Advertisement

Vijayapura ಆನ್‍ಲೈನ್ ವಂಚನೆ: ಕೀನ್ಯಾ, ನೈಜೀರಿಯಾದ 8 ಪ್ರಜೆಗಳ ಬಂಧನ

04:06 PM Nov 13, 2023 | keerthan |

ವಿಜಯಪುರ: ಆನ್ ಲೈನ್ ಮೂಲಕ ಹಣ ಪಡೆದು ವಂಚನೆ ನಡೆಸಿದ ಆರೋಪದಲ್ಲಿ ವಿಜಯಪುರ ಜಿಲ್ಲೆಯ ಸಿ.ಇ.ಎನ್. ಅಪರಾಧ ವಿಭಾಗದ ಪೊಲೀಸರು ಕೀನ್ಯಾ ದೇಶದ ಐವರು ಹಾಗೂ ನೈಜೀರಿಯಾ ದೇಶದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಕ್ರಿಬ್ಕೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದಲ್ಲಿ ಶೇಕಡಾ 200 ರಷ್ಟು ಲಾಭಾಂಶ ನೀಡುವುದಾಗಿ ವಿಜಯಪುರ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಆರೋಪಿಗಳು ನಂಬಿಸಿದ್ದರು. ಅನಾಮಧೇಯ ಆನ್‍ಲೈನ್ ಆರ್ಥಿಕ ವಂಚಕರ ಮಾತನ್ನು ನಂಬಿದ ನಗರದ ಉದ್ಯಮಿ ಹಂತ ಹಂತವಾಗಿ ತಮ್ಮ ಬ್ಯಾಂಕ್ ಖಾತೆಗೆ 59.12 ಲಕ್ಷ ರೂ.ಗಳನ್ನು ಜಮೆ ಮಾಡಿದ್ದರು. ಹಣ ಸಂದಾಯ ಮಾಡಿಸಿಕೊಂಡ ಆರೋಪಿಗಳು ಉದ್ಯಮಿಗೆ ಯಾವುದೇ ಲಾಭಾಂಶ ನೀಡಿರಲಿಲ್ಲ ಎಂದರು.

ಈ ಕುರಿತು ಬಾಧಿತ ಉದ್ಯಮಿ ವಿಜಯಪುರ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ಸಿಇಎನ್ ಅಪರಾಧ ಠಾಣೆ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ಮಲ್ಲಿಕಾರ್ಜುನ ತಳವಾಡ, ಪಿ.ವೈ.ಅಂಬಿಗೇರ ಇವರೊಂದಿಗೆ ಇತರೆ 17 ಜನರ ತನಿಖಾ ತಂಡವನ್ನು ರಚಿಸಲಾಗಿತ್ತು.

ರಮೇಶ ಅವಜಿ ನೇತೃತ್ವದ ಪೊಲೀಸ್ ತಂಡ ತಾಂತ್ರಿಕ ಸಾಕ್ಷಾಧಾರಗಳಾದ ಮೊಬೈಲ್ ಸಿಡಿಆರ್, ಲೊಕೇಶನ್, ಮೊಬೈಲ್ ಸಿಮ್ ಗ್ರಾಹಕರ ನೊಂದಣಿ ಸೇರಿದಂತೆ ಇತರೆ ಮಾಹಿತಿಯನ್ನು ಆಧರಿಸಿ ತನಿಖೆಗೆ ಇಳಿದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸದರಿ ಆನ್‍ಲೈನ್ ವಂಚನೆ ಪ್ರಕರಣದಲ್ಲಿ ಆಕ್ಟೋಬರ್ 6 ರಂದು ಕೀನ್ಯಾ ದೇಶದ ಐವರು ಪ್ರಜೆಗಳನ್ನು ಬಂಧಿಸಲಾಗಿತ್ತು. ಇದೀಗ ನೈಜೀರಿಯಾ ದೇಶದ ಮೂವರು ಪ್ರಜೆಗಳನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಮೂವರೂ ಆರೋಪಿಗಳು ನೈಜೀರಿಯಾ ದೇಶದ ವಿವಿಧ ಪ್ರಾಂತ್ಯಗಳ ಪ್ರಜೆಗಳು. ಈ ಮೂವರು ಆರೋಪಿಗಳು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದರು. ಇದರಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ಆನೇಲಕ್ ತಲೂಕಿನ ಸಿ.ಕೆ.ಪಾಳ್ಯದಲ್ಲಿ ನೆಲೆಸಿದ್ದ ಎಡೋ ರಾಜ್ಯದ ಎಕಪೋಮ್ ಮೂಲದ 38 ವರ್ಷದ ಓಸೆಮುದಿಯಾಮೆನ್ ಉರ್ಫ ಪೀಟರ್ , ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ ನೆಲೆಸಿದ್ದ ಅನಂಬಾರ್ ರಾಜ್ಯದ ಓಟೊಲೋ ಸಿಟಿಯ ಎನ್‍ನಿವಿ ಮೂಲದ 40 ವರ್ಷದ ಎಮೆಕಾ ಉರ್ಫ್ ಹ್ಯಾಪಿ, ನೀಲಸಂದ್ರದ ಮಾರುಕಟ್ಟೆ ರಸ್ತೆಯಲ್ಲಿ ನೆಲೆಸಿದ್ದ ಅಬಿಯಾ ರಾಜ್ಯದ ಎಫ್‍ಸಿಟಿ ಅಬುಜಾದ ಅಮುರಿಯಾ ಎನ್‍ಕೋರೊ ಮೂಲದ 42 ವರ್ಷದ ಓಬಿನ್ನಾ ಸ್ಟ್ಯಾನ್ಲಿ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ನೈಜೀರಿಯಾದ ಮೂವರು ಪ್ರಜೆಗಳಿಂದ ಅನ್‍ಲೈನ್ ಆರ್ಥಿಕ ವಂಚನೆ ಕೃತ್ಯಕ್ಕೆ ಬಳಸಿದ್ದ 21 ಮೊಬೈಲ್, 18 ಸಿಮ್ ಕಾರ್ಡ್‍ಗಳು, 1 ಲ್ಯಾಪ್ ಟಾಪ್, 1 ಡಾಂಗಾಲ್, 2 ಪೆನ್‍ಡ್ರೈವ್‍ಗಳು, 2 ಎಟಿಎಂ ಕಾರ್ಡ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ವಂಚನೆಯಿಂದ ಸಂಗ್ರಹಿಸಿ ಹಣವನ್ನು ಸಂರಕ್ಷಿಸುವ ಉದ್ದೇಶದಿಂದ ಬಂಧಿತರ ಬ್ಯಾಂಕ್ ಖಾತೆಗಳಿಂದ ಹಣ ಪಡೆಯದಂತೆ ಖಾತೆಗಳನ್ನು ಫ್ರೀಸ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next