Advertisement

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

01:51 AM Sep 30, 2024 | Team Udayavani |

ಬೆಂಗಳೂರು: ನೋವು ನಿವಾರಕ (ಪೇನ್‌ ಕಿಲ್ಲರ್‌) ಔಷಧಗಳ ಮೇಲೆ ಕಣ್ಣಿಟ್ಟಿರುವ ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅತೀ ಹೆಚ್ಚಾಗಿ ಬಳಕೆಯಾಗುವ ನೋವು ನಿವಾರಕ ಮಾತ್ರೆಗಳನ್ನೇ “ನಶೆ’ ಏರಿಸಿ ಕೊಳ್ಳಲು ಬಳಸಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇದಕ್ಕೆ ಅಂಕೆ ಹಾಕಲು ಕರ್ನಾಟಕ ಔಷಧ ನಿಯಂತ್ರಕ ಇಲಾಖೆಯು “ಆನ್‌ಲೈನ್‌ ಟ್ರ್ಯಾಕಿಂಗ್‌’ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

Advertisement

ಇದರಿಂದಾಗಿ ನೀವು ವೈದ್ಯರ ಚೀಟಿ ಇಲ್ಲದೆ ನಿರ್ದಿಷ್ಟ ನೋವು ನಿವಾರಕಗಳನ್ನು ಖರೀದಿಸುವ ಹಾಗಿಲ್ಲ ಹಾಗೂ ನಿಮ್ಮ ವಿವರಗಳನ್ನು ಔಷಧ ಅಂಗಡಿಯವರಿಗೆ ನೀಡಬೇಕಾಗುತ್ತದೆ. ಅಂದರೆ ಈ ನೋವು ನಿವಾರಕ ಮಾತ್ರೆಗಳ ನೈಜ ದತ್ತಾಂಶ
ಆಧಾರಿತ ಮಾಹಿತಿಯ ನಿರ್ವಹಣೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಟಪೆಂಟಾಡಾಲ್‌ ಜನರಿಕ್‌ ಹೆಸರಿನ 30ರಿಂದ 40 ಕಂಪೆನಿಗಳ ನೋವು ನಿವಾರಕ ಮಾತ್ರೆಗಳು ವೈದ್ಯರ ಸಲಹೆ ಚೀಟಿ ಇಲ್ಲದೆಯೂ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿವೆ.

ಮೊದಲ ಹಂತದಲ್ಲಿ ಟಪೆಂಟಾಡಾಲ್‌ ಜನರಿಕ್‌ನ ವಿವಿಧ ಮಾತ್ರೆಗಳ ಮಾರಾಟದ ಮೇಲೆ ಕರ್ನಾಟಕ ಔಷಧ ನಿಯಂತ್ರಕ ಇಲಾಖೆ ಕಣ್ಣಿಟ್ಟಿದ್ದು, ಮುಂದಿನ ಹಂತದಲ್ಲಿ ಎಲ್ಲ ಬಗೆಯ ನೋವು ನಿವಾರಕಗಳ ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 53 ಸಾವಿರ ಔಷಧ ಅಂಗಡಿಗಳು: ರಾಜ್ಯದಲ್ಲಿ ಒಟ್ಟು 53 ಸಾವಿರ ಚಿಲ್ಲರೆ ಮತ್ತು ಸಗಟು ಔಷಧ ಮಾರಾಟ ಮಳಿಗೆಗಳಿವೆ. ಎಲ್ಲ ಮಳಿಗೆಗಳನ್ನು ಆನ್‌ಲೈನ್‌ ಟ್ರ್ಯಾಕಿಂಗ್‌ ವ್ಯವಸ್ಥೆಯಡಿ ತರಲಾಗುವುದು. ಮೊದಲ ಹಂತದಲ್ಲಿ ಸಗಟು ವ್ಯಾಪಾರಿಗಳಿಂದ ಸರಬರಾಜುಗೊಂಡ ಮಾತ್ರೆಗಳ ದಾಸ್ತಾನಿನ ಸಂಪೂರ್ಣ ವಿವರವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಇನ್ನು ಚಿಲ್ಲರೆ ಔಷಧ ಅಂಗಡಿಗಳು ಯಾವ ರೋಗಿಗೆ, ಯಾವ ವೈದ್ಯರ ಶಿಫಾರಸಿನ ಮೇರೆಗೆ ಎಷ್ಟು ಮಾತ್ರೆ ವಿತರಿಸಲಾಗಿದೆ ಎನ್ನುವ ಮಾಹಿತಿಯನ್ನೂ° ಪ್ರತಿನಿತ್ಯ ಅಪ್‌ಲೋಡ್‌ ಮಾಡಬೇಕಿದೆ.

