿವರಗಳನ್ನು ಕೇಳುವ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ ಶೀಘ್ರ ಮಾಹಿತಿ ವಿನಿಮಯಕ್ಕಾಗಿ ಬ್ಯಾಂಕ್‌ ಮತ್ತು ಪೊಲೀಸ್‌ ಇಲಾಖೆ ಕಡೆಯಿಂದ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಅದರಂತೆ ಪೊಲೀಸ್‌ ಇಲಾಖೆ ವತಿಯಿಂದ ಎಲ್ಲ ಎಸಿಪಿಗಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನಿಯೋಜಿಸಲು ತೀರ್ಮಾನಿಸಲಾಯಿತು.
ಡಿಸಿಪಿಗಳಾದ ಸಿದ್ದಾರ್ಥ ಗೋಯಲ್‌, ಬಿ.ಪಿ.ದಿನೇಶ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಸಂಶಯಾಸ್ಪದ ಅಕೌಂಟ್‌ ಮಾಹಿತಿಗೂ ಸೂಚನೆ
ಯಾವುದೇ ಬ್ಯಾಂಕ್‌ನ ಯಾವುದೇ ಖಾತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಹಿವಾಟು ನಡೆಯುತ್ತಿದ್ದರೆ ಅದರ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next