Advertisement

ಹದ್ದಿನ ಕಣ್ಣು, ಪರವಾನಿಗೆ ರದ್ದು: ಕರ್ನಾಟಕ ಔಷಧ ನಿಯಂತ್ರಕ ಇಲಾಖೆ ಅಧಿಕಾರಿಗಳು ನಿರಂತರವಾಗಿ ಸಗಟು-ಚಿಲ್ಲರೆ ವ್ಯಾಪಾರಿಗಳ ನಡುವಿನ ಬೇಡಿಕೆ ಹಾಗೂ ಪೂರೈಕೆಯ ದತ್ತಾಂಶವನ್ನು ಪರಿಶೀಲನೆ ಮಾಡಲಿದ್ದಾರೆ. ಈ ವೇಳೆ ಕಾನೂನು ಬಾಹಿರವಾಗಿ ಮಾರಾಟ ವರದಿಯಾದರೆ ತತ್‌ಕ್ಷಣ ಔಷಧ ಅಂಗಡಿಯನ್ನು ತಪಾಸಣೆ ನಡೆಸಿ, ನಿಯಮ ಉಲ್ಲಂ ಸಿದರೆ ಪರವಾನಿಗೆ ರದ್ದುಗೊಳಿಸಲಾಗುತ್ತದೆ.

ಶೇ.50ರಷ್ಟು ಮಾರಾಟಕ್ಕೆ ಕಡಿವಾಣ: ವೈದ್ಯರ ಅನುಮತಿ ಚೀಟಿ ಇಲ್ಲದೇ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಕಟ್ಟುನಿಟ್ಟಾಗಿರುವುದು ಮತ್ತು ದಾಸ್ತಾನಿನ ಬಗ್ಗೆ ಪ್ರತಿನಿತ್ಯ ಮಾಹಿತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶೇ. 50ರಷ್ಟು ಅನಧಿಕೃತ ಮಾರಾಟಕ್ಕೆ ಕಡಿವಾಣ ಬಿದ್ದಿದೆ.

ನೋವು ನಿವಾರಕ ನಶೆ ಏರಿಕೆ? ಮಾದಕ ವಸ್ತುಗಳು ದುಬಾರಿಯಾಗಿದ್ದು, ಕಡಿಮೆ ಬೆಲೆಯಲ್ಲಿ ನಶೆ ಏರಿಸಿಕೊಳ್ಳಲು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೆಲ ನೋವು ನಿವಾರಕ ಮಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ವರದಿಯಾಗುವ 100 ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಶೇ. 50ರಷ್ಟು ಪ್ರಕರಣ ನೋವು ನಿವಾರಕ ಮಾತ್ರೆ ಸೇವಿಸಿ ಚಟ ಹಿಡಿಸಿಕೊಂಡವರು ಇದ್ದಾರೆ ಎಂದು ಮನೋವೈದ್ಯೆ ಡಾ| ಶ್ರದ್ಧಾ ಸಜೇಕರ್‌ ತಿಳಿಸಿದ್ದಾರೆ.

ಏನಿದು ಆನ್‌ಲೈನ್‌ ಟ್ರ್ಯಾಕಿಂಗ್‌?
ಪ್ರತಿನಿತ್ಯ ಸಗಟು ಔಷಧ ವಿತರಕರಿಂದ ಚಿಲ್ಲರೆ ಔಷಧ ಮಳಿಗೆಗೆ ಎಷ್ಟು ಪ್ರಮಾಣದಲ್ಲಿ ನೋವು ನಿವಾರಕ ಮಾತ್ರೆಗಳನ್ನು ವಿತರಿಸಲಾಗಿದೆ? ದಾಸ್ತಾನು ಎಷ್ಟಿದೆ? ಇತ್ಯಾದಿ ಅಂಕಿ-ಅಂಶಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲಾಗುತ್ತದೆ. ಇದರಿಂದಾಗಿ ಯಾವುದೇ ಒಂದು ಮೆಡಿಕಲ್‌ ಶಾಪ್‌ನಲ್ಲಿ ಎಷ್ಟು ದಾಸ್ತಾನು ಇದೆ, ಯಾವ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂಬ ಖಚಿತ ವಿವರ ಲಭ್ಯವಾಗುತ್ತದೆ. ಅನುಮಾನಾಸ್ಪದ ಮಾರಾಟವಾಗುತ್ತಿದ್ದರೆ ಕೂಡಲೇ ಕಡಿವಾಣ ಹಾಕಲು ಅನುಕೂಲವಾಗುತ್ತದೆ.

2 ವಾರದಲ್ಲಿ ಶೇ. 50 ಕುಸಿತ
ಆನ್‌ಲೈನ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಜಾರಿಯಾದ ಎರಡೇ ವಾರದಲ್ಲಿ ರಾಜ್ಯಾದ್ಯಂತ ಕಾನೂನುಬಾಹಿರ ನೋವು ನಿವಾರಕ ಮಾತ್ರೆಗಳ ಮಾರಾಟ ಶೇ. 50ರಷ್ಟು ಕುಸಿತ ಕಂಡಿದೆ. ನೋವು ನಿವಾರಕ ಮಾತ್ರೆ ಮಾರಾಟದಲ್ಲಿ ವ್ಯತ್ಯಾಸ ಕಂಡು ಬಂದಿರುವ ಬೆಂಗಳೂರಿನ 7 ಅಂಗಡಿಗಳಪರವಾನಿಗೆ ರದ್ದುಗೊಳಿಸಲಾಗಿದೆ.
-ಡಾ| ಉಮೇಶ್‌, ಡ್ರಗ್‌ ಕಂಟ್ರೋಲರ್‌,
ಔಷಧ ನಿಯಂತ್ರಕ ಇಲಾಖೆ

-  ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next